ಅಮೆರಿಕ ಸ್ವಾತಂತ್ರ್ಯೋತ್ಸವ- ಮೂಲನಿವಾಸಿಗಳು ಯಾರು? ಅಮೆರಿಕಾ ಹೆಸರು ಬಂದಿದ್ದೇಗೆ?- ಕೆಲ ಪ್ರಮುಖ ವಿಚಾರಗಳು
ವಿಶ್ವದ ಏಕೈಕ ಸೂಪರ್ ಪವರ್ ರಾಷ್ಟ್ರ ಎನಿಸಿರುವ ಅಮೆರಿಕಕ್ಕೆ ಇಂದು ಜುಲೈ 4ರಂದು 247ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಬ್ರಿಟಿಷ್ ಆಡಳಿತದಿಂದ ಅಮೆರಿಕ ಸ್ವಾತಂತ್ರ್ಯ ಪಡೆದ ದಿನ ಇದು.
ಒಂದು ಅರ್ಥದಲ್ಲಿ ಬ್ರಿಟಿಷರೇ ಬ್ರಿಟನ್ ಆಡಳಿತ ವಿರುದ್ಧ ಪ್ರತಿರೋಧ ಒಡ್ಡಿ ಸ್ವಾತಂತ್ರ್ಯ ಪಡೆದದ್ದು. 17ನೇ ಶತಮಾನದಲ್ಲಿ ಬ್ರಿಟಿಷರೇ ಅಮೆರಿಕಕ್ಕೆ ಬಂದು ವಸಾಹತು ನಡೆಸಿದ್ದರು. ಆ ಜನರೇ ಕೊನೆಗೆ ಬ್ರಿಟನ್ ಆಡಳಿತಕ್ಕೆ ಒಳಪಡಲು ನಿರಾಕರಿಸಿ ಸ್ವಯಂ ಆಗಿ ಸ್ವಾತಂತ್ರ್ಯ ಘೋಷಿಸಿಕೊಂಡರು. ಅದೇ ಅಮೆರಿಕದ ಸ್ವಾತಂತ್ರ್ಯ. ಅದಾಗಿದ್ದು 1776ರಲ್ಲಿ.
ಅಮೆರಿಕ ಅಂತ ಹೆಸರು ಬರಲು ಏನು ಕಾರಣ, ತಮ್ಮ ಮೂಲದವರಾದ ಬ್ರಿಟಿಷರ ವಿರುದ್ಧವೇ ಅಮೆರಿಕನ್ನರು ತಿರುಗಿ ನಿಲ್ಲಲು ಏನು ಕಾರಣ, ಬ್ರಿಟನ್ನರಿಗಿಂತ ಮುಂಚೆ ಅಮೆರಿಕದಲ್ಲಿ ಯಾರಿದ್ದರು, ಯಾರು ಮೂಲ ನಿವಾಸಿಗಳು? ಎಂಬಿತ್ಯಾದಿ ಕೆಲ ಕುತೂಹಲಕಾರಿ ಸಂಗತಿಗಳನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ನೀಡಿದ್ದೇವೆ.

ಅಮೆರಿಕದ ಇತಿಹಾಸ
ಅಮೆರಿಕ ಎಂಬುದು ಭೂಮಿಯ ಆರು ಖಂಡಗಳಲ್ಲಿ ಒಂದಾದ ಉತ್ತರ ಅಮೆರಿಕದ 50 ರಾಜ್ಯಗಳನ್ನು ಒಳಗೊಂಡಿರುವ ಒಂದು ದೊಡ್ಡ ರಾಷ್ಟ್ರ. 16 ಮತ್ತು 17ನೇ ಶತಮಾನದಲ್ಲಿ ಬ್ರಿಟಿಷರು ಈ ನಾಡಿಗೆ ಬಂದು ವಸಾಹತು ನಿರ್ಮಿಸಿದರು.
ಅಮೆರಿಕದ ಇತಿಹಾಸ ಬ್ರಿಟನ್ನರ ಆಗಮನದಿಂದ ಶುರುವಾದದ್ದಲ್ಲ. ಕ್ರಿಸ್ತಪೂರ್ವ ನೂರು ಶತಮಾನಗಳಿಗೂ ಹೆಚ್ಚು ಕಾಲದ ಹಿಂದಿನಿಂದಲೇ ಇಲ್ಲಿ ಜನರು ನೆಲಸಿದ್ದಾರೆ. ಇಲ್ಲಿಯ ಮೂಲ ನಿವಾಸಿಗಳು ಎಂದು ಹೇಳಲಾಗುವ ಬುಡಕಟ್ಟು ಜನರು ರಷ್ಯಾದ ಸೈಬೀರಿಯಾದಿಂದ ವಲಸೆ ಬಂದವರೆಂದು ಹೇಳಲಾಗುತ್ತದೆ.

ಯೂರೋಪಿಯನ್ನರ ವಸಾಹತು
ಬ್ರಿಟನ್, ಫ್ರಾನ್ಸ್, ಸ್ಪೇನ್, ಪೋರ್ಚುಗಲ್ ಮೊದಲಾದ ಕೆಲ ಐರೋಪ್ಯ ದೇಶಗಳು ಇಡೀ ವಿಶ್ವಾದ್ಯಂತ ವಸಾಹತು ನಿರ್ಮಿಸುವ ಪೈಪೋಟಿಗೆ ಬಿದ್ದಂತೆ ಸಿಕ್ಕ ಸಿಕ್ಕ ಜಾಗವನ್ನೆಲ್ಲಾ ಶೋಧಿಸುತ್ತಿದ್ದವು. ಇಟಲಿ ದೇಶದ ಕ್ರಿಸ್ಟೋಫರ್ ಕೊಲಂಬಸ್ 15ನೇ ಶತಮಾನದ ಅಂತ್ಯದಲ್ಲಿ ಅಮೆರಿಕದ ನೆಲದ ಮೇಲೆ ಕಾಲಿಟ್ಟಿದ್ದರು. ಸ್ಪೇನ್ ದೇಶ ಮೊದಲು ಇಲ್ಲಿ ಕೆಲ ಕಾಲೊನಿಗಳನ್ನು ಕಟ್ಟಿದರು. ಬಳಿಕ ಇಂಗ್ಲೆಂಡ್‌ನವರು ಇಲ್ಲಿ ವಸಾಹತು ನಿರ್ಮಿಸಿತು. ಈ ಪೈಪೋಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದು ಬ್ರಿಟಿಷರೆಯೇ.
ದಕ್ಷಿಣ ಅಮೆರಿಕ ಖಂಡದ ಪ್ರದೇಶದಲ್ಲಿ ಬೇರೆ ಐರೋಪ್ಯ ದೇಶದ ಜನರು ಆಕ್ರಮಿಸಿಕೊಂಡು ವಸಹಾತು ನಿರ್ಮಿಸಿದರು.
ಇನ್ನು, ಅಮೆರಿಕದ ಮೂಲ ನಿವಾಸಿಗಳು ಹಂತ ಹಂತವಾಗಿ ಬಲ ಕಳೆದುಕೊಳ್ಳುತ್ತಾ ಹೋದರು. ಈಗ ಸಣ್ಣಪುಟ್ಟ ಪ್ರದೇಶಗಳಿಗೆ ಇವರು ಸೀಮಿತವಾಗಿದ್ದಾರೆ. 1625ರಲ್ಲಿ 2 ಸಾವಿರ ಇದ್ದ ವಲಸಿಗರ ಸಂಖ್ಯೆ 150 ವರ್ಷದಲ್ಲಿ 24 ಲಕ್ಷಕ್ಕೆ ಏರಿತ್ತು. ಯೂರೋಪಿಯನ್ನರು ಬರುವ ಮುನ್ನ ಅಮೆರಿಕದಲ್ಲಿ ಸುಮಾರು ಒಂದು ಕೋಟಿ ಇದ್ದ ಮೂಲ ನಿವಾಸಿಗಳ ಸಂಖ್ಯೆ ಗಣನೀಯವಾಗಿ ಇಳಿದುಹೋಗಿತ್ತು.

ಸ್ವಾತಂತ್ರ್ಯದ ಕಿಡಿ
ಭಾರತವನ್ನು ಆಕ್ರಮಿಸಿಕೊಂಡ ರೀತಿಯಲ್ಲೇ ಬ್ರಿಟಿಷರು ಅಮೆರಿಕವನ್ನು ಹಿಡಿದಿಟ್ಟುಕೊಂಡಿದ್ದರು. ಅಮೆರಿಕಕ್ಕೆ ಹೋಗಿ ನೆಲಸಿದ ಜನರಿಗೆ ಹೆಚ್ಚು ಅಧಿಕಾರ ಇಲ್ಲದಂತಾಯಿತು. ಅಮೆರಿಕದ ಸಂಪನ್ಮೂಲಗಳು ಬ್ರಿಟಿಷರ ಖಜಾನೆ ತುಂಬಿಸುತ್ತಿದ್ದವು. ಬ್ರಿಟನ್ ಸಂಸತ್ತಿನಲ್ಲಿ ಅಮೆರಿಕದ ಯಾವ ಪಾತ್ರವೂ ಇರಲಿಲ್ಲ. ಅಮೆರಿಕನ್ನರಿಂದ ತೆರಿಗೆಯನ್ನು ಬ್ರಿಟನ್ ರಾಜರು ತಪ್ಪದೇ ವಸೂಲಿ ಮಾಡುತ್ತಿದ್ದರು. ಇದು ಅಮೆರಿಕದ ವಲಸಿಗರನ್ನು ರೊಚ್ಚಿಗೆಬ್ಬಿಸಿತು. ಪ್ರಾತಿನಿಧ್ಯ ಇಲ್ಲದೇ ತೆರಿಗೆ ಇಲ್ಲ ಎಂಬ ಆಂದೋಲನ ನಡೆಸಿದರು. ಇದು ಬ್ರಿಟನ್ ದೊರೆ ಮೂರನೇ ಜಾರ್ಜ್ ಅವಧಿಯಲ್ಲಿ ಆಗಿದ್ದು.
ಅದೇ ಸ್ವಾತಂತ್ರ್ಯ ಹೋರಾಟದ ಧ್ವನಿಯಾಯಿತು. ಬ್ರಿಟಿಷರ 13 ಕಾಲೊನಿಗಳು ಈ ಹೋರಾಟದಲ್ಲಿ ಒಂದುಗೂಡಿದವು. 1775ರಲ್ಲಿ ಅಮೆರಿಕಾ ಕ್ರಾಂತಿ ಆರಂಭವಾಯಿತು ಬ್ರಿಟನ್‌ನಿಂದ ಸೇನಾ ಪಡೆಗಳು ಕಳುಹಿಸಿ ಈ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ವಿಫಲವಾಯಿತು. ಅಂತಿಮವಾಗಿ 1776ರಲ್ಲಿ ಸ್ವಯಂ ಆಗಿ ಸ್ವಾತಂತ್ರ್ಯ ಘೋಷಣೆ ಮಾಡಲಾಯಿತು. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಎಂದು ಹೆಸರಿಡಲಾಯಿತು.

ಅಮೆರಿಕ ಹೆಸರು ಬಂದದ್ದು ಹೇಗೆ?
ಅಮೆರಿಕದ ಆ ಹೆಸರಿನ ಮೂಲ ಇಟಲಿಯನ್ ವ್ಯಕ್ತಿಯೊಬ್ಬರ ಹೆಸರು. ಇಟಲಿ ದೇಶದ ಅನ್ವೇಷಕ ಅಮೆರಿಗೋ ವೆಸ್ಪುಚ್ಚಿ ಎಂಬುವರು ವೆಸ್ಟ್ ಇಂಡೀಸ್ ಏಷ್ಯಾದ ಪೂರ್ವಭಾಗದ ಅಂಚಿನಲ್ಲಿಲ್ಲ. ಇದು ಅಪರಿಚಿತ ಭೂಭಾಗವಾಗಿದೆ ಎಂದು ಕಂಡುಹಿಡಿದ ಮೊದಲಿಗ. ಅಲ್ಲಿಯವರೆಗೆ ವೆಸ್ಟ್ ಇಂಡೀಸ್ ಅನ್ನು ಏಷ್ಯಾದ ಪೂರ್ವ ತುದಿ ಎಂದೇ ಭಾವಿಸಲಾಗಿತ್ತು. 16ನೇ ಶತಮಾನದಲ್ಲಿ ಜರ್ಮನಿಯ ನಕ್ಷೆ ತಜ್ಞ ಮಾರ್ಟಿನ್ ವಾಲ್ಡ್‌ಸೀಮುಲ್ಲರ್ ಎಂಬುವರು ತಯಾರಿಸಿದ ನಕ್ಷೆಯಲ್ಲಿ ಈಗಿನ ದಕ್ಷಿಣ ಅಮೆರಿಕದ ಭಾಗವನ್ನು ಅಮೆರಿಕಾ ಎಂದು ನಮೂದಿಸಿದ್ದರು. ಅದು ಇಟಲಿಯನ್ ಅನ್ವೇಷಕ Amerigo ಎಂಬುವವರ ಗೌರವಾರ್ಥವಾಗಿ ನಮೂದಿಸಿದ್ದು. 1538ರಲ್ಲಿ ಗೆರಾರ್ಡಸ್ ಮೆರ್ಕಾಟರ್ ಎಂಬುವವರು ತಯಾರಿಸಿದ ವಿಶ್ವ ಭೂಪಟದಲ್ಲಿ ಇಡೀ ಪಶ್ಚಿಮ ಗೋಳಾರ್ಧವನ್ನು ಅಮೆರಿಕ ಎಂದು ಹೆಸರಿಟ್ಟರು. ಆಗಿನಿಂದ ಅಮೆರಿಕ ಎಂಬ ಹೆಸರು ಹೆಚ್ಚು ಚಾಲನೆಗೆ ಬಂದಿತು.

ಜುಲೈ 2 ಮತ್ತು 4 ಮಧ್ಯೆ ಗೊಂದಲ
ಸ್ವಾತಂತ್ರ್ಯದ ಹೋರಾಟಕ್ಕಾಗಿ 13 ಕಾಲೊನಿಗಳು ಒಟ್ಟುಗೂಡಿ ಕಾಂಟಿನೆಂಟಲ್ ಕಾಂಗ್ರೆಸ್ ಎಂಬ ಶಾಸನಸಭೆ ರಚಿಸಿದ್ದವು. 1776ರ ಜುಲೈ 2ರಂದು ಸ್ವತಂತ್ರ ದೇಶ ಎಂದು ಘೋಷಣೆ ಮಾಡಲು ನಿರ್ಧರಿಸಲಾಯಿತು. ಸ್ವಾತಂತ್ರ್ಯ ಘೋಷಣೆಯ ಕರಡನ್ನು ಚರ್ಚಿಸಿ, ತಿದ್ದುಪಡಿ ಇತ್ಯಾದಿ ಎಲ್ಲಾ ಆದ ಬಳಿಕ ಜುಲೈ 4ರಂದು ಕಾಂಟಿನೆಂಟಲ್ ಕಾಂಗ್ರೆಸ್ ಸಮ್ಮತಿ ಕೊಟ್ಟಿತು. ಹೀಗಾಗಿ, ಜುಲೈ 2ರ ಬದಲು ಜುಲೈ 4ರಂದು ಅಮೆರಿಕದ ಸ್ವಾತಂತ್ರ್ಯೋತ್ಸವವಾಗಿ ಆಚರಿಸಲಾಗುತ್ತದೆ.

ಸ್ವಾತಂತ್ರ್ಯೋತ್ಸವದ ಸಂಭ್ರಮ ಹೇಗೆ?
ಅಮೆರಿಕನ್ನರಿಗೆ ಜುಲೈ 4 ಎಂಬುದು ಅತ್ಯಂತ ಸಂಭ್ರಮದ ದಿನ. ರಜಾ ದಿನ. ಅಂದು ದೇಶಪ್ರೇಮ ಬಿಂಬಿಸುವ ಗಾಯನ ಕೂಟಗಳು ಮತ್ತು ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತವೆ. ಪಬ್, ಬಾರ್‌ಗಳಿಗೆ ಹೋಗುವ ಅಮೆರಿಕನ್ನರು ಜುಲೈ 4ರಂದು ರಾಷ್ಟ್ರಭಕ್ತಿಯ ಪ್ರದರ್ಶನಕ್ಕೆ ಒತ್ತುಕೊಡುತ್ತಾರೆ.
ನಮ್ಮ ದೀಪಾವಳಿಯ ಬೆಳಕಿನ ಹಬ್ಬದಂತೆ ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ದೇಶದೆಲ್ಲೆಡೆ ಪಟಾಕಿಗಳ ವೈಭವ ಇರುತ್ತದೆ. ರಾತ್ರಿಯ ಹೊತ್ತು ಬೆಳಕಿನ ಚಿತ್ತಾರವೇ ಇರುತ್ತದೆ. ನಮ್ಮ ಹಬ್ಬಗಳಲ್ಲಿ ವಿಶೇಷ ತಿನಿಸುಗಳನ್ನು ಮಾಡುವ ಹಾಗೆ ಅಂದು ಅಮೆರಿಕದಲ್ಲಿ ಆಲೂಗಡ್ಡೆ, ಜೋಳ, ಬೀನ್ಸ್, ಕಲ್ಲಂಗಡಿ ಹಣ್ಣು ಇತ್ಯಾದಿಯಿಂದ ಮಾಡಿದ ಖಾದ್ಯ, ತಿಂಡಿ ತಿನಿಸುಗಳನ್ನು ಸವಿಯುತ್ತಾರೆ.

ಗುಲಾಮಗಿರಿ, ವರ್ಣಭೇದದ ಕಳಂಕ
ಅಮೆರಿಕದಲ್ಲಿ ಸ್ವಾತಂತ್ರ್ಯ ಲಭಿಸುವ ಮುನ್ನ ಗುಲಾಮಗಿರಿ ಪದ್ಧತಿ ತೀರಾ ಸಾಮಾನ್ಯವಾಗಿತ್ತು. ಆಫ್ರಿಕಾದಿಂದ ಜನರನ್ನು ಕರೆದುಕೊಂಡು ಬಂದು ಗುಲಾಮರಾಗಿ ಬಳಸಿಕೊಳ್ಳುತ್ತಿದ್ದರು. 19ನೇ ಶತಮಾನದವರೆಗೂ ಕರಿಯ ಜನಾಂಗದವರನ್ನು ತುಚ್ಛವಾಗಿಯೇ ಕಾಣಲಾಗುತ್ತಿತ್ತು. ಈಗಲೂ ಕೂಡ ಅಮೆರಿಕದ ಕರಿಯ ಜನರು ವರ್ಣಭೇದ ಅಸ್ತಿತ್ವದಲ್ಲಿದೆ ಎಂದು ಆರೋಪಿಸುತ್ತಾರೆ. ಸ್ವಾತಂತ್ರ್ಯದ ಪರಮಾರ್ಥ ಇರುವ ದೇಶ ಎಂದು ಖ್ಯಾತವಾಗಿರುವ ಅಮೆರಿಕದಲ್ಲಿ ಇಂಥ ಸ್ಥಿತಿ ಇದೆ ಎಂದರೆ ಅದು ವಿಪರ್ಯಾಸವೇ.
ಅಮೆರಿಕ ಇತಿಹಾಸದ ಇನ್ನೊಂದು ಪ್ರಮುಖ ಅಂಶ ಎಂದರೆ ಅದರ ಯುದ್ಧ ಹಪಾಹಪಿ. ಬ್ರಿಟನ್ನರಿಂದ ಸ್ವಾತಂತ್ರ್ಯ ಪಡೆದ ಬ್ರಿಟಿಷ್ ಮೂಲದ ಅಮೆರಿಕನ್ನರು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತಾ ಹೋದರು. ಮೂಲ ನಿವಾಸಿಗಳನ್ನು ತುಳಿಯುತ್ತಾ ಅಧಿಕಾರ ಚಲಾಯಿಸತೊಡಗಿದರು. 19ನೇ ಶತಮಾನದಲ್ಲಿ ಚಾಲ್ತಿಯಲ್ಲಿದ್ದ ಮ್ಯಾನಿಫೆಸ್ಟ್ ಡೆಸ್ಟಿನಿ ಎಂಬ ಮೌಢ್ಯದ ಮಾನಸಿಕತೆ ಇದಕ್ಕೆ ಕಾರಣ. ಅಮೆರಿಕದ ನೆಲಸಿಗರು ವಿಶೇಷ ವ್ಯಕ್ತಿಗಳಾಗಿದ್ದು, ಅವರು ಉತ್ತರ ಅಮೆರಿಕದ ಭೂಭಾಗದಲ್ಲಿ ವಿಸ್ತರಿಸುವ ಆದೇಶ ಹೊಂದಿದ್ದಾರೆ ಎಂಬ ನಂಬಿಕೆ ಆ ಸಂದರ್ಭದಲ್ಲಿ ಅಮೆರಿಕನ್ನರ ಮಾನಸಿಕತೆಯಲ್ಲಿ ತುಂಬಿಹೋಗಿತ್ತು.
ಅಮೆರಿಕನ್ನರ ಮಾನಸಿಕತೆ ಈಗಲೂ ಮ್ಯಾನಿಫೆಸ್ಟ್ ಡೆಸ್ಟಿನಿಯಂತಿದೆ ಎಂದು ವಿಶ್ಲೇಷಿಸುವವರಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications