ಅಮೆರಿಕದಲ್ಲಿ ಪ್ರತಿಭಟನೆಯ ಬೆನ್ನಲ್ಲೇ ಶುರುವಾಯ್ತು ರಾಜೀನಾಮೆ ಪರ್ವ
ವಾಷಿಂಗ್ಟನ್, ಜನವರಿ 7: ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಬೆಂಬಲಿಗರು ಬುಧವಾರ ನಡೆಸಿರುವ ಹಿಂಸಾತ್ಮಕ ಪ್ರತಿಭಟನೆ ಆಡಳಿತ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿದೆ. ಟ್ರಂಪ್ ಬೆಂಬಲಿಗರ ದಾಂಧಲೆ ವಿರೋಧಿಸಿ ಶ್ವೇತಭವನದ ಅಧಿಕಾರಿಗಳು ರಾಜೀನಾಮೆಗೆ ಮುಂದಾಗುತ್ತಿದ್ದಾರೆ.
ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಸಿಬ್ಬಂದಿ ಮುಖ್ಯಸ್ಥೆ ಮತ್ತು ಪತ್ರಿಕಾ ಕಾರ್ಯದರ್ಶಿ ಸ್ಟೀಫನಿ ಗ್ರಿಷಮ್ ತಕ್ಷಣದಿಂದ ಅನ್ವಯವಾಗುವಂತೆ ರಾಜೀನಾಮೆ ನೀಡಿದ್ದಾರೆ. ಉಪ ಪತ್ರಿಕಾ ಕಾರ್ಯದರ್ಶಿ ಸಾರಾ ಮ್ಯಾಥ್ಯೂಸ್ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಶ್ವೇತಭವನದ ಸಾಮಾಜಿಕ ಕಾರ್ಯದರ್ಶಿ ಅನ್ನಾ ಕ್ರಿಸ್ಟಿನಾ ರಿಕ್ಕಿ ನಿಸೆಟಾ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇವರಿಬ್ಬರೂ ಟ್ರಂಪ್ ಆಡಳಿತದಲ್ಲಿ ಅತಿ ಸುದೀರ್ಘಾವಧಿ ಕಾರ್ಯನಿರ್ವಹಿಸಿದ ಅಧಿಕಾರಿಗಳಾಗಿದ್ದಾರೆ.
ಅಮೆರಿಕದಲ್ಲಿ ಪ್ರತಿಭಟನೆ, ಹಿಂಸಾಚಾರ: ಪ್ರಧಾನಿ ಮೋದಿ ಕಳವಳ
ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಓಬ್ರಿಯಾನ್ ಸೇರಿದಂತೆ ಟ್ರಂಪ್ ಅವರ ಪ್ರಮುಖ ಸಹವರ್ತಿಗಳಾಗಿದ್ದ ಅನೇಕರು ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ. ಓಬ್ರಿಯಾನ್ ಅವರ ಜತೆಗೆ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ, ಮ್ಯಾಟ್ ಪೊಟ್ಟಿಂಗರ್ ಮತ್ತು ಉಪ ಸಿಬ್ಬಂದಿ ಮುಖ್ಯಸ್ಥ ಕ್ರಿಸ್ ಲಿಡ್ಡೆಲ್ ಕೂಡ ಇದೇ ಚಿಂತನೆಯಲ್ಲಿದ್ದಾರೆ ಎಂಂದು ಮೂಲಗಳು ತಿಳಿಸಿವೆ.
ಟ್ರಂಪ್ ಅವರು ತಮ್ಮ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದರೆ, ಉಪಾಧ್ಯಕ್ಷ ಮೈಕ್ ಪೆನ್ಸ್, ಜೋ ಬೈಡನ್ ಅವರ ಗೆಲುವಿನ ಪ್ರಮಾಣೀಕರಣಕ್ಕೆ ಮುಂದಾಗಿದ್ದರು. ಟ್ರಂಪ್ ಬೆಂಬಲಿಗ ಓಬ್ರಿಯಾನ್ ಕೂಡ ಮೈಕ್ ಪೆನ್ಸ್ ನಡೆಯನ್ನು ಬೆಂಬಲಿಸಿದ್ದರು. ಟ್ರಂಪ್ ಕಿಡಿಕಾರಿದ್ದರೂ ಪೆನ್ಸ್ ತಮ್ಮ ಧೈರ್ಯ ಪ್ರದರ್ಶಿಸಿದ್ದಾರೆ ಎಂದು ಓಬ್ರಿಯಾನ್ ಹೇಳಿದ್ದಾರೆ. ಇದರಿಂದ ಟ್ರಂಪ್ ಅವರು ತಮ್ಮದೇ ಪಕ್ಷದ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳಿಂದ ವಿರೋಧ ಎದುರಿಸುವಂತಾಗಿದೆ.
ಯುಎಸ್ ಕ್ಯಾಪಿಟಲ್ಗೆ ಮುತ್ತಿಗೆ ಹಾಕಿ ಟ್ರಂಪ್ ಬೆಂಬಲಿಗರ ಪ್ರತಿಭಟನೆ, ಕೋಲಾಹಲ
ಪ್ರತಿಭಟನೆ ನಡೆಸುತ್ತಿರುವ ಬೆಂಬಲಿಗರಿಗೆ ಮತ್ತಷ್ಟು ಕುಮ್ಮಕ್ಕು ನೀಡುತ್ತಿರುವ ಟ್ರಂಪ್, ಯುಎಸ್ ಕ್ಯಾಪಿಟಲ್ ನಲ್ಲಿ ಅವರು ನಡೆಸಿದ ಸಂಘರ್ಷವನ್ನು ಸಮರ್ಥಿಸಿಕೊಂಡಿದ್ದಾರೆ.