Narendra Modi In Vijayapura: ಪ್ರಧಾನಿ ನರೇಂದ್ರ ಮೋದಿಗೆ ಸಿದ್ದೇಶ್ವರ ಶ್ರೀಗಳ ವಿಲ್ ಪತ್ರ ಉಡುಗೊರೆ
2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಕರ್ನಾಟಕ ಸಜ್ಜಾಗಿದ್ದು, ಮೇ 10ರಂದು ನಡೆಯಲಿರುವ ಮತದಾನಕ್ಕೂ ಮುನ್ನ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಇದೀಗ ಕರ್ನಾಟಕ ಚುನಾವಣಾ ಕುರುಕ್ಷೇತ್ರದ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರವೇಶಿಸಿದ್ದು, ಇಂದಿನಿಂದ (ಏಪ್ರಿಲ್ 29) ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಆರಂಭಿಸಿದ್ದು, ಬೀದರ್ ಮತ್ತು ವಿಜಯಪುರ, ಬಾಗಲಕೊಟೆ ಜಿಲ್ಲೆಗಳ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.

ಇದೇ ವೇಳೆ ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ಸಮಾವೇಶದಲ್ಲಿ ಭಾಗಿಯಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ವಿಜಯಪುರ ಬಿಜೆಪಿ ಘಟಕದ ವತಿಯಿಂದ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಜ್ಞಾನಯೋಗಾಶ್ರಮದ ದಿವಂಗತ ಸಿದ್ದೇಶ್ವರ ಸ್ವಾಮೀಜಿ ಅವರ ಸಿದ್ದೇಶ್ವರ ಶ್ರೀಗಳ ವಿಲ್ (ಅಂತಿಮ ಅಭಿವಂದನಾ ಪತ್ರ)ವನ್ನು ಉಡುಗೊರೆಯಾಗಿ ನೀಡಲಾಯಿತು.
ಸಿದ್ದೇಶ್ವರ ಶ್ರೀಗಳು ಕಳೆದ ವರ್ಷ ಮೈಸೂರಿನ ಸುತ್ತೂರು ಮಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದರು. ಅವರ ಕಾರ್ಯವೈಖರಿಯನ್ನು ಹಾಡಿ ಹೊಗಳಿದ್ದರು. ಶ್ರೀಗಳು ನಿಧನರಾಗುವ ಮುನ್ನ ತಮ್ಮ ಅಂತಿಮ ಅಭಿವಂದನಾ ಪತ್ರ ಬರೆದಿಟ್ಟಿದ್ದರು.

ಬಿಜೆಪಿ ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಪಂಚನದಿಗಳ ನಾಡು ವಿಜಯಪುರ ಜನತೆಗೆ ನಮಸ್ಕಾರಗಳು," ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.
ಜಗಜ್ಯೋತಿ ಬಸವೇಶ್ವರರ ಜನ್ಮಭೂಮಿಗೆ ಬಂದಿದ್ದೇನೆ. 2014ರ ಯುಗಾದಿ ಹಬ್ಬದ ಸಂದರ್ಭದಲ್ಲಿ ನಾನು ಬಂದಿದ್ದೆ. ಹೊಸ ವರ್ಷದ ಜೊತೆಗೆ ನಿಮ್ಮ ಆಶೀರ್ವಾದ ಸಿಕ್ಕಿತ್ತು ಎಂದು ನೆನಪಿಸಿಕೊಂಡರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನನಗೆ ಆಶೀರ್ವಾದ ಮಾಡಲು ಬಂದಿದ್ದೀರಿ. 'ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ' ಎಂದು ಕನ್ನಡದಲ್ಲೇ ಒತ್ತಿ ಹೇಳಿದರು.
"ಸಬ್ ಕಾ ಸಾತ್ ಸಬ್ ಕಾ ವಿಕಾಸ್ಗೆ ಭಗವಾನ್ ಬಸವಣ್ಣ ಸ್ಫೂರ್ತಿಯಾಗಿದ್ದಾರೆ. ಕಾಯಕ ಮತ್ತು ದಾಸೋಹದ ಪ್ರೇರಣೆ ನಮ್ಮ ಅಭಿವೃದ್ಧಿ ಯೋಜನೆಗಳ ಹಿಂದಿನ ಉದ್ದೇಶ. ಆದಿವಾಸಿ, ಮಹಿಳೆಯರು, ದಲಿತರು ಸೇರಿದಂತೆ ಎಲ್ಲ ವರ್ಗಗಳ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ಅನ್ನ, ಆಶ್ರಯ್, ಅಕ್ಷರಕ್ಕಾಗಿ ಡಬಲ್ ಎಂಜಿನ್ ಸರ್ಕಾರವನ್ನು ಬೆಂಬಲಿಸಬೇಕು," ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.
"ಡಬಲ್ ಎಂಜಿನ್ ಸರ್ಕಾರದಿಂದ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. ಸಾವಿರಾರು ಕುಟುಂಬಗಳಿಗೆ ಕಂದಾಯ ಭೂಮಿ ಹಕ್ಕು ಪತ್ರ ವಿತರಣೆ ಮಾಡಿದ್ದೇವೆ. ಸೌಲಭ್ಯ ವಂಚಿತ ಜನರಿಗೆ ಸರ್ಕಾರದ ಸೌಲಭ್ಯ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರವಧಿಯಲ್ಲಿ ಎಲ್ಲ ಸಮುದಾಯಗಳನ್ನು ನಿರ್ಲಕ್ಷಿಸಲಾಗಿದೆ," ಎಂದು ನರೇಂದ್ರ ಮೋದಿ ತಿಳಿಸಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಯಾವ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.
ಉತ್ತರ ಕರ್ನಾಟಕದ ರೊಟ್ಟಿ ಊಟ ಮಾಡಿದ ಪ್ರಧಾನಿ ಮೋದಿ
ವಿಜಯಪುರದಲ್ಲೇ ಮಧ್ಯಾಹ್ನದ ಭೋಜನ ಸವಿದ ಪ್ರಧಾನಿ ಮೋದಿಯವರಿಗೆ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ, ಫುಲ್ಕ, ದಾಲ್, ಎಣ್ಣೆಗಾಯಿ, ಶೇಂಗಾ ಚಟ್ನಿ, ಕೊಲ್ಹಾರ ಗಟ್ಟಿ ಮೊಸರು, ಶೇಂಗಾ ಹೋಳಿಗೆ, ಅನ್ನ, ರಸಂ, ಮೊಸರನ್ನ, ಹಪ್ಪಳ, ಉಪ್ಪಿನಕಾಯಿ ಸೇರಿದಂತೆ ಇತರೆ ಖಾದ್ಯ ಸೇವಿಸಿದರು.












Click it and Unblock the Notifications