ಸ್ವಯಂ ಕ್ಷಮಾದಾನಕ್ಕೆ ಮುಂದಾದ ಡೊನಾಲ್ಡ್ ಟ್ರಂಪ್!
ವಾಷಿಂಗ್ಟನ್, ಜನವರಿ 8: ತಮ್ಮ ಅಧ್ಯಕ್ಷಾವಧಿಯ ಕೊನೆಯ ದಿನಗಳಲ್ಲಿ ತಮಗೆ ತಾವು ಕ್ಷಮಾದಾನ ನೀಡಲು ಬಯಸಿರುವುದಾಗಿ ಡೊನಾಲ್ಡ್ ಟ್ರಂಪ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಈ ನಡೆಯು ಅಮೆರಿಕದ ಇರಿಹಾಸದಲ್ಲಿಯೇ ಯಾರೂ ತೆಗೆದುಕೊಳ್ಳದ ಅಧ್ಯಕ್ಷರ ಅಧಿಕಾರದ ಬಳಕೆಯಾಗಲಿದೆ.
ಚುನಾವಣಾ ದಿನದಿಂದಲೂ ತಮ್ಮ ಸಲಹೆಗಾರರ ಜತೆಗೆ ಹಲವು ಬಾರಿ ಮಾತುಕತೆ ನಡೆಸಿರುವ ಟ್ರಂಪ್, ತಮಗೆ ತಾವೇ ಕ್ಷಮಾದಾನ ನೀಡುವುದನ್ನು ಪರಿಗಣಿಸುತ್ತಿರುವುದಾಗಿ ತಿಳಿಸಿದ್ದಾರೆ. ತಾವು ಅದನ್ನು ಮಾಡಬೇಕೇ, ಅದರಿಂದ ಕಾನೂನಾತ್ಮಕವಾಗಿ ಹಾಗೂ ರಾಜಕೀಯವಾಗಿ ಯಾವ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಮುಂತಾದವುಗಳ ಬಗ್ಗೆ ಅಭಿಪ್ರಾಯ ಪಡೆದುಕೊಂಡಿದ್ದಾರೆ.
ತಮ್ಮ ಬೆಂಬಲಿಗರು ಕ್ಯಾಪಿಟಲ್‌ಗೆ ನುಗ್ಗಿ ಹಿಂಸಾಚಾರ ನಡೆಸಿದ ಘಟನೆಗೆ ಪ್ರಚೋದನೆ ನೀಡಿದ್ದಕ್ಕಾಗಿ ಟ್ರಂಪ್ ಈ ವಿಚಾರವಾಗಿ ಕ್ಷಮಾದಾನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದುವರೆಗೂ ಅಮೆರಿಕ ಇತಿಹಾಸದಲ್ಲಿ ಯಾವ ಅಧ್ಯಕ್ಷರೂ ತಮಗೆ ತಾವೇ ಕ್ಷಮಾದಾನ ಕೊಟ್ಟುಕೊಂಡಿಲ್ಲ. ಈ ರೀತಿಯ ಪ್ರಕ್ರಿಯು ನ್ಯಾಯಾಂಗ ವ್ಯವಸ್ಥೆಯಲ್ಲಿ ಎಂದಿಗೂ ಪರೀಕ್ಷೆಗೆ ಒಳಪಟ್ಟಿಲ್ಲ ಮತ್ತು ಅದನ್ನು ಕೋರ್ಟ್ ಮಾನ್ಯ ಮಾಡುತ್ತದೆಯ ಎಂಬ ಬಗ್ಗೆ ಕಾನೂನು ತಜ್ಞರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಅಧ್ಯಕ್ಷರ ಸ್ವಯಂ ಕ್ಷಮಾದಾನವು ಅಧ್ಯಕ್ಷರು ತಾವು ಕಾನೂನಿಗಿಂತ ಮೇಲಿನವರು ಎಂಬುದನ್ನು ಏಕಪಕ್ಷೀಯವಾಗಿ ಘೋಷಿಸಿಕೊಳ್ಳುವ ಮತ್ತು ಕಚೇರಿಯಲ್ಲಿದ್ದಾಗ ಮಾಡಿದ ಯಾವುದೇ ಅಪರಾಧಗಳಿಗೆ ಹೊಣೆಗಾರರಾಗುವುದರಿಂದ ತಪ್ಪಿಸಿಕೊಳ್ಳುವ ಕೆಟ್ಟ ಸಂಪ್ರದಾಯದ ಅಪಾಯಕ್ಕೆ ನಾಂದಿಹಾಡಲಿದೆ ಎಂದು ಹೇಳಿದ್ದಾರೆ.
ತಮ್ಮ ಆಡಳಿತಾವಧಿಯಲ್ಲಿ ನಡೆದ ತಪ್ಪುಗಳು, ಅಪರಾಧಗಳ ವಿರುದ್ಧ ಜೋ ಬೈಡನ್ ಅವರ ಆಡಳಿತ ನ್ಯಾಯಾಂಗ ಇಲಾಖೆ ತನಿಖೆ ನಡೆಸುವ ಭಯ ಇರುವುದರಿಂದ ಟ್ರಂಪ್ ಅವರು ಅಧಿಕಾರದಿಂದ ನಿರ್ಗಮಿಸುವ ಮುನ್ನ ತಮ್ಮ ಮಕ್ಕಳಾದ ಡೊನಾಲ್ಡ್ ಟ್ರಂಪ್ ಜೂನಿಯರ್, ಎರಿಕ್ ಟ್ರಂಪ್, ಇವಾಂಕಾ ಟ್ರಂಪ್, ಇವಾಂಕಾಳ ಪತಿ ಮತ್ತು ಶ್ವೇತಭವನದ ಹಿರಿಯ ಸಲಹೆಗಾರ ಜೇರಡ್ ಕುಶ್ನೆರ್ ಹಾಗೂ ಅಧ್ಯಕ್ಷರ ಖಾಸಗಿ ವಕೀಲ ರೂಡಿ ಗಿಲಾನಿ ಮುಂತಾದ ನಿಕಟವರ್ತಿಗಳಿಗೆ ಕ್ಷಮಾದಾನ ನೀಡಲು ಮುಂದಾಗಿದ್ದಾರೆ.
ಈ ಕ್ಷಮಾದಾನದ ಆದೇಶವನ್ನು ಹೊರಡಿಸಲು ತಮಗೆ ಎಷ್ಟರ ಮಟ್ಟಿಗೆ ಅಧಿಕಾರವಿದೆ ಎಂಬ ಬಗ್ಗೆ ಸಲಹೆಗಾರರನ್ನು ಕೇಳಿರುವ ಟ್ರಂಪ್, ಯಾರನ್ನೆಲ್ಲ ಕ್ಷಮಾದಾನ ಪ್ರಕ್ರಿಯೆಯಲ್ಲಿ ಪರಿಗಣಿಸಬಹುದು ಎಂಬ ಮಾಹಿತಿ ನೀಡುವಂತೆಯೂ ಸೂಚಿಸಿದ್ದಾರೆ.












Click it and Unblock the Notifications