ಉಡುಪಿ ಕಾಲೇಜು ಶೌಚಾಲಯದಲ್ಲಿ ಚಿತ್ರೀಕರಣ ಕೇಸ್‌ಗೆ ಟ್ವಿಸ್ಟ್: ಎಸ್‌ಪಿ ಸ್ಪಷ್ಟನೆ
ಮಂಗಳೂರು, ಜುಲೈ 25: ಖಾಸಗಿ ಕಾಲೇಜಿನ ಲೇಡಿಸ್ ಶೌಚಾಲಯದಲ್ಲಿ ಮೊಬೈಲ್ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದೆ. ಉಡುಪಿಯ ಪ್ರತಿಷ್ಟಿತ ನೇತ್ರ ಜ್ಯೋತಿ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಪ್ರಕರಣದ ತನಿಖೆ ಚುರುಕುಗೊಂಡಿದೆ.
ಈ ಪ್ರಕರಣದ ವಿಚಾರವಾಗಿ ಸಾಮನ್ ಆಕ್ಸ್ಫರ್ಡ್ ಯುನಿವರ್ಸಿಟಿಯ ವಿದ್ಯಾರ್ಥಿ ನಾಯಕಿಯಾಗಿದ್ದ ರಶ್ಮಿ ಸಾಮಂತ್ ಟ್ವೀಟ್ ಮಾಡಿದ್ದು, ಉಡುಪಿಯಲ್ಲಿ ನಡೆದ ಈ ಘಟನೆಯ ಬಗ್ಗೆ ಯಾರು ಮಾತನಾಡುತ್ತಿಲ್ಲ ಯಾಕೆ? ಮೂವರು ಯುವತಿಯರು ಕಾಲೇಜು ಟಾಯ್ಲೆಟ್‌ನಲ್ಲಿ ಕ್ಯಾಮೆರಾ ಇರಿಸಿದ್ದಾರೆ. ಹಿಂದೂ ಹುಡುಗಿಯರ ವಿಡಿಯೋ ಮಾಡಲು ಕ್ಯಾಮೆರಾ ಇರಿಸಿದ್ದಾರೆ. ಬಳಿಕ ವಿಡಿಯೋ ಫೋಟೋ ತಮ್ಮ ಸಮುದಾಯದಲ್ಲಿ ಹಂಚಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಟ್ವೀಟ್ ವೈರಲ್ ಆದ ಬೆನ್ನಲ್ಲೇ ಮಣಿಪಾಲ ಪೊಲೀಸರು ರಶ್ಮಿ ಸಮಂತ್ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಪೊಲೀಸರು ರಶ್ಮಿ ಸಮಂತ್ ಮನೆಗೆ ತೆರಳಿ ವಿಚಾರಣೆ ನಡೆಸಿರುವುದನ್ನು ಹಲವರು ಆಕ್ಷೇಪಿಸಿದ್ದಾರೆ. ರಶ್ಮಿ ಸಾಮಂತ್ ಸದ್ಯ ಉತ್ತರ ಭಾರತ ಪ್ರವಾಸದಲ್ಲಿದ್ದು, ಮಣಿಪಾಲ ಪೊಲೀಸರು ತಂದೆ ತಾಯಿಯ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸ್ ನಡೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ರಾಷ್ಟ್ರೀಯವಾದಿ ಚಿಂತಕರಿಗೆ ಕಿರುಕುಳ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ಪ್ರಕರಣದ ಬಗ್ಗೆ ಎಸ್‌ಪಿ ಸ್ಪಷ್ಟನೆ
ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಸುದ್ದಿಗೋಷ್ಠಿ ನಡೆಸಿದ್ದು, ರಶ್ಮಿ ಸಾವಂತ್ ಹೆಸರಿನಲ್ಲಿ ಟ್ವೀಟ್ ಬಗ್ಗೆ ಅಕೌಂಟ್ ಪರಿಶೀಲಿಸಿದ್ದೇವೆ. ಇದೇ ವಿಚಾರದಲ್ಲಿ ಅವರ ಮನೆಯವರ ಬಳಿ ಮಾತನಾಡಿದ್ದೇವೆ. ಯಾವುದೇ ದುರುದ್ದೇಶದಿಂದ ಮಾಹಿತಿ ಪಡೆದುಕೊಂಡದ್ದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ವಾರ ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜು ವಿಚಾರವಾಗಿ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ವಿಚಾರದ ಜೊತೆ ಬೇರೆ ಬೇರೆ ಉದ್ದೇಶದಿಂದ ಮಾಹಿತಿಗಳು ಶೇರ್ ಆಗುತ್ತಿದೆ. ಹಿಡನ್ ಕ್ಯಾಮರಾ ಮೂಲಕ ವಿಡಿಯೋ ಚಿತ್ರೀಕರಿಸಿದ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಬ್ಯ್ಲಾಕ್ಮೇಲ್ ಬಗ್ಗೆ ವಿಡಿಯೋ ಹರಿದಾಡಿದ ಬಗ್ಗೆ ಗಮನ ಹರಿಸಿದ್ದೇವೆ. ಬೇರೆ ಕಡೆ ವಿಡಿಯೋ ಶೇರ್ ಆಗುತ್ತಿದೆ, ವಾಯ್ಸ್ ಎಡಿಟ್ ಮಾಡಲಾಗಿದೆ. ಸತ್ಯಾಸತ್ಯತೆ ಗೊತ್ತಿಲ್ಲದೆ ಎಲ್ಲೆಡೆ ವಿಡಿಯೋ ಶೇರ್ ಮಾಡಿದರೆ ತಪ್ಪಾಗುತ್ತೆ. ವೈರಲ್ ಆಗಿರುವ ಬಗ್ಗೆ ಫೇಸ್ಬುಕ್, ವಾಟ್ಸಾಪ್ ಮೇಲೆ ನಿಗಾ ಇರಿಸಲಾಗಿದೆ ಎಂದಿದ್ದಾರೆ.
ಸಾಮಾಜಿಕ ಹಿತಾಸಕ್ತಿಯಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಯಾವುದೇ ಸುಳಿವು ಸಿಗುತ್ತಿಲ್ಲ. ಯುವತಿಯರ ಮೊಬೈಲ್ನಲ್ಲಿ ಯಾವುದೇ ಫೋಟೋ, ವಿಡಿಯೋ ಸಿಗ್ತಿಲ್ಲ. ಕಾಲೇಜು ನಿಯಮಾವಳಿ ಪ್ರಕಾರ ಅವರು ವಿಚಾರಣೆ ನಡೆಸಿದ್ದಾರೆ. ಫನ್ಗೋಸ್ಕರ ಇದೆಲ್ಲ ನಡೆದಿದೆ ಎಂದು ವಿದ್ಯಾರ್ಥಿನಿಯರು ಬರೆದುಕೊಟ್ಟಿದ್ದಾರೆ. ಬೇಡದ ವಿಚಾರ ಹರಿಬಿಟ್ಟು ಜನರ ಮನಸ್ಸಿನಲ್ಲಿ ಗೊಂದಲು ಸೃಷ್ಟಿಸುವುದು ಬೇಡ. ದಾಖಲೆ ಇದ್ದರೆ, ಪೊಲೀಸರಿಗೆ ನೀಡಿ ಸಹಕರಿಸಿ ಎಂದು ಎಸ್‌ಪಿ ಮನವಿ ಮಾಡಿದ್ದು, ತಪ್ಪು ಮಾಹಿತಿ ನೀಡಿದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಪ್ರಕರಣದ ಬಗ್ಗೆ ಉಡುಪಿ ಶಾಸಕರು ಹೇಳಿದ್ದೇನು?
ಈ ಬಗ್ಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದು, ಪ್ರಕರಣ ನಡೆದಾಗ ನಾನು ಅಧಿವೇಶನದಲ್ಲಿದ್ದೆ. ತಪ್ಪಿತಸ್ಥ ವಿದ್ಯಾರ್ಥಿನಿಯರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಉಡುಪಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಜಿಲ್ಲ. ಮಹಿಳೆಯರಿಗೆ ಗೌರವ ಕೊಡುವ ಜಿಲ್ಲೆ ಉಡುಪಿ. ಈ ಮೂರು ಹುಡುಗಿಯರ ವರ್ತನೆಯಿಂದ ತಲೆತಗ್ಗಿಸುವಂತಾಗಿದೆ. ಇದರಿಂದ ಜಿಲ್ಲೆಯ ಜನತೆಗೆ ಅಪಮಾನವಾಗಿದೆ. ಈ ರೀತಿಯ ಹುಡುಗಾಟಿಕೆ ಮಾಡುವುದು ಸರಿಯಲ್ಲ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಈ ಘಟನೆಯ ಬಗ್ಗೆ ನನಗೆ ಸಂಶಯ ಇದೆ ಎಂದು ಆರೋಪಿಸಿದ್ದಾರೆ.
ಟಾಯ್ಲೆಟ್‌ನಲ್ಲಿ ವಿಡಿಯೋ ಕ್ಯಾಮೆರಾ ಇಟ್ಟಿರುವುದು ಸರಿಯಲ್ಲ. ಮೂರು ಯುವತಿಯರ ಬಗ್ಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸುತ್ತೇನೆ. ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳ ಗಮನಕ್ಕೂ ತರುತ್ತೇವೆ. ಸಂಘಟನೆಯಲ್ಲಿ ಕೆಲಸ ಮಾಡುವವರನ್ನು ಗಡಿಪಾರು ಮಾಡುತ್ತಾರೆ. ಮೊಬೈಲ್ ದಾಖಲೆ ಕಲೆ ಹಾಕಿ ಸೂಕ್ತ ಕ್ರಮ ಜರುಗಿಸಿ. ಮತ್ತಷ್ಟು ಮಾಹಿತಿ ಕಲೆ ಹಾಕಿ, ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಉಡುಪಿ ಜಿಲ್ಲೆಯ ಪೊಲೀಸ್ ಇಲಾಖೆ ಮೇಲೆ ವಿಶ್ವಾಸ ಇದೆ. ವಿಳಂಬ ಮಾಡಿದರೆ ನ್ಯಾಯಕ್ಕಾಗಿ ಹೋರಾಡುತ್ತೇವೆ ಎಂದಿದ್ದಾರೆ.
ಇನ್ನು ಮುಸ್ಲಿಂ ವಿದ್ಯಾರ್ಥಿನಿಯರ ನಡೆ ಸಂಶಯ ಹುಟ್ಟಿಸುತ್ತಿದೆ. ಜಿಹಾದಿ ಸಂಘಟನೆಗಳ ಕೈವಾಡ ಸಂಶಯ ಇದೆ. ಕಾಲೇಜಿಗೆ ಭೇಟಿ ನೀಡಿ ಮಾತನಾಡುತ್ತೇನೆ. ವಿಡಿಯೋ ಕ್ಲಿಪಿಂಗ್ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಸೂಕ್ತ ಕ್ರಮ ಜರುಗಿಸಬೇಕು ಎಂದ ಯಶ್ ಪಾಲ್ ಸುವರ್ಣ, ಪೊಲೀಸರು ರಶ್ಮಿ ಸಾಮಂತ್ ಮನೆಗೆ ಹೋಗಿ ವಿಚಾರಣೆ ಮಾಡಿದ್ದಾರೆ. ರಾಷ್ಟ್ರೀಯ ಚಿಂತನೆಯವರಿಗೆ ಕಿರುಕುಳ ನೀಡಿದರೆ ಸಹಿಸಲು ಸಾಧ್ಯವಿಲ್ಲ. ರಶ್ಮಿ ಸಾಮಂತ್ ಮನೆಯವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಗೃಹ ಮಂತ್ರಿಗಳಿಗೆ ಎಚ್ಚರಿಕೆ ಮತ್ತು ಮನವಿ ಮಾಡುತ್ತೇವೆ. ಇಂತಹ ಪ್ರಕರಣಗಳಿಂದ ಶಿಕ್ಷಣ ಸಂಸ್ಥೆಗಳಿಗೆ ಹೊಡೆತ ಬೀಳುತ್ತದೆ. ಪೊಲೀಸ್ ಇಲಾಖೆ ಸುಮೊಟೊ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದರು.
ಶೌಚಾಲಯದಲ್ಲಿ ಮೊಬೈಲ್ ಚಿತ್ರೀಕರಣ: ಕಾಲೇಜು ಆಡಳಿತ ಮಂಡಳಿ ಹೇಳಿದ್ದೇನು?
ಕಾಲೇಜು ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಮೊಬೈಲ್ ಚಿತ್ರೀಕರಣದ ಬಗ್ಗೆ ನೇತ್ರ ಜ್ಯೋತಿ ಕಾಲೇಜಿನ ನಿರ್ದೇಶಕಿ ರಶ್ಮೀ ಕೃಷ್ಣಪ್ರಸಾದ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಮೂವರು ಒಂದೇ ಕ್ಲಾಸ್, ಇನ್ನೊಬ್ಬಳು ಹುಡುಗಿ ಬೇರೆ ತರಗತಿಯವಳು. ಇಂತಹ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಮೊಬೈಲ್ ಬ್ಯಾನ್ ಮಾಡಿದ್ದೇವೆ. ನಮ್ಮ ಜವಾಬ್ದಾರಿ ಸುರಕ್ಷತೆ ಹಾಗಾಗಿ ನಿಯಮ ಮಾಡಿದ್ದೇವೆ.
ಸಂತ್ರಸ್ತೆ ಯಾವುದೇ ದೂರು ಕೊಟ್ಟಿಲ್ಲ, ಕಾಲೇಜ್ ಮೇಟ್ ಆಗಿರುವ ಕಾರಣ ದೂರು ಕೊಡಲ್ಲ ಎಂದಿದ್ದಾಳೆ ಎಂದು ತಿಳಿಸಿದ್ದಾರೆ.
ಮೊಬೈಲ್ ತಂದದ್ದು, ಶೂಟ್ ಮಾಡಿದ್ದು ತಪ್ಪು ಹಾಗಾಗಿ ಸಸ್ಪೆಂಡ್ ಮಾಡಿದ್ದೇವೆ. ನೂರಾರು ವಿದ್ಯಾರ್ಥಿನೀಯರ ಚಿತ್ರೀಕರಣ ಮಾಡಲಾಗಿದೆ ಎನ್ನುವುದು ಸರಿಯಲ್ಲ. ವಿಚಾರ ತಿಳಿಯದೆ ತಪ್ಪು ಮಾಹಿತಿ ಯಾರೂ ಹಾಕಬೇಡಿ. ಸುಳ್ಳು ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಬೇಡಿ ಇದು ನನ್ನ ಮನವಿ. ಕಾಲೇಜಿನ ಮಕ್ಕಳಲ್ಲಿ ನಾವು ಧರ್ಮವನ್ನು ನೋಡಲ್ಲ. ಚಿತ್ರೀಕರಿಸಿದ ಧರ್ಮದವರೇ ಕಾಲೇಜಿನಲ್ಲಿ ಘಟನೆ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ತಮಾಷೆಗೆ ಮಾಡಿರುವುದರಿಂದ ನನ್ನ ಭವಿಷ್ಯ, ಆ ಮೂವರ ಭವಿಷ್ಯ ಮುಖ್ಯ ಅಂತ ಸಂತ್ರಸ್ತೆ ಬರೆದು ನೀಡಿದ್ದಾಳೆ ಎಂದು ರಶ್ಮೀ ಕೃಷ್ಣಪ್ರಸಾದ್ ಹೇಳಿಕೆ ನೀಡಿದ್ದಾರೆ.












Click it and Unblock the Notifications