Vijayapura: ಕಮರಿಮಠದ ಜಾತ್ರೆಯ ರಥೋತ್ಸವ ವೇಳೆ ಅವಘಡ, ಮೃತರ ಸಂಖ್ಯೆ ಮೂರಕ್ಕೆ ಏರಿಕೆ
ವಿಜಯಪುರ, ಏಪ್ರಿಲ್ 29: ರಥದ ಚಕ್ರಕ್ಕೆ ಸಿಲುಕಿ ಭಕ್ತರು ಪ್ರಾಣಬಿಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಆರಾಧ್ಯ ದೈವ ಶ್ರೀ ಸಿದ್ದಲಿಂಗ ಮಹಾರಾಜರ ಕಮರಿಮಠದ ಜಾತ್ರಾ ಉತ್ಸವದ ವೇಳೆ ನಡೆದ ಅವಘಡದಲ್ಲಿ ಒಟ್ಟು ಮೂರು ಮಂದಿ ಸಾವನ್ನಪ್ಪಿದ್ದಾರೆ.
ನಿನ್ನೆ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೇ ಮೃತಪಟ್ಟರೆ, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಕೂಡ ಚಿಕಿತ್ಸೆ ಫಲಿಸದೆ ಇಂದು(ಏಪ್ರಿಲ್ 29) ಸೋಮವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆ ಮೂಲಕ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆ ಆಗಿದೆ.

ಲಚ್ಯಾಣ ಗ್ರಾಮದಲ್ಲಿ ನಡೆಯುವ ಶ್ರೀ ಸಿದ್ದಲಿಂಗ ಮಹಾರಾಜರ ಕಮರಿಮಠದ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ನಡೆದಿತ್ತು. ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಹಾಗೂ ರಥವನ್ನು ಎಳೆಯಲು ಸಾವಿರಾರು ಭಕ್ತರು ಜಾತ್ರೆಗೆ ಬಂದಿದ್ದರು. ನಿರೀಕ್ಷೆಗೂ ಮೀರಿ ಜನ ಸೇರಿದ ಹಿನ್ನೆಲೆಯಲ್ಲಿ ನೋಡನೋಡುತ್ತಿದ್ದಂತೆ ರಥೋತ್ಸವದ ವೇಳೆ ನೂಕು ನುಗ್ಗಲು ಉಂಟಾಗಿದೆ. ಈ ವೇಳೆ ಕೆಲವು ಭಕ್ತರು ಚಕ್ರದ ಕೆಳಗೆ ಸಿಲುಕಿದ್ದಾರೆ.
ನೂಕು ನುಗ್ಗಲಿನಲ್ಲಿ ರಥದ ಚಕ್ರಕ್ಕೆ ಸಿಲುಕಿದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಚ್ಯಾಣ ಗ್ರಾಮದ ಅಭಿಷೇಕ್ ಮುಜಗೊಂಡ(17) ಹಾಗೂ ಸೋಬು ಶಿಂಧೆ(51) ರಥೋತ್ಸವದ ವೇಳೆ ಸಾವನ್ನಪ್ಪಿದ ಮೃತ ದುರ್ದೈವಿಗಳು. ಘಟನೆಯಲ್ಲಿ ಸುರೇಶ್ (36) ಎನ್ನುವಾತ ರಥದ ಚಕ್ರಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದ. ಸ್ಥಳದಲ್ಲೇ ಆತನ ಸ್ಥಿತಿಯೂ ಚಿಂತಾಜನಕವಾಗಿತ್ತು. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ನಿನ್ನೆಯಿಂದ ಸುರೇಶ್‌ಗೆ ಚಿಕಿತ್ಸೆ ನೀಡಲಾಗಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ಸುರೇಶ್ ಸಾವನ್ನಪ್ಪಿದ್ದಾನೆ ಎಂದು ಎಂದು ತಿಳಿದು ಬಂದಿದೆ. ಮೃತ ಸುರೇಶ್ ನೆರೆಯ ಮಹಾರಾಷ್ಟ್ರದ ಮೂಲದ ವ್ಯಕ್ತಿ ಎನ್ನಲಾಗಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದ್ದು, ಇಂಡಿ ಪಟ್ಟಣ ಹಾಗೂ ಇಂಡಿ ಗ್ರಾಮೀಣ ಠಾಣೆಯ ಪೊಲೀಸರು ರಥೋತ್ಸವದ ಸ್ಥಳದಲ್ಲಿದ್ದು, ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications