ಉಡುಪಿಯಲ್ಲಿ ತಣ್ಣಗಾದ ಮಳೆ; ಆದರೆ ನದಿ ಮಟ್ಟ ಕಡಿಮೆಯಾಗಿಲ್ಲ
ಉಡುಪಿ, ಸೆಪ್ಟೆಂಬರ್ 21: ಎರಡು ದಿನಗಳಿಂದ ಉಡುಪಿ ಜಿಲ್ಲೆಯನ್ನು ಅಸ್ತವ್ಯಸ್ತ ಮಾಡಿದ್ದ ಮಳೆರಾಯ ಈಗ ತಣ್ಣಗಾಗಿದ್ದಾನೆ. ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ಮಳೆಯ ಅಬ್ಬರ ಕ್ಷೀಣಿಸಿದೆ.
ಶನಿವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಗೆ ಉಡುಪಿಯ ನಿಟ್ಟೂರು, ಕೊಡಂಕೂರು, ಮಠದ ಬೆಟ್ಟು, ಗುಂಡಿಬೈಲು, ಬನ್ನಂಜೆ, ಬೈಲಕೆರೆ ಸೇರಿದಂತೆ ವಿವಿಧೆಡೆ 700ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದವು. ಸುಮಾರು 2500 ಜನರನ್ನು ರಕ್ಷಣೆ ಮಾಡಲಾಗಿತ್ತು. ನಿನ್ನೆ ಎನ್ಡಿಆರ್ಎಫ್ ತಂಡಗಳು ಕಾರ್ಯಾಚರಣೆಗಿಳಿದಿದ್ದವು.
ನಿನ್ನೆ ಉಡುಪಿಯಲ್ಲೇ ಸರಾಸರಿ 197 ಮಿ.ಮಿ ಮಳೆ ದಾಖಲೆಯಾಗಿತ್ತು. ಸುಮಾರು 40 ವರ್ಷದ ಬಳಿಕ ಈ ರೀತಿ ದಾಖಲೆಯ ಮಳೆಯಾಗಿತ್ತು. ಆದರೆ ನಿನ್ನೆ ರಾತ್ರಿಯಿಂದ ಮಳೆ ಇಳಿಮುಖವಾಗಿದೆ. ಮಳೆ ಇಳಿಮುಖವಾದರೂ ನದಿಯ ಆರ್ಭಟ ಕಡಿಮೆಯಾದಂತಿಲ್ಲ. ಸುವರ್ಣಾ ನದಿ ಮತ್ತು ಪಾಪನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ಮಟ್ಟ ಅಪಾಯಕಾರಿಯಾಗಿಯೇ ಇದೆ. ಉಡುಪಿ ನಗರದ ಮಧ್ಯಭಾಗದಲ್ಲಿ ಹರಿಯುವ ಇಂದ್ರಾಣಿ ನದಿ ಆರ್ಭಟ ಕಡಿಮೆಯಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ.

ನಿನ್ನೆ ಪರಿಹಾರ ಕೇಂದ್ರ ಸೇರಿದ್ದ ಜನರು, ಮಳೆ ತಗ್ಗಿದ ಕಾರಣ ತಮ್ಮ ತಮ್ಮ ವಸ್ತುಗಳೊಂದಿಗೆ ಮನೆಗಳತ್ತ ತೆರಳುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದು ಹಾಗೂ ನಾಳೆ ರೆಡ್ ಅಲರ್ಟ್ ಘೋಷಣೆಯಾಗಿದೆ. ನದಿ ಪಾತ್ರದ ಜನರು ಬಹಳ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.












Click it and Unblock the Notifications