ಭಾರತೀಯ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ ಬೈಡನ್: ಎಚ್-1ಬಿ ವೀಸಾ ನಿರ್ಬಂಧ ವಿಸ್ತರಣೆ ಇಲ್ಲ
ವಾಷಿಂಗ್ಟನ್, ಏಪ್ರಿಲ್ 1: ಭಾರತದ ಐಟಿ ಉದ್ಯೋಗಿಗಳಿಗೆ ಅಮೆರಿಕದ ಜೋ ಬೈಡನ್ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮುಖ್ಯವಾಗಿ ಎಚ್-1ಬಿ ವೀಸಾದಾರರು ಸೇರಿದಂತೆ ವಿದೇಶಿ ಉದ್ಯೋಗಿಗಳ ಮೇಲೆ ನಿಷೇಧ ವಿಧಿಸಿ ಡೊನಾಲ್ಡ್ ಟ್ರಂಪ್ ಸರ್ಕಾರ ಹೊರಡಿಸಿದ್ದ ಆದೇಶದ ಅವಧಿ ಅಂತ್ಯಗೊಂಡಿದ್ದು, ಬೈಡನ್ ಆಡಳಿತ ಅದನ್ನು ಮುಂದುವರಿಸದೆ ಇರಲು ನಿರ್ಧರಿಸಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಅಮೆರಿಕದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹಾಗೂ ಜಾಗತಿಕ ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾತ್ಕಾಲಿಕ ಅಥವಾ ವಲಸೆಯೇತರ ವೀಸಾ ವರ್ಗದ ಅರ್ಜಿದಾರರ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಇದರಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವ ಎಚ್-1ಬಿ ವೀಸಾ ಕೂಡ ಒಳಗೊಂಡಿತ್ತು.
ಈ ವೀಸಾಗಳು ಆರ್ಥಿಕ ಚೇತರಿಕೆಯ ವೇಳೆ ಅಮೆರಿಕದ ಕಾರ್ಮಿಕ ಮಾರುಕಟ್ಟೆಗೆ ದೊಡ್ಡ ಅಪಾಯ ಉಂಟುಮಾಡುತ್ತಿವೆ ಎಂದು ಟ್ರಂಪ್ ಆಡಳಿತ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.

ತಮ್ಮ ಅಧಿಕಾರಾವಧಿ ಮುಗಿಯುವ ಕೆಲವೇ ದಿನ ಮೊದಲು, ಕಳೆದ ವರ್ಷದ ಡಿಸೆಂಬರ್ 31ರಂದು ಡೊನಾಲ್ಡ್ ಟ್ರಂಪ್ ಈ ನಿಷೇಧವನ್ನು ಮಾರ್ಚ್ 31, 2021ರವರೆಗೂ ವಿಸ್ತರಿಸಿ ಆದೇಶಿಸಿದ್ದರು. ಸಾಂಕ್ರಾಮಿಕವು ಅಮೆರಿಕದ ಜೀವನವನ್ನು ಹಾಳುಗೆಡಿಸುವುದು ಮುಂದುವರಿದಿದೆ. ಅಧಿಕ ಮಟ್ಟದ ನಿರುದ್ಯೋಗ ಹಾಗೂ ಉದ್ಯೋಗ ನಷ್ಟಗಳು ಮುಂದುವರಿದಿದ್ದು, ಅಮೆರಿಕದೆಲ್ಲೆಡೆ ಗಂಭೀರ ಸವಾಲು ಉಂಟುಮಾಡುತ್ತಿದೆ ಎಂದು ಟ್ರಂಪ್ ಹೇಳಿದ್ದರು.
ಈ ಆದೇಶವು ಮಾರ್ಚ್ 31ರಂದು ಅಂತ್ಯಗೊಂಡಿದ್ದು, ಅದನ್ನು ಮತ್ತೆ ವಿಸ್ತರಿಸಲು ಬೈಡನ್ ಆಡಳಿತ ಯಾವುದೇ ಹೊಸ ಆದೇಶ ಹೊರಡಿಸಿಲ್ಲ. ಟ್ರಂಪ್ ಆಡಳಿತದ ವಲಸೆ ನೀತಿಗಳು ಕ್ರೂರವಾಗಿವೆ. ಹೀಗಾಗಿ ಎಚ್-1ಬಿ ವೀಸಾ ಅಮಾನತನ್ನು ಹಿಂದಕ್ಕೆ ಪಡೆಯುವುದಾಗಿ ಜೋ ಬೈಡನ್ ಭರವಸೆ ನೀಡಿದ್ದರು.












Click it and Unblock the Notifications