ಪರೇಶ್ ಮೇಸ್ತ: ಡಿ. 13, 14ರಂದು ರಾಜ್ಯಾದ್ಯಂತ ವಿಎಚ್‌ಪಿ ಪ್ರತಿಭಟನೆ
ಉಡುಪಿ, ಡಿಸೆಂಬರ್ 13: ಉತ್ತರ ಕನ್ನಡದ ಪರೇಶ್ ಮೇಸ್ತ ಅನುಮಾನಾಸ್ಪದ ಸಾವಿನ ಪ್ರಕರಣ ಖಂಡಿಸಿ ಇಂದು ಮತ್ತು ನಾಳೆ (ಡಿಸೆಂಬರ್ 13 ಮತ್ತು 14) ವಿಶ್ವ ಹಿಂದೂ ಪರಿಷತ್ (ವಿಹಿಂಪ) ಹಾಗು ಬಜರಂಗದಳ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ವಿಹಿಂಪ ಮುಖಂಡ ಗೋಪಾಲ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, "ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಅವರದ್ದು ಸಹಜ ಸಾವಲ್ಲ; ವ್ಯವಸ್ಥಿತ ಕೊಲೆ," ಎಂದು ಆರೋಪಿಸಿದ ಅವರು, ಪರೇಶ್ ಮೇಸ್ತ ಪ್ರಕರಣದ ತನಿಖೆಯನ್ನು 'ಎನ್ಐಎ'ಗೆ ವಹಿಸುವಂತೆ ಒತ್ತಾಯಿಸಿದರು.

ಪರೇಶ್ ಮೇಸ್ತ ಹತ್ಯೆಯ ಹಿಂದೆ ಅಜಾದ್ ಅಣ್ಣೆಗೇರಿ ಎಂಬವನಿದ್ದಾನೆ. ಆಜಾದ್ ಜಿಹಾದಿ ಚಟುವಟಿಕೆ ಬೆಂಬಲ ನೀಡುತ್ತಿರೋ ಕಾಂಗ್ರೆಸ್ ಮುಖಂಡ ಎಂದು ಅವರು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಈ ಆಜಾದ್ ಎಂಬಾತನೇ ಅವರಿಗೆ ಸನ್ಮಾನ ಮಾಡಿದ್ದ ಎಂದು ದೂರಿದ ಅವರು, "ಪೊಲೀಸರು ರಾಜಕೀಯ ಒತ್ತಡದಿಂದಾಗಿ ಮುಸ್ಲಿಮರ ಜೊತೆ ಕೈ ಜೋಡಿಸಿದ್ದಾರೆ," ಎಂದು ದೂರಿದರು.
ಮೇಸ್ತ ಹತ್ಯೆಯಲ್ಲಿ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ ಎಂದು ಹೇಳಿದ ಅವರು, "ಸಿಎಂ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಪರೇಶ್ ಮೇಸ್ತ ಸಾವಿನ ಸುದ್ದಿ ಮುಚ್ಚಿಡಲಾಗಿತ್ತು," ಎಂದು ಅವರು ಆರೋಪಿಸಿದರು.
ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಸಂದರ್ಭವೂ ಸರಕಾರ ಈ ರೀತಿ ನಡೆದುಕೊಂಡಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, "ಮೇಸ್ತ ಸಾವಿನಿಂದ ರಾಜ್ಯದಲ್ಲಿ 20 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಂತಾಗಿದೆ," ಎಂದು ವಿಷಾದ ವ್ಯಕ್ತಪಡಿಸಿದರು.
ಸರಕಾರದ ಒತ್ತಡದಿಂದ ಅಧಿಕಾರಿಗಳು ಪರೇಶ್ ಮೇಸ್ತ ಅವರದ್ದು ಸಹಜ ಸಾವು ಎನ್ನುತ್ತಿದ್ದಾರೆ. ಮೇಸ್ತ ಅವರನ್ನು ಕೊಂದು ಕೆರೆಗೆ ಎಸೆಯಲಾಗಿದೆ ಎಂದು ಅವರು ಆರೋಪಿಸಿದರು.












Click it and Unblock the Notifications