15–49 ವರ್ಷ ವಯಸ್ಸಿನ ಭಾರತೀಯರಲ್ಲಿ ವೇಗವಾಗಿ ಹೆಚ್ಚುತ್ತಿದೆ ಬೊಜ್ಜು, ಮಧುಮೇಹದ ಅಪಾಯ: ಸಮೀಕ್ಷೆಯಲ್ಲಿ ಬಹಿರಂಗ
ಭಾರತದಲ್ಲಿ ಬೊಜ್ಜಿನ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. 15 ರಿಂದ 49 ವರ್ಷದೊಳಗಿನವರಲ್ಲಿ ಸ್ಥೂಲಕಾಯ ಮತ್ತು ಮಧುಮೇಹದ ಅಪಾಯವು ಶೀಘ್ರ ಸ್ಥರದಲ್ಲಿ ಏರಿಕೆ ಕಾಣುತ್ತಿದೆ. ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 ರ ವರದಿಯಲ್ಲಿ ಈ ಅಂಶ ಸ್ಪಷ್ಟವಾಗಿದೆ. 2019 ಮತ್ತು 2024 ರ ನಡುವಿನ ಐದು ವರ್ಷಗಳಲ್ಲಿ ಈ ಪ್ರಮಾಣವು ಕ್ರಮವಾಗಿ 4.4 ರಿಂದ 6.7 ಶೇಕಡಾ ಅಂಕಗಳಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.
NFHS-6 ಸಮೀಕ್ಷೆಯು ಮಣಿಪುರ ಹೊರತುಪಡಿಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 715 ಜಿಲ್ಲೆಗಳಲ್ಲಿನ ಸುಮಾರು 6.79 ಲಕ್ಷ ಮನೆಗಳನ್ನು ಒಳಗೊಂಡಿತ್ತು. ಇದು ಜನಸಂಖ್ಯೆ, ಆರೋಗ್ಯ, ಪೋಷಣೆ ಮತ್ತು ಕುಟುಂಬ ಕಲ್ಯಾಣ ಸೂಚಕಗಳ ಕುರಿತು ಪ್ರಮುಖ ಸಾಕ್ಷ್ಯಗಳನ್ನು ಒದಗಿಸುತ್ತದೆ.

ಈ ಆರೋಗ್ಯ ವರದಿಯ ಪ್ರಮುಖ ಅಂಕಿ-ಅಂಶಗಳು ಇಲ್ಲಿವೆ:
ಸಮೀಕ್ಷೆಯ ಪ್ರಕಾರ, 2019-21ರಲ್ಲಿ ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಮಹಿಳೆಯರ ಶೇಕಡಾವಾರು ಪ್ರಮಾಣವು ಶೇ. 24 ಇದ್ದರೆ, 2023-24 ರಲ್ಲಿ ಇದು ಶೇ. 30.7 ಕ್ಕೆ ಏರಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗಿರುವುದು ವರದಿಯಲ್ಲಿ ಕಂಡು ಬಂದಿದೆ. ನಗರ ಪ್ರದೇಶಗಳಲ್ಲಿ, ಶೇ.42.8 ರಷ್ಟು ಮಹಿಳೆಯರು ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಖ್ಯೆ ಶೇ. 25.5 ರಷ್ಟಿದೆ.
ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಪುರುಷರ ಶೇಕಡಾವಾರು ಪ್ರಮಾಣವು 2019-21ರಲ್ಲಿ 22.9 ರಷ್ಟಿತ್ತು. 2023-24ಕ್ಕೆ ಹೋಲಿಸಿ ನೋಡಿದಾಗ ಇದು 27.3 ಕ್ಕೆ ಏರಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಶೇ. 23 ರಷ್ಟು ಪುರುಷರು ಬೊಜ್ಜು ಹೊಂದಿದ್ದಾರೆ ಎಂದು ವರದಿಯಾಗಿದೆ.ಆದರೆ, ನಗರ ಪ್ರದೇಶಗಳಲ್ಲಿ ಈ ಸಂಖ್ಯೆ ಶೇ. 36.3 ರಷ್ಟಿದೆ.
ವಯಸ್ಕರಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಳವಾಗುತ್ತಿರುವುದು ಒಂದೆಡೆಯಾದರೆ, 15 ವರ್ಷ ಮೇಲ್ಪಟ್ಟವರಲ್ಲಿ ರಕ್ತದ ಸಕ್ಕರೆ ಪ್ರಮಾಣ ತೀವ್ರವಾಗಿ ಹೆಚ್ಚುತ್ತಿದೆ. 15 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ಹೈ ಬ್ಲಡ್ ಶುಗರ್ ಅಪಾಯ ಕೂಡಾ ಹೆಚ್ಚಾಗುತ್ತಿದೆ ಎನ್ನುವ ಆತಂಕವನ್ನು ಸಮೀಕ್ ಹೊರ ಹಾಕಿದೆ. ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಔಷಧಿ ತೆಗೆದುಕೊಳ್ಳುವ ಪುರುಷರ ಪ್ರಮಾಣವು 2019-21ರಲ್ಲಿ ಶೇ. 15.6 ರಷ್ಟಿದ್ದು, 2023-24ರಲ್ಲಿ ಶೇ.20.9 ಕ್ಕೆ ಏರಿದೆ.
ನಗರ ಪ್ರದೇಶಗಳಲ್ಲಿ ಈ ಸಂಖ್ಯೆ ಹೆಚ್ಚಾಗಿದ್ದು, ಶೇ. 23.9 ರಷ್ಟು ಪುರುಷರು ಹೈ ಬ್ಲಡ್ ಶುಗರ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಂದರೆ ಈ ರೋಗ ನಿಯಂತ್ರಣಕ್ಕೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇದರ ಪ್ರಮಾಣ ಶೇ. 19.7 ರಷ್ಟಿದೆ.
ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೈ ಬ್ಲಡ್ ಶುಗರ್‌ನ ಅಪಾಯ ಕಡಿಮೆಯಾಗಿತ್ತು. ಆದರೆ 2019 ರಿಂದ 2024ರ ನಡುವೆ ಇದರ ಪ್ರಮಾಣ ತೀವ್ರವಾಗಿ ಹೆಚ್ಚಾಗಿದೆ. ಸಮೀಕ್ಷೆಯ ಪ್ರಕಾರ, ಶೇ. 17.8 ರಷ್ಟು ಮಹಿಳೆಯರು ಹೆಚ್ಚಿನ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
2023-24 ರಲ್ಲಿ, ಶೇ. 21.9 ರಷ್ಟು ನಗರ ಮಹಿಳೆಯರು ಮತ್ತು ಶೇ. 16.2 ರಷ್ಟು ಗ್ರಾಮೀಣ ಮಹಿಳೆಯರು ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟವನ್ನು ಹೊಂದಿದ್ದು, ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications