ಉಡುಪಿ; ಬಸದಿಗಳ ಪ್ರದೇಶ ಒತ್ತುವರಿ ತೆರವಿಗೆ ಮನವಿ
ಉಡುಪಿ, ಮಾರ್ಚ್ 04: ಬ್ರಹ್ಮಾವರ ತಾಲೂಕು ಕೋಟ ಹೋಬಳಿಯ ಹೊಸಾಳ ಗ್ರಾಮದ ವ್ಯಾಪ್ತಿಯ ಸಾವಿರದ ಇನ್ನೂರು ವರ್ಷಗಳಷ್ಟು ಪುರಾತನವಾದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಮತ್ತು ಶ್ರೀ ಆದಿನಾಥ ಸ್ವಾಮಿ ಬಸದಿ ಇರುವ ಪ್ರದೇಶವನ್ನು ಹಲವಾರು ಜನರು ಅತಿಕ್ರಮಿಸಿ ಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಜೈನ ಸಮಾಜ ಹಾಗೂ ಜೈನ್ ಮಿಲನ್‌ಗಳು ಉಡುಪಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದರು. ಆಕ್ರಮಿಸಿಕೊಂಡಿರುವ ಪ್ರದೇಶವನ್ನು ತಕ್ಷಣವೇ ತೆರವುಗೊಳಿಸಿ ತಂತಿಬೇಲಿಯನ್ನು ನಿರ್ಮಿಸಿ ತಾತ್ಕಾಲಿಕ ರಕ್ಷಣೆ ಒದಗಿಸುವಂತೆ ಮನವಿ ಸಲ್ಲಿಸಿದರು.
ಬಸದಿ ಪ್ರದೇಶವನ್ನು ಗೊಬ್ಬರ ಹಾಕಲು, ಟಾಯ್ಲೆಟ್ ಗುಂಡಿಗಳನ್ನು ಮಾಡಿಕೊಂಡು ಕಸವನ್ನು ಹಾಕಲು ಉಪಯೋಗಿಸುತ್ತಿದ್ದಾರೆ. ಆಕ್ರಮಿತ ಪ್ರದೇಶವನ್ನು ಈಗಾಗಲೇ ಬಾರ್ಕೂರಿನ ಜೈನ ಸಮಾಜದ ಮನವಿಯಂತೆ ತಹಶೀಲ್ದಾರರು ಸರ್ವೇಯನ್ನು ನಡೆಸಿದ್ದಾರೆ. ಒತ್ತುವರಿ ಮಾಡಿರುವುದು ವರದಿಯಲ್ಲಿ ದೃಢವಾಗಿದೆ. ಅತಿಕ್ರಮಣದಾರರಿಗೆ ಜಾಗ ತೆರವು ಮಾಡುವಂತೆ ನೋಟೀಸ್ ಸಹ ನೀಡಲಾಗಿದೆ.

ಆದರೆ ಇದುವರೆಗೆ ಅತಿಕ್ರಮಿಸಿಕೊಂಡಿರುವ ಜಾಗವನ್ನು ತೆರವುಗೊಳಿಸಿಲ್ಲ. ಜೈನ ಸಮಾಜವು ಈ ಬಸದಿಗಳ ರಕ್ಷಣೆಗೆ ಕಾರ್ಯಪ್ರವೃತ್ತರಾಗಿದ್ದು, ಬಾರಕೂರಿನ ಕಾರ್ಯಕರ್ತ ಶಂಕರ ಶಾಂತಿಯವರು ದಾಖಲೆಗಳನ್ನು ಒದಗಿಸಲು ಸಹಕರಿಸಿದ್ದರು.
ಆರ್‌ಟಿಐ ಕಾರ್ಯಕರ್ತ ಶಂಕರ್ ಶಾಂತಿ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ಬಸದಿಯನ್ನು ಆಕ್ರಮಿಸಿರುವ ಪ್ರದೇಶವನ್ನು ತಕ್ಷಣವೇ ತೆರವುಗೊಳಿಸಿ ತಂತಿ ಬೇಲಿಯನ್ನು ನಿರ್ಮಿಸಿ ತಾತ್ಕಾಲಿಕ ರಕ್ಷಣೆ ನೀಡಬೇಕು ಹಾಗೂ ಶಂಕರ್ ಶಾಂತಿ ಅವರ ಮೇಲೆ ನಡೆದ ಹಲ್ಲೆ ಆರೋಪಿಗಳನ್ನು ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.












Click it and Unblock the Notifications