ಕೃಷ್ಣಮಠದಲ್ಲಿ ಈ ಬಾರಿ ನಮಾಜಿಗೆ ಅವಕಾಶವಿದೆಯಾ: ಪಲಿಮಾರು ಶ್ರೀ ಸಂದರ್ಶನ

Posted By: ಬಾಲರಾಜ್ ತಂತ್ರಿ
Subscribe to Oneindia Kannada
   ಕೃಷ್ಣಮಠದಲ್ಲಿ ಈ ಬಾರಿ ನಮಾಜಿಗೆ ಅವಕಾಶವಿದೆಯಾ: ಪಲಿಮಾರು ಶ್ರೀ ಸಂದರ್ಶನ | Oneindia Kannada

   ಶ್ರೀಕೃಷ್ಣನ ನಗರಿ ಉಡುಪಿಯಲ್ಲೀಗ ಪರ್ಯಾಯ ಮಹೋತ್ಸವದ ಸಂಭ್ರಮ. ಇದೇ ಬರುವ ಜನವರಿ ಹದಿನೆಂಟರ ಮುಂಜಾನೆ, ಎರಡನೇ ಬಾರಿಗೆ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಶ್ರೀಕೃಷ್ಣಮಠದ ಸರ್ವಜ್ಞಪೀಠವನ್ನು ಏರಲಿದ್ದಾರೆ.

   ಆಚಾರ್ಯ ಮಧ್ವರು ಶ್ರೀಕೃಷ್ಣನ ಪೂಜೆಗೆ ನೇಮಿಸಿದ್ದ ಅಷ್ಠಮಠಗಳ ಪೈಕಿ ಒಂದಾದ ಪಲಿಮಾರು ಮಠದ ಮೂಲ ಉಡುಪಿಯಿಂದ ಸುಮಾರು ಮೂವತ್ತು ಕಿ.ಮೀ ದೂರದ ಪಲಿಮಾರಿನಲ್ಲಿ. ಮಠದ ಗುರುಪರಂಪರೆಯ ಮೂವತ್ತನೇ ಯತಿಗಳಾಗಿರುವ ವಿದ್ಯಾಧೀಶ ತೀರ್ಥರ ಪೂರ್ವಾಶ್ರಮದ ಹೆಸರು ರಮೇಶ್ ತಂತ್ರಿ.

   ಪಲಿಮಾರು ಶ್ರೀಗಳ ವೈಭವದ ಪುರಪ್ರವೇಶ

   2002-2004ರಲ್ಲಿ ಮೊದಲ ಬಾರಿಗೆ ಪರ್ಯಾಯ ಪೀಠವನ್ನೇರಿದ್ದ ವಿದ್ಯಾಧೀಶ ತೀರ್ಥರು, ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀಕೃಷ್ಣನಿಗೆ ವಜ್ರಖಚಿತ ಕಿರೀಟ, 108ಶಾಲೆಯ ಮಕ್ಕಳಿಗೆ ಚಿಣ್ಣರ ಶ್ರುಶೂಷೆ, ಮಧ್ವಸರೋವರ ಸ್ವಚ್ಚಗೊಳಿಸುವುದು, ಶ್ರೀಕೃಷ್ಣ ಟೆಕ್ನಿಕಲ್ ಸೆಂಟರ್ ಆರಂಭ, ಮುಂತಾದ ಕೆಲಸಗಳನ್ನು ಮೊದಲ ಅವಧಿಯಲ್ಲಿ ಮಾಡಿದ್ದರು.

   ಇನ್ನೇನು ಕೆಲವೇ ದಿನಗಳಲ್ಲಿ ಪರ್ಯಾಯ ಪೀಠವನ್ನೇರಲಿರುವ ಪಲಿಮಾರು ಶ್ರೀಗಳನ್ನು 'ಒನ್ ಇಂಡಿಯಾ' ಸಂದರ್ಶಿಸಿ, ತಮ್ಮ ಎರಡು ವರ್ಷದ ಅವಧಿಯಲ್ಲಿ ಏನೇನು ಸಾಮಾಜಿಕ, ಧಾರ್ಮಿಕ ಕೆಲಸಗಳನ್ನು ಮಾಡಲು ಮುಂದಾಗಿದ್ದಾರೆ, ಜೊತೆಗೆ ರಂಜಾನ್ ವೇಳೆ ನಮಾಜ್ ಗೆ ಅವಕಾಶ ನೀಡಲಾಗುತ್ತಾ ಎನ್ನುವ ನಮ್ಮ ಪ್ರಶ್ನೆಗಳಿಗೆ ಶ್ರೀಗಳು ಉತ್ತರಿಸಿದ್ದಾರೆ.

   ಪ್ರ: ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿ ಭಕ್ತರಿಂದ ಯಾವ ರೀತಿಯ ಸ್ಪಂದನೆ ವ್ಯಕ್ತವಾಗಿದೆ?
   ಪಲಿಮಾರು ಶ್ರೀ: ಜನರಿಗೆ ಸಹಜವಾಗಿ ಭಕ್ತಿಯೆಂಬುದು ಇದೆ. ಅದಕ್ಕೆ ಬೇಕಾದ ಸ್ಪೂರ್ತಿಯನ್ನು ನಾವು ಕೊಡಬೇಕಾಗಿದೆ. ಭಕ್ತರನ್ನು ಮತ್ತು ಭಗವಂತನನ್ನು ಒಟ್ಟು ಸೇರಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ. ಅವರು ಉಡುಪಿಗೆ ಬಂದಾಗ ಬೇಕಾದ ವ್ಯವಸ್ಥೆಗಳನ್ನು ನಾವು ಮಾಡಿದರೆ ತುಂಬಾ ಸಂತೋಷ ಪಡುತ್ತಾರೆ, ತುಂಬಾ ಭಾವುಕರಿರುತ್ತಾರೆ.

   ಕೃಷ್ಣಮಠದಲ್ಲಿ ನಮಾಜ್, ಯಾದವನಾಗಿ ಸಿಎಂ ಕೃಷ್ಣಮಠಕ್ಕೆ ಬರಲಿ, ಮುಂದೆ ಓದಿ..

   ಬಂದವರಿಗೆಲ್ಲಾ ಕಟ್ಟಿಗೆಯಲ್ಲಿ ಅಡುಗೆ ಮಾಡಲು ಅಸಾಧ್ಯ

   ಬಂದವರಿಗೆಲ್ಲಾ ಕಟ್ಟಿಗೆಯಲ್ಲಿ ಅಡುಗೆ ಮಾಡಲು ಅಸಾಧ್ಯ

   ಪ್ರ: ಕಟ್ಟಿಗೆ ಒಲೆಯಲ್ಲೇ ಅಡುಗೆ ತಯಾರಿಸಿ ಭಕ್ತರಿಗೆ ಬಡಿಸಲು ಪಲಿಮಾರು ಮಠ ನಿರ್ಧರಿಸಿದೆ ಎನ್ನುವ ಸುದ್ದಿಯಿದೆಯಲ್ಲವೇ? ಈ ಬಗ್ಗೆ ನಿಮ್ಮ ಸ್ಪಷ್ಟನೆ?

   ಪಲಿಮಾರು ಶ್ರೀ: ಇದರಲ್ಲಿ ನಮ್ಮದು ಹೊಸತೇನೂ ಇಲ್ಲ. ಇಲ್ಲಿಯವರೆಗೆ ಪರಂಪರೆಯಲ್ಲಿ ಏನು ಬಂದಿದೆ ಅದನ್ನೇ ನಾವು ಮುಂದುವರಿಸಿಕೊಂಡು ಹೋಗುತ್ತೇವೆ. ಯಾವುದೋ ಪತ್ರಿಕೆಯಲ್ಲಿ ಬಂದಿದ್ದಕ್ಕೆ ನಾನು ಹೊಣೆಗಾರನಾಗಲು ಸಾಧ್ಯವಿಲ್ಲ. ಕಟ್ಟಿಗೆ ಒಲೆಯಲ್ಲೇ ಅಡುಗೆ ತಯಾರಿಸುತ್ತೇವೆ ಎನ್ನುವುದು ನನ್ನ ಹೇಳಿಕೆ ಕೂಡಾ ಅಲ್ಲ. ಯಾರು ಬರೆದಿದ್ದಾರೋ ಅದು ಅವರ ಸ್ವಂತ ಹೇಳಿಕೆ, ಕೃಷ್ಣನ ನೈವೇದ್ಯಕ್ಕೆ ಕಟ್ಟಿಗೆ ಉಪಯೋಗಿಸುತ್ತೇವೆ. ಬಂದವರಿಗೆಲ್ಲಾ ಕಟ್ಟಿಗೆಯಲ್ಲಿ ಅಡುಗೆ ಮಾಡಲು ಅಸಾಧ್ಯ. ಸ್ಟೀಂನ ವ್ಯವಸ್ಥೆಯನ್ನು ಹಿಂದಿನ ಪರ್ಯಾಯದ ಅವಧಿಯಲ್ಲಿ ಈಗಾಗಲೇ ಮಾಡಿದ್ದಾರೆ. ಯಾರೋ ತಲೆಕೆಟ್ಟವರು ಬರೆದಿದ್ದಾರೆ.

   ಸಿದ್ದರಾಮಯ್ಯನವರಿಗೆ ಪರ್ಯಾಯಕ್ಕೆ ಆಮಂತ್ರಣ ಹೋಗಿದೆಯಾ

   ಸಿದ್ದರಾಮಯ್ಯನವರಿಗೆ ಪರ್ಯಾಯಕ್ಕೆ ಆಮಂತ್ರಣ ಹೋಗಿದೆಯಾ

   ಪ್ರ: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪರ್ಯಾಯಕ್ಕೆ ಆಮಂತ್ರಣ ಹೋಗಿದೆಯಾ?

   ಪಲಿಮಾರು ಶ್ರೀ: ಪ್ರತೀ ಬಾರಿ ಸಿಎಂಗೆ ಆಹ್ವಾನ ಕೊಡುವುದು ನಮ್ಮ ಕರ್ತವ್ಯ, ಅದನ್ನು ಪ್ರೀತಿಯಿಂದ ಮಾಡಿದ್ದೇವೆ. ಕಳೆದ ಪರ್ಯಾಯದಲ್ಲಿ ಯಾಕೆ ಬಂದಿಲ್ಲ ಎಂದು ಗೊತ್ತಿಲ್ಲ, ಕೃಷ್ಣ ಪ್ರೇರಣೆ ಮಾಡಬೇಕು. ಮುಖ್ಯಮಂತ್ರಿಗಳಾಗಿ, ಯಾದವರಾಗಿ, ಕುರುಬರಾಗಿ, ಕೃಷ್ಣನ ಭಕ್ತರಾಗಿ ಅವರು ಬರಬೇಕು. ಮಂತ್ರಿಗಳಾಗಿಯೂ, ಭಕ್ತರಾಗಿಯೂ ಬರಬೇಕು ಎನ್ನುವುದು ನಮ್ಮ ಅಪೇಕ್ಷೆ.

   ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿ

   ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿ

   ಪ್ರ: ನಿಮ್ಮ ಪರ್ಯಾದ ಅವಧಿಯಲ್ಲಿ ಕೈಗೆತ್ತಿಕೊಳ್ಳಬೇಕೆಂದಿರುವ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸುತ್ತೀರಾ?

   ಪಲಿಮಾರು ಶ್ರೀ: ದೇವಸ್ಥಾನದ ವ್ಯವಸ್ಥಾಪಕರಾಗಿ ನಮಗೆ ಎರಡು ಜವಾಬ್ದಾರಿಯಿದೆ. ಒಂದು ಶಾಸ್ತ್ರೋಕ್ತವಾಗಿ ಪೂಜೆ ಮಾಡುವುದು. ಇನ್ನೊಂದು ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡುವುದು. ಲಕ್ಷ ತುಳಸಿ ಅರ್ಚನೆ, ಅಖಂಡಧಾಮ ಸಂಕೀರ್ತನೆ, ಸಾರ್ವಜನಿಕ ಸಂತರ್ಪಣೆ, ಶಾಲಾಮಕ್ಕಳಿಗೆ ಮಧ್ಯಾಹ್ನದ ಹೊತ್ತಿಗೆ ಕೃಷ್ಣಪ್ರಸಾದ ವಿತರಣೆ, ಆರೋಗ್ಯದಲ್ಲಿ ತುಂಬಾ ಹಿಂದುಳಿದವರಿಗೆ ಆರೋಗ್ಯ ವ್ಯವಸ್ಥೆ ಮಾಡುವ ಯೋಜನೆಯಿದೆ. ಈಗಾಗಲೇ ಐದಾರು ಹಳ್ಳಿಗಳಲ್ಲಿ ಮೊಬೈಲ್ ಹಾಸ್ಪಿಟಲ್ ತೆಗೆದುಕೊಂಡು ಹೋಗಿ ಔಷಧೋಪಚಾರಗಳನ್ನು ಮಾಡುತ್ತಿದ್ದೇವೆ. ಸಾಮಾಜಿಕ ಮತ್ತು ಧಾರ್ಮಿಕ ಕೆಲಸಗಳನ್ನು ಇನ್ನಷ್ಟು ಬೆಳೆಸುವ ಕೆಲಸ ಆಗಬೇಕೆನ್ನುವ ಅಪೇಕ್ಷೆಯಿದೆ.

   ಮಸೀದಿಗಳಲ್ಲಿ ಕೃಷ್ಣನ ಪೂಜೆಗೆ ಅವಕಾಶ

   ಮಸೀದಿಗಳಲ್ಲಿ ಕೃಷ್ಣನ ಪೂಜೆಗೆ ಅವಕಾಶ

   ಪ್ರ: ಸಮಾಜದಲ್ಲಿ ಸಾಮರಸ್ಯ ಹೆಚ್ಚಾಗಲು ಮಸೀದಿಗಳಲ್ಲಿ ಕೃಷ್ಣನ ಪೂಜೆಗೆ ಅವಕಾಶ ನೀಡಬೇಕು ಎನ್ನುವ ಅಪೇಕ್ಷೆಯನ್ನು ತೊಟ್ಟಿದ್ದೀರಿ, ಪ್ರಾಕ್ಟಿಕಲ್ ಆಗಿ ಇದು ಸಾಧ್ಯನಾ?

   ಪಲಿಮಾರು ಶ್ರೀ: ಪರಸ್ಪರವಾದ ಪ್ರೀತಿ ಎನ್ನುವ ವಿಷಯ ಬಂದಾಗ ನಾನು ಪ್ರತಿಕ್ರಿಯಿಸಿದ್ದೆ, ನಾವು ಪ್ರೀತಿಸುವ ಗೋವನ್ನು ಕೊಂದು ತಿನ್ನತಕ್ಕಂತವರ ಜೊತೆ ಹೇಗೆ ಸಾಮರಸ್ಯ ಸಾಧ್ಯ ಎನ್ನುವುದು ನನ್ನ ಮೂಲಭೂತವಾದ ಪ್ರಶ್ನೆ. ಗೋಪಾಲಕೃಷ್ಣನ ಪೂಜೆಗೆ ಅವಕಾಶ ನೀಡುತ್ತೀರಾ ಎನ್ನುವುದರ ಅರ್ಥ, ಗೋವನ್ನು ಹಿಂಸಿಸುವುದನ್ನು ನಿಲ್ಲಿಸುತ್ತೀರಾ ಎಂದು. ಅಲ್ಲಿ ಪೂಜೆ ಮಾಡಿ ನಮಗೆ ಮೋಕ್ಷ ಸಾಧಿಸಬೇಕಾಗಿಲ್ಲ. ಮಸೀದಿಯೊಳಗೆ ಹೋಗಿ ಅನ್ಯಾಯ ಮಾಡಬೇಕು ಎನ್ನುವುದೂ ನಮ್ಮ ನಿಲುವಲ್ಲ. ಒಬ್ಬರು ಪ್ರೀತಿಸುವ, ಪೂಜಿಸುವ ವಸ್ತುವನ್ನು ಹಿಂಸಿಸಿದರೆ ನೋವಾಗುವುದಿಲ್ಲವೇ? ಗೋವನ್ನು ಕೊಲ್ಲುವುದನ್ನು ನಿಲ್ಲಿಸಬೇಕು. ಗೋವಿನ ಬಗ್ಗೆ ಕಾಳಜಿ ಬೇಕು ಎನ್ನುವುದು ನನ್ನ ಒಟ್ಟು ಮಾತಿನ ಅರ್ಥವಾಗಿತ್ತು.ನಿಮಗೆ ಯಾವುದು ಇಷ್ಟ ಅದನ್ನು ಅವರು ಹೊಡೆಯಬಾರದು, ಅವರಿಗೇನು ಇಷ್ಟ ಅದನ್ನು ನಾವು ಮುಟ್ಟಬಾರದು. ಇದೇ ನಮ್ಮ ಸಾಮರಸ್ಯದ ಧ್ವನಿ.

   ರಂಜಾನ್ ಪಾರ್ಥನೆಗೆ ಅವಕಾಶ ನೀಡುತ್ತೀರಾ

   ರಂಜಾನ್ ಪಾರ್ಥನೆಗೆ ಅವಕಾಶ ನೀಡುತ್ತೀರಾ

   ಪ್ರ: ನಿಮ್ಮ ಅವಧಿಯಲ್ಲಿ ಮಠದ ಆವರಣದಲ್ಲಿ ರಂಜಾನ್ ಪಾರ್ಥನೆಗೆ ಅವಕಾಶ ನೀಡುತ್ತೀರಾ?

   ಪಲಿಮಾರು ಶ್ರೀ: ಅದು ಆಗುವುದಿಲ್ಲ.. ಅದು ಹೇಗೆ ಸಾಧ್ಯ? ಪೇಜಾವರ ಶ್ರೀಗಳು ಪೂಜ್ಯರು, ಅವರು ದೊಡ್ಡವರು ಅವರಿಗೆ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಯಿತು. ಅವರ ಮುಂದೆ ಯೋಗ್ಯತೆಯಲ್ಲಿ ನಾನು ತುಂಬಾ ಚಿಕ್ಕವ. ನನಗೆ ಅಂತಹ ದೊಡ್ಡ ಘಟನೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದು. ಹಾಗಾಗಿ ಅದು ಸಾಧ್ಯವಿಲ್ಲ.

   ರಥಬೀದಿಯಲ್ಲಿರುವ ಕನಕನ ಗುಡಿ

   ರಥಬೀದಿಯಲ್ಲಿರುವ ಕನಕನ ಗುಡಿ

   ಪ್ರ: ರಥಬೀದಿಯಲ್ಲಿರುವ ಕನಕನ ಗುಡಿಗೆ ವಿಶೇಷ ಕಾಯಕಲ್ಪ ಒದಗಿಸಿದ್ದರೂ, ಕನಕ-ಕೃಷ್ಣನ ನಡುವಿನ ಸಂಬಂಧವನ್ನು ಹಾಳುಗೆಡುವ ಕೆಲಸ ನಡೆಯುತ್ತಲೇ ಇದೆ, ಈ ಬಗ್ಗೆ?

   ಪಲಿಮಾರು ಶ್ರೀ: ಕೃಷ್ಣ ಯಾವ ವಿಧದಲ್ಲೂ ಸೋತವನಲ್ಲ. ಈ ವಿಚಾರದಲ್ಲಿ, ಅಪಪ್ರಚಾರ ಕುತಂತ್ರ ಮೊದಲಿನಿಂದಲೂ ಇದೆ. ಕೃಷ್ಣ ವಿವಾದದ ವ್ಯಕ್ತಿ ಎನ್ನುವುದಕ್ಕಾಗಿ ಮೊದಲಿಂದಲೂ ಅವನಿಗೆ ಅಗ್ರಪೂಜೆ. ನಮ್ಮ ಅಷ್ಠಮಠಗಳಲ್ಲಿ ಕನಕನಿಗೆ ಯಾವುದೇ ವಿಚಾರದಲ್ಲಾಗಲಿ ಅಪಚಾರ ನಡೆದಿಲ್ಲ, ನಡೆಯುವುದೂ ಇಲ್ಲ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Udupi Paryaya 2018: An exclusive interview with Vidyadheesha Theertha Seer of Palimaru Matha. Paryaya is a religious ritual which takes place on Jan 18 every alternate year in Sri Krishna Matha, Udupi (Karnataka). The puja and administration of Krishna Matha is distributed among the Swamijis of Ashta Matha's established by Dvaita philosopher Sri Madhvacharya.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ