Vande Bharat; ವಿಜಯಪುರಕ್ಕೆ ವಂದೇ ಭಾರತ್ ವಿಸ್ತರಿಸಲು ಬೇಡಿಕೆ
ವಿಜಯಪುರ, ಅಕ್ಟೋಬರ್ 05; ಕರ್ನಾಟಕದಲ್ಲಿ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಓಡುತ್ತಿವೆ. ಹೊಸ ಮಾರ್ಗದಲ್ಲಿ ರೈಲು ಓಡಿಸಬೇಕು ಎಂಬ ಬೇಡಿಕೆಯೂ ಇದೆ. ಇದರ ನಡುವೆ ವಂದೇ ಭಾರತ್ ರೈಲು ಸೇವೆ ವಿಸ್ತರಣೆ ಮಾಡಿ, ವಿಜಯಪುರಕ್ಕೆ ಸಂಪರ್ಕ ಕಲ್ಪಿಸಿ ಎಂದು ಬೇಡಿಕೆ ಇಡಲಾಗಿದೆ.
ವಿಜಯಪುರದ ಬಿಜೆಪಿ ಸಂಸದ ರಮೇಶ್ ಜಿಗಜಣಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದ್ದಾರೆ. ಮುಂಬೈ ಮತ್ತು ಸೊಲ್ಲಾಪುರ ನಡುವೆ ಸಂಚಾರ ನಡೆಸುವ ವಂದೇ ಭಾರತ್ ರೈಲನ್ನು ವಿಜಯಪುರ ತನಕ ವಿಸ್ತರಣೆ ಮಾಡಬೇಕು ಎಂದು ಮನವಿ ಸಲ್ಲಿಕೆ ಮಾಡಿದ್ದಾರೆ.

ಸೊಲ್ಲಾಪುರ ಮತ್ತು ಮುಂಬೈ ಸಿಎಸ್‌ಎಂಟಿ ನಡುವೆ 2023ರ ಫೆಬ್ರವರಿಯಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭವಾಗಿದೆ. ಈ ರೈಲನ್ನು ಕರ್ನಾಟಕದ ವಿಜಯಪುರ ತನಕ ವಿಸ್ತರಣೆ ಮಾಡಬೇಕು ಎಂದು ಸಂಸದರು ರೈಲ್ವೆ ಸಚಿವರಿಗೆ ಬೇಡಿಕೆ ಸಲ್ಲಿಸಿದ್ದಾರೆ.
ಸಚಿವರ ಸ್ಪಂದನೆ; ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ರಮೇಶ್ ಜಿಗಜಣಗಿ, "ಮುಂಬೈ-ಸೊಲ್ಲಾಪುರ ನಡುವೆ ಸಂಚಾರ ನಡೆಸುವ ವಂದೇ ಭಾರತ್ ರೈಲನ್ನು ವಿಜಯಪುರ ತನಕ ವಿಸ್ತರಣೆ ಮಾಡುವ ಬೇಡಿಕೆ ಪರಿಶೀಲಿಸುವುದಾಗಿ ಹೇಳಿದ್ದಾರೆ" ಎಂದರು.
ಕರ್ನಾಟಕದಲ್ಲಿ ಸದ್ಯ ಯಶವಂತಪುರ-ಕಾಚಿಗುಡ, ಮೈಸೂರು-ಚೆನ್ನೈ, ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ಈ ರೈಲು ಸೇವೆಗಳಿಗೆ ಉತ್ತಮ ಸ್ಪಂದನೆಯೂ ಸಿಕ್ಕಿದೆ. ಅಲ್ಲದೇ ರಾಜ್ಯದಲ್ಲಿ ಹೊಸದಾಗಿ 9 ವಂದೇ ಭಾರತ್ ರೈಲುಗಳು ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ.
ರೈಲ್ವೆ ಸಚಿವಾಲಯದಲ್ಲಿ 19/7/2023ರಂದು ಕರ್ನಾಟಕದ ಯಾವ ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲು ಓಡಿಸಬೇಕು ಎಂದು ಚರ್ಚೆ ನಡೆಸಿತ್ತು. 10 ಮಾರ್ಗದಲ್ಲಿ ರೈಲು ಓಡಿಸಲು ಬೇಕಾದ ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲು ಸುತ್ತೋಲೆಯನ್ನು ಹೊರಡಿಸಲಾಗಿತ್ತು. ಈ ಸುತ್ತೋಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕರ್ನಾಟಕದಲ್ಲಿ ಹೊಸದಾಗಿ ಬೆಂಗಳೂರು-ಬೆಳಗಾವಿ, ಬೆಂಗಳೂರು-ಹೊಸಪೇಟೆ, ಬೆಂಗಳೂರು-ಕೊಯಮತ್ತೂರು, ಬೆಂಗಳೂರು-ತಿರುಪತಿ, ಬೆಂಗಳೂರು-ಮಧುರೈ, ಬೆಂಗಳೂರು-ಪುದುಚೇರಿ, ಬೆಂಗಳೂರು-ಕಲಬುರಗಿ, ಬೆಂಗಳೂರು-ಶಿವಮೊಗ್ಗ, ಬೀದರ್-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ.
ಭಾರತೀಯ ರೈಲ್ವೆ ಸೆಪ್ಟೆಂಬರ್ ತಿಂಗಳಿನಲ್ಲಿ ಕೇಸರಿ ಬಣ್ಣದ ವಂದೇ ಭಾರತ್ ರೈಲುಗಳನ್ನು ಸಹ ಪರಿಚಯಿಸಿದೆ. 16 ಮತ್ತು 8 ಬೋಗಿಯ ಬಿಳಿ ಮತ್ತು ಕೇಸರಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸದ್ಯ ಸಂಚಾರ ನಡೆಸುತ್ತಿವೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲು ಬೋಗಿಗಳನ್ನು ತಯಾರಿಸಲಾಗುತ್ತದೆ.
ರೈಲ್ವೆ ಇಲಾಖೆ ದೂರದ ಪ್ರಯಾಣಕ್ಕಾಗಿ ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳನ್ನು ಶೀಘ್ರವೇ ಪರಿಚಯಿಸಲಿದೆ. ಇದರ ಚಿತ್ರಗಳನ್ನು ಈಗಾಗಲೇ ರೈಲ್ವೆ ಸಚಿವರು ಹಂಚಿಕೊಂಡಿದ್ದಾರೆ. ಡಿಸೆಂಬರ್ ವೇಳೆಗೆ ಈ ರೈಲುಗಳು ಸಂಚಾರ ಆರಂಭಿಸುವ ನಿರೀಕ್ಷೆ ಇದೆ.
1,311 ಕೋಟಿ ರೂ. ಅನುದಾನ; ಸಂಸದ ರಮೇಶ್ ಜಿಗಜಿಣಗಿ ಮಾತನಾಡಿ, "9 ವರ್ಷಗಳಲ್ಲಿ ವಿಜಯಪುರದ ವಿವಿಧ ರೈಲ್ವೆ ಯೋಜನೆಗಳಿಗೆ 1,311 ಕೋಟಿ ರೂ. ಅನುದಾನ ತಂದಿದ್ದೇನೆ. ರೈಲ್ವೆ ನೌಕರರ ವಸತಿ ಗೃಹಗಳು, ವಿಜಯಪುರ ರೈಲ್ವೆ ನಿಲ್ದಾಣ ಕಟ್ಟಡ, ಬೈಪಾಸ್ ಫ್ಲೈ ಓವರ್, ಇಬ್ರಾಹಿಂ ಪುರ ಗೇಟ್ ಫ್ಲೈ ಓವರ್ ಹೀಗೆ ವಿವಿಧ ಯೋಜನೆಗೆ ಅನುದಾನ ತಂದಿದ್ದೇನೆ" ಎಂದರು.
"ಗೋಲ್ ಗುಂಬಜ್ ಅನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರ್ಪಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರವನ್ನು ಬರೆದಿದ್ದೇನೆ. ಇದು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ. ಸಾವಿರಾರು ಜನರು ಇದರಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ಪಡೆಯಲಿದ್ದಾರೆ" ಎಂದು ಸಂಸದರು ಹೇಳಿದರು.












Click it and Unblock the Notifications