ಉಡುಪಿ: ಸೋಮೇಶ್ವರ ಹೋಟೆಲಿನ 'ಭಕ್ತ' ಇನ್ನಿಲ್ಲ
ಉಡುಪಿ, ಡಿ.7: ಆಗುಂಬೆ ಘಾಟ್ ಇಳಿದು ಸೋಮೇಶ್ವರದಲ್ಲಿನ ಹೋಟೆಲಿನಲ್ಲಿ ನೀರ್ ದೋಸೆ ರುಚಿ ಸವಿಯುವುದೇ ಆನಂದ. ಗ್ರಾಹಕರಿಗೆ ಇಂಥ ರುಚಿ ಪರಿಚಯಿಸಿದ ಮನೋಹರ್ ಭಕ್ತ ಅವರು ಭಾನುವಾರ ಮುಂಜಾನೆ ದುರ್ಮರಣ ಹೊಂದಿದ್ದಾರೆ.
ಸೋಮೇಶ್ವರದ ಜನಪ್ರಿಯ ಹೋಟೆಲ್ ಗಳ ಪೈಕಿ ಮನೋಹರ್ ಭಕ್ತ ಅವರ ಹೋಟೆಲ್ ಕೂಡಾ ಒಂದಾಗಿದೆ. ಮನೋಹರ್ ಅವರು ಕುಟುಂಬ ಸಮೇತ ಮುಲ್ಕಿಯ ವೆಂಕಟರಮಣ ದೇಗುಲಕ್ಕೆ ಹೋಗಿ ಹಿಂತಿರುಗುವಾಗ ರಸ್ತೆ ಅಪಘಾತದಲ್ಲಿ ಮನೋಹರ್ ಸೇರಿ ಮೂವರು ಸಾವನ್ನಪ್ಪಿದ್ದಾರೆ.

ಉಡುಪಿ ಜಿಲ್ಲೆ ಹೆಬ್ರಿಯ ಶಿವಪುರದಲ್ಲಿ ಮನೋಹರ್ ಅವರಿದ್ದ ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಮನೋಹರ್ ಅವರ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಇಬ್ಬರನ್ನು ಮಣಿಪಾಲ್ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮನೋರಮ ಭಕ್ತ(62), ಮನೋಹರ್ ಭಕ್ತ(42) ಮತ್ತು ಸ್ವಾತಿ ಭಕ್ತ(32) ಸಾವನ್ನಪ್ಪಿದ್ದಾರೆ.
ಮನೋಹರ್ ಸ್ವಾತಿ ದಂಪತಿ ಮಕ್ಕಳಾದ 8 ವರ್ಷದ ಮಾನಸ ಮತ್ತು 6 ವರ್ಷದ ಸಹನಾ ಅಪಾಯದಿಂದ ಪಾರಾಗಿದ್ದಾರೆ.ಒಂದು ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ['ಭಕ್ತ' ಅವರ ಮಗಳು ಮೃತ]
ಮನೋಹರ್ ಅವರಿದ್ದ ಕಾರು ಮುಲ್ಕಿಯಿಂದ ಸೋಮೇಶ್ವರಕ್ಕೆ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಉಡುಪಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಲಾರಿ ಈ ಕಾರಿಗೆ ಡಿಕ್ಕಿ ಹೊಡೆದಿದೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.












Click it and Unblock the Notifications