ವಿಜಯಪುರ: 2.70 ಲಕ್ಷ ಕಟ್ಟುವವರೆಗೂ ಶವ ನೀಡಲ್ಲ ಎಂದ ಆಸ್ಪತ್ರೆ ವಿರುದ್ಧ ಪ್ರತಿಭಟನೆ
ವಿಜಯಪುರ, ಸೆಪ್ಟೆಂಬರ್ 23: 2.70 ಲಕ್ಷ ಬಾಕಿ ಬಿಲ್ ಪಾವತಿಸುವವರೆಗೂ ಶವ ನೀಡುವುದಿಲ್ಲ ಎಂದು ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಕುಟುಂಬಕ್ಕೆ ನೀಡಲು ನಿರಾಕರಿಸಿದ ಖಾಸಗಿ ಆಸ್ಪತ್ರೆಯ ವಿರುದ್ಧ ಮೃತನ ಕುಟುಂಬಸ್ಥರು ಭಿಕ್ಷೆ ಬೇಡಿ ಪ್ರತಿಭಟನೆ ನಡೆಸುತ್ತಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ರಾಜು ಭೋವಿ ಎಂಬುವವರು 18 ದಿನಗಳ ಹಿಂದೆ ಕೊರೊನಾ ಸೋಂಕಿನಿಂದಾಗಿ ವಿಜಯಪುರದ ಕೋಟೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತ ಪಟ್ಟಿದ್ದಾರೆ. ಇಲ್ಲಿವರೆಗೆ ಆಸ್ಪತ್ರೆಗೆ 4.80 ಲಕ್ಷ ರೂ ಬಿಲ್ ಅನ್ನು ಕುಟುಂಬಸ್ಥರು ಪಾವತಿಸಿದ್ದಾರೆ.
ಆದರೆ ಶವವನ್ನು ಪಡೆಯಲು ಬಾಕಿ 2.70 ಲಕ್ಷ ರೂ. ಹಣವನ್ನು ಪಾವತಿಸಲು ಸೂಚಿಸಿದ್ದಾರೆ. ಅಲ್ಲದೆ ಹಣ ಕಟ್ಟುವವರೆಗೆ ಶವವನ್ನು ನೋಡಲೂ ವೈದ್ಯರು ಮೃತನ ಪತ್ನಿಗೆ ಬಿಡದ ಆರೋಪ ಕೇಳಿಬಂದಿದೆ. ಆಸ್ಪತ್ರೆಯ ಈ ನಡೆಯನ್ನು ವಿರೋಧಿಸಿ ಆಸ್ಪತ್ರೆ ಎದುರು ಕುಟುಂಬಸ್ಥರು ಹಾಗೂ ಸಂಬಂಧಿಕರು ಭಿಕ್ಷೆ ಬೇಡಿ ಹಣ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಆಸ್ಪತ್ರೆಯವರೇ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದ್ದು, ಆಸ್ಪತ್ರೆ ಎದುರು ಪೊಲೀಸರು ಜಮಾಯಿಸಿದ್ದರು.












Click it and Unblock the Notifications