ಪೇಜಾವರ ಶ್ರೀಗಳ 'ಆಸೆ'ಯನ್ನು ಈಡೇರಿಸಲು ಮುಂದಾದ ಕಿರಿಯ ಶ್ರೀಗಳು
ಉಡುಪಿ, ಡಿ 28: ಕಳೆದ ಸುಮಾರು ಹತ್ತುದಿನಗಳಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶ್ವತೀರ್ಥ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನಲೆಯಲ್ಲಿ ಮಠಕ್ಕೆ, ಭಾನುವಾರ (ಡಿ 29) ಅವರನ್ನು ಸ್ಥಳಾಂತರಿಸುವ ನಿರ್ಧಾರಕ್ಕೆ ಬರಲಾಗಿದೆ.
"ಭಾನುವಾರ ಬೆಳಗ್ಗೆ 5.30ಕ್ಕೆ ಶ್ರೀಗಳನ್ನು ಮಠಕ್ಕೆ ಸ್ಥಳಾಂತರಿಸಲಾಗುತ್ತಿದೆ. ಇದು, ಶ್ರೀಗಳ ಆಸೆಯು ಕೂಡಾ ಆಗಿತ್ತು" ಎಂದು ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.
ಭಾನುವಾರದ ಶಿವಮೊಗ್ಗದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಉಡುಪಿಯಲ್ಲೇ ತಂಗಿದ್ದು, ಕ್ಷಣಕ್ಷಣದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿ ಕೂಡಾ ಉಡುಪಿಗೆ ದೌಡಾಯಿಸಿದ್ದಾರೆ.

"ಶ್ರೀಗಳ ಆರೋಗ್ಯ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದ್ದು, ಭಗವಂತನೇ ಕಾಪಾಡಬೇಕು"ಎಂದು ಸಿಎಂ ಯಡಿಯೂರಪ್ಪ, ಆಸ್ಪತ್ರೆಯ ವೈದ್ಯರ ತಂಡವನ್ನು ಭೇಟಿಯಾದ ನಂತರ ಹೇಳಿದ್ದಾರೆ.
"ವೈದ್ಯರನ್ನೊಳಗೊಂಡ ವೆಂಟಿಲೇಟರ್ ವ್ಯವಸ್ಥೆ ಮಠದಲ್ಲೇ ಮಾಡಲಾಗುತ್ತದೆ. ಪೇಜಾವರ ಮಠಕ್ಕೆ ಭಕ್ತರ ಭೇಟಿ ಸದ್ಯ ಬೇಡ. ಎಲ್ಲರೂ ಇದ್ದಲ್ಲಿಂದ ಗುರುಗಳ ಆರೋಗ್ಯಕ್ಕಾಗಿ ಪ್ರಾರ್ಥಿಸಿ. ಕೇಂದ್ರ ರಾಜ್ಯ ಸರಕಾರದ ಪೂರ್ಣ ಸಹಕಾರ ಸಿಗುವ ವಿಶ್ವಾಸ ಇದೆ" ಎಂದು ಕಿರಿಯ ಶ್ರೀಗಳು ಮನವಿ ಮಾಡಿದ್ದಾರೆ.
ಈ ನಡುವೆ, ಬೆಂಗಳೂರು ದಕ್ಷಿಣ ವಲಯದ ಹಿರಿಯ ಪೊಲೀಸ್ ಅಧಿಕಾರಿಗಳು ನಗರದ ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿ ಹೋದ ಬಗ್ಗೆ ಮಾಹಿತಿಯಿದೆ.












Click it and Unblock the Notifications