ಫೈಜರ್ ಮಾತ್ರೆ ಸೇವಿಸಿದರೆ ಶೇ.89ರಷ್ಟು ಕೊವಿಡ್-19 ಅಪಾಯ ಕಡಿಮೆ
ವಾಶಿಂಗ್ಟನ್, ನವೆಂಬರ್ 5: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಕಡಿವಾಣಕ್ಕೆ ಫೈಜರ್ ಕಂಪನಿಯ ಪ್ರಾಯೋಗಿಕ ಆಂಟಿವೈರಲ್ ಮಾತ್ರೆಯು ಪರಿಣಾಮಕಾರಿಯಾಗಿದೆ ಎಂದು ಕಂಪನಿ ತಿಳಿಸಿದೆ. ಕೊವಿಡ್-19 ಸೋಂಕು ತಗುಲಿದ ವ್ಯಕ್ತಿಯಲ್ಲಿ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮತ್ತು ಸಾವಿನ ಅಪಾಯವನ್ನು ಶೇ.89ರಷ್ಟು ತಗ್ಗಿಸುತ್ತದೆ ಎಂದು ಫೈಜರ್ ಹೇಳಿದೆ.
ಕೊವಿಡ್-19 ಸೋಂಕಿನ ಗಂಭೀರ ಅಪಾಯ ಮತ್ತು ಸಾವಿನ ಭೀತಿಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯನ್ನು ಮರ್ಕ್ ಕಂಪನಿಯ ಮೊಲ್ನುಪಿರವಿರ್ ಮಾತ್ರೆಯು ಅರ್ಧದಷ್ಟು ಕಡಿಮೆಗೊಳಿಸಲಿದೆ ಎಂದು ಕಂಪನಿ ಹೇಳಿದೆ. ಫೈಜರ್ ಕಂಪನಿಯ ಮಾತ್ರೆಯು ಮೊಲ್ನುಪಿರವಿರ್ ಮಾತ್ರೆಗಿಂತಲೂ ಪರಿಣಾಮಕಾರಿಯಾಗಿದೆ ಎಂದು ಸಂಸ್ಥೆಯು ತಿಳಿಸಿದೆ.
Explained: ಕೊವಿಡ್-19 ರೋಗ ನಿವಾರಿಸುವುದು ಹೇಗೆ ಮೊಲ್ನುಪಿರವಿರ್ ಮಾತ್ರೆ!?
ಫೈಜರ್ ಕಂಪನಿಯ ಮಾತ್ರೆ ಕುರಿತು ವೈದ್ಯಕೀಯ ಪ್ರಯೋಗದ ಸಂಪೂರ್ಣ ಅಂಕಿ-ಅಂಶಗಳು ಇದುವರೆಗೂ ಲಭ್ಯವಾಗಿಲ್ಲ. ಆದಾಗಲೇ ಫೈಜರ್ ಕಂಪನಿಯ ಷೇರು ದರದಲ್ಲಿ ಶೇ.13ರಷ್ಟು ಏರಿಕೆಯಾಗಿದ್ದು, 49.47 ಡಾಲರ್ ತಲುಪಿದೆ.
ಈ ಹಿಂದೆ ಮರ್ಕ್ ಕಂಪನಿಯು ಕೊವಿಡ್-19 ಮಾತ್ರೆ ಬಗ್ಗೆ ಅನುಮೋದನೆ ಪಡೆಯುತ್ತಿದ್ದಂತೆ ಕಂಪನಿಯ ಷೇರು ದರದಲ್ಲಿ ಶೇ.6ರಷ್ಟು ಏರಿಕೆಯಾಗಿದ್ದು, 84.69 ಡಾಲರ್ ತಲುಪಿತ್ತು.

ಎರಡು ಬಾರಿ ಮೂರು ಮಾತ್ರೆ ಸೇವಿಸಲು ಸಲಹೆ
ಫೈಜರ್ ಕಂಪನಿ ಮಾತ್ರೆಗೆ ಸಂಬಂಧಿಸಿದಂತೆ ನಡೆಸಿದ ಆಂತರಿಕ ವೈದ್ಯಕೀಯ ಪ್ರಯೋಗದ ದತ್ತಾಂಶವನ್ನು ಯುಎಸ್ ಆಹಾರ ಮತ್ತು ಔಷಧೀಯ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ. ಅಕ್ಟೋಬರ್‌ನಲ್ಲಿ ತೆರೆದ ತುರ್ತು ಬಳಕೆಯ ಅಪ್ಲಿಕೇಶನ್‌ನ ಭಾಗವಾಗಿ ರಿಟೊನಾವಿರ್ ಎಂಬ ಹಳೆಯ ಆಂಟಿವೈರಲ್ ಸಂಯೋಜನೆಯೊಂದಿಗೆ ನೀಡಲಾದ ಅದರ ಮಾತ್ರೆಗಾಗಿ ಮಧ್ಯಂತರ ಪ್ರಯೋಗ ಫಲಿತಾಂಶಗಳನ್ನು ಸಲ್ಲಿಸಲು ಯೋಜಿಸಿದೆ ಎಂದು ಫೈಜರ್ ಹೇಳಿದೆ. ಪ್ಯಾಕ್ಸ್ಲೋವಿಡ್ ಎಂಬ ಬ್ರ್ಯಾಂಡ್ ಹೆಸರನ್ನು ಹೊಂದಿರುವ ಸಂಯೋಜನೆಯ ಚಿಕಿತ್ಸೆಯು ದಿನಕ್ಕೆ ಎರಡು ಬಾರಿ ನೀಡಲಾಗುವ ಮೂರು ಮಾತ್ರೆಗಳನ್ನು ಒಳಗೊಂಡಿರುತ್ತದೆ.

ವಯಸ್ಸು ಮತ್ತು ಸ್ಥೂಲಕಾಯದಿಂದ ಹೆಚ್ಚು ಅಪಾಯ
ಫೈಜರ್‌ನ ಅಧ್ಯಯನದಲ್ಲಿ 1,219 ರೋಗಿಗಳ ಮೇಲೆ ವಿಶ್ಲೇಷಣೆ ನಡೆಸಲಾಯಿತು. ಈ ವೇಳೆ ಸೌಮ್ಯ, ಮಧ್ಯಮ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿ ಇರುವ ಎಲ್ಲ ರೋಗಗಳಲ್ಲಿ ಒಂದು ಅಪಾಯಕಾರಿ ಅಂಶವನ್ನು ಪತ್ತೆ ಮಾಡಲಾಗಿದೆ. ಸ್ಥೂಲಕಾಯ ಅಥವಾ ವಯಸ್ಸು ರೋಗದ ತೀವ್ರತೆ ಹಾಗೂ ಆಸ್ಪತ್ರೆ ದಾಖಲಾಗುವಿಕೆ ಜೊತೆಗೆ ಸಾವಿಗೆ ಕಾರಣವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಫೈಜರ್ ಮಾತ್ರೆ ಸೇವಿಸಿದವರ ಸಾವಿನ ಪ್ರಮಾಣ ಎಷ್ಟಿದೆ?
ರೋಗಲಕ್ಷಣಗಳು ಪ್ರಾರಂಭವಾದ ಮೂರು ದಿನಗಳಲ್ಲಿ ಫೈಜರ್ ಔಷಧಿ ಪಡೆದವರಲ್ಲಿ 28 ದಿನಗಳ ನಂತರದಲ್ಲಿ ಶೇ.0.8ರಷ್ಟು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ, ಆದರೆ ಒಬ್ಬರೇ ಒಬ್ಬರು ಸಾವನ್ನಪ್ಪಿಲ್ಲ. ಪ್ಲೇಸ್ಬೊ ಮಾತ್ರೆ ಸೇವಿಸಿದ ಶೇ.7ರಷ್ಟು ರೋಗಿಗಳು ಆಸ್ಪತ್ರೆಗೆ ದಾಖಲಾದರೆ, ಏಳು ಮಂದಿ ಪ್ರಾಣ ಬಿಟ್ಟಿದ್ದಾರೆ. ರೋಗಲಕ್ಷಣಗಳು ಕಾಣಿಸಿಕೊಂಡ ಐದು ದಿನಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳಲ್ಲಿ ಪ್ಲೆಸಿಬೋ ಶೇ.6.7ರಷ್ಟಕ್ಕೆ ಹೋಲಿಸಿದರೆ ಶೇ.1ರಷ್ಟಿದೆ.
ಕೊರೊನಾವೈರಸ್ ಹೆಚ್ಚು ಪರಿಣಾಮಕಾರಿಯಾಗುವ ಮೊದಲು ಸೋಂಕು ಹಿಡಿತಕ್ಕೆ ಬರುವ ನಿಟ್ಟಿನಲ್ಲಿ ಆಂಟಿವೈರಲ್‌ಗಳನ್ನು ಆದಷ್ಟು ಬೇಗ ನೀಡಬೇಕಾಗುತ್ತದೆ. ರೋಗಲಕ್ಷಣ ಪ್ರಾರಂಭವಾದ ಐದು ದಿನಗಳಲ್ಲಿ ಅದರ ಔಷಧವನ್ನು ನೀಡಬೇಕು ಎಂದು ಮೆರ್ಕ್ ತಿಳಿಸಿದೆ.

ಫೈಜರ್ ಮಾತ್ರೆಗಳ ಅಡ್ಡಪರಿಣಾಮಗಳ ಕುರಿತು ತಿಳಿಸಿಲ್ಲ
"ರೋಗಿಗೆ ಚಿಕಿತ್ಸೆ ನೀಡಿದ ಐದು ದಿನಗಳ ನಂತರವೂ ನಾವು ಹೆಚ್ಚಿನ ದಕ್ಷತೆಯನ್ನು ಹೊಂದಿದ್ದೇವೆ ಎಂಬುದನ್ನು ನಾವು ನೋಡಿದ್ದೇವೆ. ಜನರು ವೈದ್ಯಕೀಯ ಪರೀಕ್ಷೆ ಅಥವಾ ಏನನ್ನಾದರೂ ಪಡೆಯುವ ಮೊದಲು ಒಂದೆರಡು ದಿನ ನಿರೀಕ್ಷಿಸಬೇಕು. ಇದರರ್ಥ ಜನರಿಗೆ ಚಿಕಿತ್ಸೆ ನೀಡಲು ನಾವು ಸಾಕಷ್ಟು ಸಮಯವನ್ನು ಹೊಂದಿದ್ದೇವೆ. ಸಾರ್ವಜನಿಕ ಆರೋಗ್ಯ ದೃಷ್ಟಿಕೋನದಿಂದ ಇದು ನಿಜವಾಗಿ ಪ್ರಯೋಜನಕಾರಿಯಾಗುತ್ತದೆ," ಎಂದು ಫಿಜರ್ ಕಾರ್ಯಕ್ರಮದ ಮುಖ್ಯಸ್ಥ ಅನ್ನಾಲೀಸಾ ಆಂಡರ್ಸನ್ ತಿಳಿಸಿದರು.
ಫೈಜರ್ ಕಂಪನಿಯು ಚಿಕಿತ್ಸೆಯ ಅಡ್ಡ ಪರಿಣಾಮಗಳ ಬಗ್ಗೆ ಯಾವುದೇ ರೀತಿ ವಿವರಿಸಲಿಲ್ಲ. ಆದರೆ ಚಿಕಿತ್ಸೆ ಮತ್ತು ಪ್ಲಸೀಬೊ ರೋಗಿಗಳಲ್ಲಿ ಸುಮಾರು ಶೇ.20ರಷ್ಟು ವ್ಯತಿರಿಕ್ತ ಪರಿಣಾಮಗಳನ್ನು ಬೀರಿದ ಘಟನೆಗಳ ಬಗ್ಗೆ ಕಂಪನಿ ಹೇಳಿದೆ.

ಕೊವಿಡ್-19 ನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ
"ಈ ಡೇಟಾವು ನಮ್ಮ ಮೌಖಿಕ ಆಂಟಿವೈರಲ್ ಅಭ್ಯರ್ಥಿಯನ್ನು ನಿಯಂತ್ರಕ ಅಧಿಕಾರಿಗಳಿಂದ ಅನುಮೋದಿಸಿದರೆ, ರೋಗಿಗಳ ಜೀವಗಳನ್ನು ಉಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸೂಚಿಸುತ್ತದೆ. COVID-19 ಸೋಂಕುಗಳ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಹತ್ತರಲ್ಲಿ ಒಂಬತ್ತು ಜನರು ಆಸ್ಪತ್ರೆಗಳಿಗೆ ದಾಖಲಾಗುವುದನ್ನು ತಡೆಯುತ್ತದೆ," ಎಂದು ಫೈಜರ್ ಮುಖ್ಯ ಕಾರ್ಯನಿರ್ವಾಹಕ ಆಲ್ಬರ್ಟ್ ಬೌರ್ಲಾ ತಿಳಿಸಿದ್ದಾರೆ.
2021ರ ಅಂತ್ಯದ ವೇಳೆಗೆ 1,80,000ಕ್ಕೂ ಹೆಚ್ಚು ಪ್ಯಾಕ್‌ಗಳನ್ನು ಮತ್ತು 2022 ರ ಅಂತ್ಯದ ವೇಳೆಗೆ ಕನಿಷ್ಠ 50 ಮಿಲಿಯನ್ ಪ್ಯಾಕ್‌ಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಅದರಲ್ಲಿ 21 ಮಿಲಿಯನ್ ಅನ್ನು ಮೊದಲಾರ್ಧದಲ್ಲಿ ಉತ್ಪಾದಿಸಲಾಗುತ್ತದೆ ಎಂದು ಫೈಜರ್ ಹೇಳಿದೆ. "ನಾವು ಪ್ರಸ್ತುತ ಹೆಚ್ಚುವರಿ ಸಾಮರ್ಥ್ಯವನ್ನು ತರುತ್ತಿದ್ದೇವೆ ಮತ್ತು ಮತ್ತಷ್ಟು ಹೆಚ್ಚಿಸುತ್ತಿದ್ದೇವೆ ಮತ್ತು ಮುಂಬರುವ ವಾರಗಳಲ್ಲಿ ಈ ಸಂಖ್ಯೆಗಳನ್ನು ನವೀಕರಿಸುವುದನ್ನು ಎದುರು ನೋಡುತ್ತಿದ್ದೇವೆ," ಎಂದು ಕಂಪನಿ ತಿಳಿಸಿದೆ.