ಹಂಪಿಯಲ್ಲಿ ಕರ್ನಾಟಕ ಸಂಭ್ರಮ-50: ಕನ್ನಡ ಜ್ಯೋತಿರಥ ಯಾತ್ರೆಗೆ ಇಂದು ಸಿಎಂ ಚಾಲನೆ
ಕರ್ನಾಟಕ ನಾಮಕರಣವಾಗಿ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ 50 ಐತಿಹಾಸಿಕ ಕಾರ್ಯಕ್ರಮವನ್ನು ಹಂಪಿಯಲ್ಲಿಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಹಂಪಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಹಂಪಿ ಎದುರು ಬಸವಣ್ಣ ವೇದಿಕೆಯಲ್ಲಿ ಕರ್ನಾಟಕ ಸಂಭ್ರಮ ಜ್ಯೋತಿರಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಶೇಷ ವಿಮಾನದ ಮೂಲಕ ಬೆಳಗ್ಗೆ 10.50ಕ್ಕೆ ಕೊಪ್ಪಳದ ಗಿಣಿಗೇರಾ ಏರ್ಸ್ಟ್ರಿಪ್ಗೆ ಬಂದಿಳಿದ ಸಿಎಂ ಸಿದ್ದರಾಮಯ್ಯ ಅವರು ಸಂಜೆ 5 ಗಂಟೆಗೆ ವಿಶ್ವವಿಖ್ಯಾತ ಹಂಪಿಯಲ್ಲಿ ಕರುನಾಡಿನ ಜ್ಯೋತಿ ರಥಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಹಂಪಿಯ ಶ್ರೀ ವಿರುಪಾಕ್ಷ ದೇವಸ್ಥಾನದ ಆವರಣದಲ್ಲಿ ದೀಪ ಬೆಳಗಿಸುವ ಮೂಲಕ ಕರ್ನಾಟಕ ಸಂಭ್ರಮ-50 ಜ್ಯೋತಿ ರಥ ಯಾತ್ರೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಸಂಜೆ 5.50ಕ್ಕೆ ಅದೇ ಸ್ಥಳದಲ್ಲಿ ಕನ್ನಡಾಂಬೆಗೆ ನುಡಿನಮನ, ಧರ್ಮಗಳ ಸಂದೇಶ ಹಾಗೂ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಹಂಪಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಹಂಪಿಯಲ್ಲಿ ಅವರು ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಗಂಗಾ ಜಲಾಭಿಷೇಕ, ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಭುವನೇಶ್ವರಿ ದೇಗುಲದಲ್ಲಿ ಪಂಚಾಮೃತ ಅಭಿಷೇಕ ಪೂಜೆ ಸಲ್ಲಿಸಲಿದ್ದಾರೆ. ವಿರೂಪಾಕ್ಷೇಶ್ವರ ರಥಬೀದಿಯಲ್ಲಿ ಜನಪದ ಕಲಾತಂಡಗಳೊಂದಿಗೆ ಕಾಲ್ನಡಿಗೆಯಲ್ಲೇ ಬಸವಣ್ಣ ಮಂಟಪ ವೇದಿಕೆಯವರೆಗೆ ಸಾಗಲಿದ್ದಾರೆ. ಇದೇ ಸಮಯದಲ್ಲಿ ರಥ ಬೀದಿಯಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆ, ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ನಡೆಯಲಿದೆ. ಬಳಿಕ, ಬಸವಣ್ಣ ಮಂಟಪ ವೇದಿಕೆಯಲ್ಲಿ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಹಂಪಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲ ಧರ್ಮದ ಸಂದೇಶ ಓದಲಾಗುವುದು. ನಾವೆಲ್ಲರೂ ಒಂದು ಎಂಬ ಸೌಹಾರ್ದ ಸಂದೇಶ ಸಾರಲಾಗುವುದು. ಜತೆಗೆ ಸಾಮೂಹಿಕ ಪ್ರತಿಜ್ಞೆ ಸ್ವೀಕಾರ ಮಾಡಲಾಗುವುದು. ಹಂಪಿಯಿಂದ ಕನ್ನಡ ಜ್ಯೋತಿರಥ ಯಾತ್ರೆಹಂಪಿಯಿಂದ ಗದಗಿಗೆ ಜ್ಯೋತಿರಥಯಾತ್ರೆ ಸಾಗಲಿದೆ. ವಿಜಯನಗರದ ಗಡಿ ದಾಟುತ್ತಿದ್ದಂತೆಯೇ ಕೊಪ್ಪಳದ ಜಿಲ್ಲಾಡಳಿತ ಬರ ಮಾಡಿಕೊಳ್ಳಲಿದೆ. ಬಳಿಕ ಗದಗ ಜಿಲ್ಲಾಡಳಿತ ಬರಮಾಡಿಕೊಳ್ಳಲಿದ್ದು, ಗದುಗಿನ ವೀರನಾರಾಯಣ ದೇವಾಲಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ ಅವರನ್ನು ಸನ್ಮಾನಿಸಲಾಗುವುದು.
ಹಂಪಿಯಿಂದ ಹೊಸಪೇಟೆ, ಕೊಪ್ಪಳ ಮಾರ್ಗವಾಗಿ ಜ್ಯೋತಿ ರಥಯಾತ್ರೆ ಗದಗಕ್ಕೆ ತೆರಳಲಿದ್ದು ಶುಕ್ರವಾರ ಅಲ್ಲಿ ಕಾರ್ಯಕ್ರಮ ನಡೆಯಲಿದೆ. ಸುವರ್ಣ ಸಂಭ್ರಮ ನೆನಪಿನಲ್ಲಿ 50 ಕನ್ನಡ ಪುಸ್ತಕಗಳ ಬಿಡುಗಡೆ, 50 ಮಹಿಳೆಯರಿಗೆ ಸನ್ಮಾನ ಸಮಾರಂಭ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.
ಈ ಕನ್ನಡ ಜ್ಯೋತಿರಥಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದೆ. ಈ ನವೆಂಬರ್‌ನಿಂದ ಮುಂದಿನ ವರ್ಷ ನವೆಂಬರ್‌ವರೆಗೆ ವರ್ಷದುದ್ದಕ್ಕೂ ಕಾರ್ಯಕ್ರಮ ನಡೆಯಲಿದೆ. ಬಳಿಕ ವಿಧಾನಸೌಧದಲ್ಲಿಅವಿಸ್ಮರಣೀಯ ಕಾರ್ಯಕ್ರಮ ನಡೆಯಲಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಿದ್ದು, 50 ವರ್ಷದ ಬಳಿಕ ಕಾರ್ಯಕ್ರಮ ನಡೆಯುತ್ತಿದೆ.












Click it and Unblock the Notifications