ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ಅಶ್ವಿನಿ ಶೆಟ್ಟಿ ಮಕ್ಕಳು ಈಗ ಹೇಗಿದ್ದಾರೆ? ಯಾರ ಜೊತೆಗಿದ್ದಾರೆ..?
ಉಡುಪಿ, ಆಗಸ್ಟ್ 02: ಕಳೆದ ಕೆಲವು ದಿನಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಸಂಭವಿಸಿದ ದಂಪತಿ ಸಾವು ಎಲ್ಲ ಮನಕದಲಿಸಿತ್ತು. ಹಿಂದಿನ ದಿನದವರೆಗೂ ಸನಾತನ ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಮಗನೊಂದಿಗೆ ರೀಲ್ಸ್ ಮಾಡುತ್ತಾ, ಸಮಾಜ ಸೇವೆ ಮಾಡುತ್ತಿದ್ದ ಅಶ್ವಿನಿ ಶೆಟ್ಟಿ ಎನ್ನುವವರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಪತಿಯೊಂದಿಗೆ ತಾವೂ ಕೊನೆಯುಸಿರೆಳೆದಿದ್ದರು.
ಉಡುಪಿ ನಗರದ ಅಂಬಲಪಾಡಿಯ ಶೆಟ್ಟಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ ಶೆಟ್ಟಿ ಹಾಗೂ ಅವರ ಪತ್ನಿ ಅಶ್ವಿನಿ ಶೆಟ್ಟಿ ಅವರ ಅಕಾಲಿಕ ನಿಧನ ಎಲ್ಲರನ್ನೂ ಕಾಡಿತ್ತು. ಇದೊಂದು ಅನ್ಯಾಯದ ಸಾವು ಎಂದು ಪ್ರತಿಯೊಬ್ಬರು ಕೂಡ ಮನನೊಂದಿದ್ದರು. ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಶೆಟ್ಟಿ ದಂಪತಿಗೆ ಇಬ್ಬರು ಮಕ್ಕಳಿದ್ದು, ಅಂಶುಲಾ ಶೆಟ್ಟಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾರೆ. ಇನ್ನ ಮಗ ಅಭಿಕ್ ಶೆಟ್ಟಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದ. ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳು ಈಗ ಹೇಗಿದ್ದಾರೆ..? ಯಾರ ಜೊತೆಗಿದ್ದಾರೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು.

ಅಂಶುಲಾ ಶೆಟ್ಟಿ ಹಾಗೂ ಅಭಿಕ್ ಶೆಟ್ಟಿ ಸದ್ಯ ಕುಟುಂಬಸ್ಥರೊಂದಿಗೆ ವಾಸವಿದ್ದಾರೆ. ವಿಜೆ ವಿಕ್ಯಾತ್ ಯೂಟ್ಯೂಬ್ ಚಾನೆಲ್‌ನಲ್ಲಿ ಅಶ್ವಿನಿ ಶೆಟ್ಟಿ ಅವರ ಮಕ್ಕಳು ಮಾತನಾಡಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ನಮಗೆ ಬೆಂಬಲ ನೀಡಿದವರಿಗೆ ತುಂಬಾ ಧನ್ಯವಾದಗಳು. ನಮ್ಮ ಅಪ್ಪ-ಅಮ್ಮ ನಮ್ಮ ಜೊತೆಗೆ ಇದ್ದಾರೆ. ಅವರು ಎಲ್ಲಿಯೂ ಹೋಗಿಲ್ಲ. ದೈಹಿಕವಾಗಿ ಅವರು ನಮ್ಮ ಜೊತೆ ಇಲ್ಲ. ಆದರೆ ಮಾನಸಿಕವಾಗಿ ನಮ್ಮ ಹೃದಯದಲ್ಲಿ ಇದ್ದಾರೆ. ಆ ಸಮಯದಲ್ಲಿ ನಮಗೆ ಬೆಂಬಲವಾಗಿ ನಿಂತವರು ಹಾಗೂ ಇಂದು ನಮ್ಮ ಜೊತೆ ನಿಂತವರಿಗೆ ಧನ್ಯವಾದಗಳು. ನಮಗೆ ನಿಮ್ಮ ಆಶೀರ್ವಾದ ಬೇಕು. ನಮ್ಮ ಸಂಪೂರ್ಣ ಕುಟುಂಬ ನಮ್ಮ ಜೊತೆ ಇದೆ. ನಾವು ಖುಷಿಯಾಗಿ ಇರುತ್ತೇವೆ. ಅಪ್ಪ ಅಮ್ಮನ ಕನಸುಗಳನ್ನು ನನಸು ಮಾಡುತ್ತೇವೆ ಎಂದಿದ್ದಾರೆ.
ಆ ದಿನ ಆಗಿದ್ದೇನು..?
ಜುಲೈ 16 ಸೋಮವಾರ ಉಡುಪಿಯ ಗಾಂಧಿನಗರದ ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಶೆಟ್ಟಿ ಅವರ ಮನೆಯಲ್ಲಿ ಸೆಂಟ್ರಲೈಸ್ ಎಸಿ ಶಾರ್ಟ್ ಸರ್ಕ್ಯೂಟ್ ನಿಂದ ಬ್ಲಾಸ್ಟ್ ಆಗಿ ಅಗ್ನಿ ಅವಘಡ ಸಂಭವಿಸಿತ್ತು. ಎಸಿ ಶಾರ್ಟ್ ಸರ್ಕ್ಯೂಟ್ ಸಂಪೂರ್ಣ ಮನೆ ಬೆಂಕಿಗಾಹುತಿಯಾಗಿತ್ತು. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಹರಸಾಹಸ ಪಟ್ಟು ಬೆಂಕಿಯನ್ನು ಆರಿಸಿ ಮಕ್ಕಳಿಬ್ಬರನ್ನು ರಕ್ಷಿಸಿದ್ದರು. ಆದರೆ ಇನ್ನೊಂದು ಬೆಡ್ ರೂಮ್‌ನಲ್ಲಿದ್ದ ದಂಪತಿ ಹೊಗೆಯಿಂದ ಉಸಿರುಗಟ್ಟಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಅವರನ್ನು ತಕ್ಷಣ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ದುರಾದೃಷ್ಟವಶಾತ್ ಇಬ್ಬರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.

ರಮಾನಂದ ಶೆಟ್ಟಿ ಉಡುಪಿಯಲ್ಲಿ ಯಶಸ್ವಿ ಉದ್ಯಮಿಯಾಗಿದ್ದರು. ಇನ್ನು ಅಶ್ವಿನಿ ಶೆಟ್ಟಿ, ಬಲ್ಲಾಳ್ ಕಾಬೂಸ್ ಎನ್ನುವ ಪೇಜ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಪಡೆದಿದ್ದರು. ಹಿಂದೂ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳನ್ನು ಅವುಗಳ ಆಚರಣೆಗಳ ಬಗ್ಗೆ ತಿಳಿ ಹೇಳುತ್ತಿದ್ದ ಅಶ್ವಿನಿ ಅವರು ಅಡುಗೆ ವಿಡಿಯೋಗಳನ್ನು ಸಹ ಮಾಡುತ್ತಿದ್ದರು. ಜೊತೆಗೆ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು.












Click it and Unblock the Notifications