Vijayapura: 4 ಮಕ್ಕಳನ್ನ ಕಾಲುವೆಗೆ ಎಸೆದ ತಾಯಿ ವಿರುದ್ಧ ಮರ್ಡರ್ ಕೇಸ್ ದಾಖಲು
ವಿಜಯಪುರ ಜನವರಿ 15: ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿ ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು, ತಾನೂ ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದ ಮಹಿಳೆಯ ವಿರುದ್ಧ ಮರ್ಡರ್ ಕೇಸ್ ದಾಖಲಾಗಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತ ತಾಯಿಯೊಬ್ಬಳು ಮಕ್ಕಳ ಸಮೇತ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ಘಟನೆಯಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ. ಆದರೆ ಮಹಿಳೆಯನ್ನು ಜೀವಂತವಾಗಿ ರಕ್ಷಿಸಲಾಗಿದೆ. ಪ್ರಸ್ತುತ ಮಹಿಳೆಯ ವಿರುದ್ಧ ಮರ್ಡರ್ ಕೇಸ್ ದಾಖಲಾಗಿದೆ.
ಜನವರಿ 13ರಂದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಬಳಿಯ, ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ಘಟನೆ ನಡೆದಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತ ಮಹಿಳೆ ಈ ಕೃತ್ಯ ಮಾಡಿದ್ದಾಳೆ. ಮಹಿಳೆ ತನ್ನ ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ನಂತರ ತಾನೂ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಸ್ಥಳೀಯರು ತಾಯಿ ಭಾಗ್ಯಾ ಭಜಂತ್ರೀಯನ್ನು ರಕ್ಷಿಸಿದ್ದಾರೆ. ಆದರೆ ದುರಾದೃಷ್ಟವಶಾತ್ 4 ಮಕ್ಕಳು ಸಾವನ್ನಪ್ಪಿದ್ದಾರೆ.

ಮೃತ ಮಕ್ಕಳನ್ನು ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ಹಸೇನ ನಿಂಗರಾಜ ಭಜಂತ್ರಿ ಹಾಗೂ ಹುಸೇನ ನಿಂಗರಾಜ ಭಜಂತ್ರಿ (13 ತಿಂಗಳು), ತನು ನಿಂಗರಾಜ ಭಜಂತಿ (5), ರಕ್ಷಾ ನಿಂಗರಾಜ ಭಜಂತ್ರಿ (3) ಎಂದು ಗುರುತಿಸಲಾಗಿದೆ. ಸ್ಥಳೀಯ ಮೀನುಗಾರರು ಇಬ್ಬರು ಹೆಣ್ಣು ಮಕ್ಕಳ ಮೃತದೇಹವನ್ನು ಹೊರಗೆ ತೆಗೆದು ನಂತರ ಇಬ್ಬರು ಮಕ್ಕಳ ಮೃತ ದೇಹವನ್ನು ಪತ್ತೆ ಮಾಡಿಲು ತುಂಬಾ ತೊಂದರೆ ಅನುಭವಿಸುವಂತಾಯಿತು.
ಬಳಿಕ ಸ್ಥಳಕ್ಕೆ ಆಗಮಿಸಿರುವ ನಿಡಗುಂದಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಗಂಡು ಮಕ್ಕಳ ಮೃತದೇಹವನ್ನು ಹುಡುಕಿದ್ದಾರೆ. ಇಲ್ಲಿ ತಾಯಿಯ ಆತುರಕ್ಕೆ ಬದುಕಿ ಬಾಳಬೇಕಿದ್ದ ಮಕ್ಕಳು ಮೃತಪಟ್ಟಿರುವುದು ನಿಜಕ್ಕೂ ಆಘಾತಕಾರಿಯಾದ ವಿಷಯವಾಗಿದೆ.
ನಾಲ್ಕು ಮಕ್ಕಳನ್ನು ಕೊಂದ ಆರೋಪದ ಮೇಲೆ ಭಾಗ್ಯಾ ವಿರುದ್ಧ ಪ್ರಕರಣ ದಾಖಲಿಸಿ ಸದ್ಯ ಆಕೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ದುರ್ಘಟನೆಗೆ ಭಾಗ್ಯಾ ಗಂಡನ ಮನೆಯಲ್ಲಿ ನಡೆದ ಜಗಳಗಳೇ ಕಾರಣ ಎನ್ನಲಾಗುತ್ತಿದೆ. ಭಾಗ್ಯಾ ಕುಟುಂಬಸ್ಥರು ಪತಿ ನಿಂಗರಾಜ ಹಾಗೂ ಆತನ ತಂದೆ-ತಾಯಿ ಮೇಲೆ ಆರೋಪ ಮಾಡಿದ್ದಾರೆ. ಕುಟುಂಬದಲ್ಲಿ ಸಾಕಷ್ಟು ಮನಸ್ತಾಪಗಳು ಇದ್ದವು. ನಿಂಗರಾಜ ಸಾಕಷ್ಟು ಸಾಲ ಮಾಡಿಕೊಂಡಿದ್ದ.
ಇದನ್ನು ತೀರಿಸಲು ಜಮೀನು ಮಾರಾಟ ಮಾಡಲು ಸಿದ್ಧನಾಗಿದ್ದ. ಇದಕ್ಕೆ ಪತ್ನಿ ಭಾಗ್ಯಾ ಅವರಿಂದ ವಿರೋಧ ವ್ಯಕ್ತವಾಗಿತ್ತು. ಇದಕ್ಕಾಗಿ ನಿಂಗರಾಜು, ಆತನ ತಂದೆ ಹಾಗೂ ತಾಯಿ ಮೂವರು ಸೇರಿಕೊಂಡು ಭಾಗ್ಯಾ ಮೇಲೆ ಹಲ್ಲೆ ಮಾಡಿದ್ದರು ಎಂದು ಭಾಗ್ಯಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಇದರಿಂದಾಗಿ ಮನನೊಂದ ಭಾಗ್ಯಾ ತಾನು ತನ್ನ ನಾಲ್ವರು ಮಕ್ಕಳನ್ನು ಕಾಲುವೆಗೆ ಹಾಕಿ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಅದೃಷ್ಟ ವಶಾತ್ ಆಕೆಯ ಪ್ರಾಣವನ್ನು ಮೀನುಗಾರರು ಉಳಿಸಿದ್ದಾರೆ. ಆದರೆ ನಾಲ್ಕು ಜನ ಮಕ್ಕಳ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇದರಿಂದಾಗಿ ಆಕೆಯ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications