ಆಲಮಟ್ಟಿ-ಯಾದಗಿರಿ ನೂತನ ರೈಲು ಮಾರ್ಗ, ಅಪ್‌ಡೇಟ್
ವಿಜಯಪುರ, ಡಿಸೆಂಬರ್ 30: ಕರ್ನಾಟಕದ ದಶಕಗಳ ಕಾಲದ ರೈಲು ಮಾರ್ಗ ಬೇಡಿಕೆ ಈಗ ಹೋರಾಟದ ಸ್ವರೂಪವನ್ನು ಪಡೆದಿದೆ. ಆಲಮಟ್ಟ-ಯಾದಗಿರಿ ರೈಲು ಮಾರ್ಗ ನಿರ್ಮಾಣಕ್ಕಾಗಿ ಹೋರಾಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ರೈಲು ಮಾರ್ಗ ನಿರ್ಮಾಣಕ್ಕಾಗಿ ಹಲವು ವರ್ಷಗಳಿಂದ ಬೇಡಿಕೆ ಇಡಲಾಗುತ್ತಿದ್ದು ಜನಪ್ರತಿನಿಧಿಗಳು, ರೈಲ್ವೆ ಇಲಾಖೆ, ರೈಲ್ವೆ ಸಚಿವರಿಗೂ ಸಹ ಮನವಿ ಸಲ್ಲಿಕೆ ಮಾಡಲಾಗಿದೆ.
ಕಳೆದ ವಾರ ಆಲಮಟ್ಟಿಯ ಈಶ್ವಲಿಂಗ ದೇವಾಲಯದಲ್ಲಿ ಆಲಮಟ್ಟಿ ರೈಲು ಅಭಿವೃದ್ಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸಮಿತಿಯನ್ನು ರಚನೆ ಮಾಡಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹೋರಾಟ ಸಮಿತಿ ಮೂಲಕ ಜನಪ್ರತಿನಿಧಿಗಳನ್ನು ಭೇಟಿಯಾಗಿ ಈ ನೂತನ ರೈಲು ಮಾರ್ಗದ ಕುರಿತು ಮತ್ತೊಮ್ಮೆ ಮನವಿಗಳನ್ನು ಸಲ್ಲಿಕೆ ಮಾಡಲು ತೀರ್ಮಾನಿಸಲಾಗಿದೆ.

ಆಲಮಟ್ಟಿ, ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟೆ, ಹುಣಸಗಿ ಮೂಲಕ ಯಾದಗಿರಿಗೆ ನೂತನ ರೈಲು ಮಾರ್ಗ ನಿರ್ಮಾಣ ಮಾಡಬೇಕು ಎಂಬುದು ಬೇಡಿಕೆಯಾಗಿದೆ. 2025ರ ಫೆಬ್ರವರಿಯಲ್ಲಿ ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ ಈ ಮಾರ್ಗ ಘೋಷಣೆಯಾಗಬೇಕು. ಆ ಮಾದರಿಯಲ್ಲಿ ಹೋರಾಟ ನಡೆಸಬೇಕು ಎಂದು ಸಭೆಯಲ್ಲಿ ಚರ್ಚಿಸಿ ಒಮ್ಮತದ ತೀರ್ಮಾನ ಮಾಡಲಾಗಿದೆ.
ಈ ಬಾರಿ ನಿರಂತರವಾಗಿ ಹೋರಾಟ ಮಾಡಬೇಕು. ಅದಕ್ಕಾಗಿ ಆಲಮಟ್ಟಿಯಿಂದ ಯಾದಗಿರಿ ತನಕ ಜನಜಾಗೃತಿ ಜಾಥಾವನ್ನು ನಡೆಸಬೇಕು. ಜನರ ಸಲಹೆಗಳನ್ನು ಆಹ್ವಾನಿಸಿ, ಅವರನ್ನು ಸೇರಿಸಿಕೊಂಡು ಯೋಜನೆ ಘೋಷಣೆಯಾಗುವ ತನಕ ಹೋರಾಟ ನಡೆಸಬೇಕು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.
ಸಂಸದರಿಂದ ಸಚಿವರ ಭೇಟಿ: ಆಲಮಟ್ಟ-ಯಾದಗಿರಿ ರೈಲು ಮಾರ್ಗ ನಿರ್ಮಾಣದ ಕುರಿತು ರಾಯಚೂರು ಸಂಸದ ಜಿ. ಕುಮಾರ್ ನಾಯ್ಕ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿ ಮನವಿ ಸಲ್ಲಿಕೆ ಮಾಡಿದ್ದಾರೆ. ಸಚಿವರು ಸಹ ಯೋಜನೆಯ ವಿವರಗಳನ್ನು ಪಡೆದುಕೊಂಡಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.
ಆಲಮಟ್ಟಿ-ಯಾದಗಿರಿ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಕೋರಿ ಆಲಮಟ್ಟಿ-ಹುಣಸಗಿ-ಯಾದಗಿರಿ ರೈಲ್ವೆ ಹೋರಾಟ ಸಮಿತಿಯ ನಿಯೋಗ ಸಹ ರೈಲ್ವೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದೆ. ಈ ಕುರಿತು ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಹ ಮನವಿ ಪತ್ರಗಳನ್ನು ಸಲ್ಲಿಕೆ ಮಾಡಲಾಗಿದೆ.
ಈ ಉದ್ದೇಶಿತ ರೈಲು ಮಾರ್ಗ ನಿರ್ಮಾಣವಾದರೆ ವಿಯಪುರ ಮತ್ತು ಯಾದಗಿರಿ ನಡುವಿನ ಪ್ರಯಾಣದ ಅವಧಿ 328 ಕಿ. ಮೀ. ನಿಂದ 165 ಕಿ. ಮೀ.ಗೆ ಇಳಿಕೆಯಾಗಲಿದೆ. ಅಲ್ಲದೇ ಪ್ರಯಾಣಿಕರ ಸಂಚಾರ ಮಾತ್ರವಲ್ಲ ಈ ಭಾಗದಲ್ಲಿ ಸುಮಾರು 6 ಲಕ್ಷ ಟನ್ ಭತ್ತ ಬೆಳೆಯಲಾಗುತ್ತಿದ್ದು, ಇದರ ಮಾರುಕಟ್ಟೆಗೆ ಸಹ ಅನುಕೂಲವಾಗಲಿದೆ ಎಂದು ರೈಲ್ವೆ ಸಚಿವರ ಗಮನ ಸೆಳೆಯಲಾಗಿದೆ.
ಈ ರೈಲು ಮಾರ್ಗ ನಿರ್ಮಾಣವಾದರೆ ಕೃಷಿಗೆ ಸಹಕಾರಿಯಾಗಲಿದೆ. ಅಲ್ಲದೇ ಸಿಮೆಂಟ್ ಮತ್ತು ಇತರ ಕೈಗಾರಿಕೆಗಳಿಗೆ ಸಹ ಅನುಕೂಲವಾಗಲಿದೆ. ಸದ್ಯ ರೈಲು ಮಾರ್ಗ ಇಲ್ಲದ ಕಾರಣ ಜನರು ಹೂಟಗಿ, ಕಲಬುರಗಿ, ವಾಡಿ ಮೂಲಕ ಯಾದಗಿರಿಗೆ ಸಂಚಾರ ನಡೆಸುತ್ತಿದ್ದು, ಪ್ರಯಾಣದ ಅವಧಿ ಹೆಚ್ಚಾಗಿದೆ ಎಂದು ಸಚಿವರಿಗೆ ವಿವರಣೆ ನೀಡಲಾಗಿದೆ.
ಈ ರೈಲು ಮಾರ್ಗದ ಸಮೀಕ್ಷೆಗೆ ಈಗಾಗಲೇ 4 ಬಾರಿ ಬಜೆಟ್‌ನಲ್ಲಿ ಆದೇಶ ನೀಡಲಾಗಿದೆ. ಆದರೆ ಘೋಷಣೆಯಾಗಿದ್ದು, ಬಿಟ್ಟರೆ ಬೇರೆ ಕೆಲಸ ನಡೆದಿಲ್ಲ. ಕೆಲವು ದಿನಗಳ ಹಿಂದೆ ನೈಋತ್ಯ ರೈಲ್ವೆ ವಲಯದ ಹಿರಿಯ ಅಧಿಕಾರಿಗಳು ಆಲಮಟ್ಟಿಗೆ ಭೇಟಿ ನೀಡಿದ್ದರು. ಆಗ ಹೊಸ ರೈಲು ಮಾರ್ಗದ ಕುರಿತು ಮನವಿಗಳನ್ನು ಸಲ್ಲಿಕೆ ಮಾಡಲಾಗಿದೆ.












Click it and Unblock the Notifications