ವಿಜಯಪುರ: 4.60 ಲಕ್ಷ ಮನೆ ಪೈಕಿ 2.87 ಮನೆಗೆ ಕುಡಿಯುವ ನೀರು ಪೂರೈಕೆ, ಇದು ಬಿಜೆಪಿ ಸಾಧನೆ: ಸಿಎಂ ಬೊಮ್ಮಾಯಿ
ವಿಜಯಪುರ ಜಿಲ್ಲೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು ಸುಮಾರು 4 ಸಾವಿರ ಕೋಟಿ ರೂಪಾಯಿ ಬಳಕೆ ಆಗಿದ್ದರ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೀಡಿದ ವಿವರಣೆ ಇಲ್ಲಿದೆ.
ವಿಜಯಪುರ, ಮಾರ್ಚ್ 21: ವಿಜಯಪುರ ಜಿಲ್ಲೆ ವ್ಯಾಪ್ತಿಯಲ್ಲಿ 4.60 ಲಕ್ಷಕ್ಕೂ ಅಧಿಕ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ರಾಜ್ಯ ಸರ್ಕಾರ ಹೊಂದಿದೆ. ಆ ಪೈಕಿ ಈಗಾಗಲೇ 2.87 ಸಾವಿರ ಮನೆಗಳಿಗೆ ನೀರು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಜಿಲ್ಲೆಯ ಜಿಲ್ಲಾಡಳಿತ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮುದ್ದೇಬಿಹಾಳದ ನಾಲತಾವಾಡ ಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ 'ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರ'ದ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಕಾರಿಗಳ ಶಿಲಾನ್ಯಾಸ ನೇರವೇರಿಸಲಾಯಿತು. ನಂತರ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಣೆಯನ್ನು ಮುಖ್ಯಮಂತ್ರಿಗಳು ಮಾಡಿದರು.

ಜಲ್ ಜೀವನ್ ಮಿಷನ್ ಅಡಿಯಲ್ಲಿ ದೇಶದಲ್ಲಿ 12 ಕೋಟಿ ಮನೆಗಳಿಗೆ ನೀರು ಒದಗಿಸಲಾಗಿದೆ. ಮೂರು ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದ್ದೇವೆ. ಮುಂದಿನ ವರ್ಷವೇ 25 ಲಕ್ಷ ಮನೆಗಳಿಗೆ ನೀರು ಪೂರೈಸಲಾಗುವುದು. ಜಲಧಾರೆಯಲ್ಲಿ ನಗರ ಪ್ರದೇಶಗಳಲ್ಲಿ 3,000 ಕೋಟಿ ರೂಪಾಯಿ ಒದಗಿಸಿದ್ದೇವೆ ಎಂದು ಅವರು ತಿಳಿಸಿದರು.
4000 ಕೋಟಿ ರೂ. ಮೌಲ್ಯದ ಯೋಜನೆ
1,600 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಇಂದು ನೆರವೇರಿದೆ. ಈ ಮೊದಲು 2500 ಕೋಟಿ ರೂ.ಗಳ ವೆಚ್ಚದ ಅಭಿವೃದ್ಧಿಯನ್ನು ಶಾಸಕ ನಡಹಳ್ಳಿ ಮಾಡಿದ್ದಾರೆ. ಒಂದು ಅವಧಿಯಲ್ಲಿ ನಾಲ್ಕು ಸಾವಿರ ಕೋಟಿ ರೂ. ಗಳಿಂತ ಹೆಚ್ಚು ಮೌಲ್ಯದ ಅಭಿವೃದ್ಧಿ ಮಾಡಿರುವುದು ದಾಖಲೆಯೇ ಸರಿ. ಉತ್ತರ ಕರ್ನಾಟಕದ, ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಬೇಕು ಎಂಬುದರ ಕುರಿತು ನಂಜುಂಡಪ್ಪ ವರದಿ ಸೇರಿದಂತೆ ಅನೇಕ ವರದಿಗಳು ಇವೆ.

ನಂಜುಂಡಪ್ಪ ವರದಿಯ ಅನುಷ್ಠಾನ ಮಾಡಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು. ಈ ಭಾಗದಲ್ಲಿ ವಿಶೇಷವಾಗಿ ನೀರಾವರಿಗೆ ಮೂಲಭೂತ ಸೌಕರ್ಯ, ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿಗೆ ವಿಶೇಷ ಒತ್ತು ನೀಡಲಾಯಿತು. ಪರಿಣಾಮ ಇಂದು ನಾವು ನೋಡುತ್ತಿದ್ದೇವೆ. ಅಭಿವೃದ್ಧಿ ಪರ್ವ ಇಲ್ಲಾಗಿದೆ.
ನೀರಾವರಿಗೆ ಚಿಮ್ಮನಗಿ, ಮುಳವಾಡಿ, ಗುತ್ತಿ ಬಸವಣ್ಣ, ಕೊಪ್ಪಳ ಏತ ನೀರಾವರಿ ಸೇರಿದಂತೆ ಒಟ್ಟು 9 ನೀರಾವರಿಯ ಪ್ರಕ್ರಿಯೆಗೆ ವೇಗ ನೀಡಲಾಯಿತು. ಅಂದಿನ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಈ ಪ್ರಕ್ರಿಯೆಗೆ ಶಿಫಾರಸ್ಸು ಮಾಡಿ 2009 ತಿಂಗಳಿನಲ್ಲಿ ಚಿಮ್ಮಲಗಿ ಏತನೀರಾವರಿ, ಮುಳವಾಡದ 2 ನೇ ಹಂತದ ಏತ ನೀರಾವರಿಗೆ ಅನುಮೋದನೆ ಪಡೆಯಲಾಯಿತು ಎಂದರು.

ಕೆಲಸಗಳೇ ಗ್ಯಾರಂಟಿ, ಆಶ್ವಾಸನೆಗಳಲ್ಲ: ಸಿಎಂ
ಕರ್ನಾಟಕ ರಾಜ್ಯ ಸರ್ಕಾರ ರೈತಪರ ವಾದ ಸರ್ಕಾರ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 16 ಸಾವಿರ ಕೋಟಿ ವೆಚ್ಚದಲ್ಲಿ 54 ಲಕ್ಷ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಮುಧೋಳದಲ್ಲಿ 975 ಕೋಟಿ ರೂಪಾಯಿ ಅನುದಾನವನ್ನು 47 ಲಕ್ಷ ರೈತರಿಗೆ ಬಿಡುಗಡೆ ಮಾಡಲಾಗುತ್ತಿದೆ. ನಾವು ಮಾತಿಗಿಂತ ಕಾರ್ಯ ಮುಖ್ಯ ಎಂದು ನಾವು ಮಾಡಿ ತೋರಿಸುತ್ತೇವೆ. ನಮ್ಮ ಕೆಲಸಗಳೇ ನಮ್ಮ ಗ್ಯಾರಂಟಿ. ಆಶ್ವಾಸನೆಗಳು ನಮ್ಮ ಗ್ಯಾರಂಟಿ ಅಲ್ಲ ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದರು.
ರೈತ ವಿದ್ಯಾನಿಧಿ ಯೋಜನೆ, ರೈತಶಕ್ತಿ ಯೋಜನೆಯಡಿ 386 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ವರ್ಷ ಭೂ ಶಕ್ತಿ ಯೋಜನೆಯಡಿ ಬೀಜ-ಗೊಬ್ಬರಕ್ಕೆ 10 ಸಾವಿರ ರೂಪಾಯಿತಿ ಒದಗಿಸಲಾಗುವುದು. ರೈತರಿಗೆ ಜೀವ ವಿಮೆಗಾಗಿ 180 ಕೋಟಿ ಮೀಸಲಿಡಲಾಗಿದೆ. 53 ಲಕ್ಷ ಜನರಿಗೆ ಇದರ ಪ್ರಯೋಜನವಾಗಲಿದೆ. ಶೂನ್ಯ ಬಡ್ಡಿದರದಲ್ಲಿ 5 ಲಕ್ಷದವರೆಗೆ ಸಾಲದ ವ್ಯವಸ್ಥೆ,3500 ಕೋಟಿ ರೂ.ಗಳ ಆವರ್ತ ನಿಧಿಯಡಿ ಮೀಸಲಿಡಲಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ್, ರಮೇಶ್ ಬೂಸನೂರ ಸೇರಿದಂತೆ ಸ್ಥಳೀಯ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications