ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ: ಕೈಗಾರಿಕೆ, ಲಾಜಿಸ್ಟಿಕ್ಸ್ ಕ್ಷೇತ್ರಕ್ಕೆ ಹೊಸ ಚೈತನ್ಯ; ನಿರ್ಮಲಾ ಸೀತಾರಾಮನ್
ಬೆಂಗಳೂರು ಹಾಗೂ ಚೆನ್ನೈ ನಡುವಿನ ಸುಗಮ ಸಂಚಾರಕ್ಕಾಗಿ ಮತ್ತು ಆರ್ಥಿಕ ಪ್ರಗತಿಗೆ ಹೊಸ ವೇಗ ನೀಡಲು ನಿರ್ಮಾಣವಾಗುತ್ತಿರುವ ಮಹತ್ವಾಕಾಂಕ್ಷೆಯ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ ಯೋಜನಾ ಕಾಮಗಾರಿ ಭರದಿಂದ ಸಾಗುತ್ತಿದೆ. ದಕ್ಷಿಣ ಭಾರತದ ಎರಡು ಬೃಹತ್ ಕೈಗಾರಿಕಾ ಹಬ್‌ಗಳನ್ನು ಬೆಸೆಯುವ ಈ ರಸ್ತೆ ಜಾಲವು ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕ ಕಾರಿಡಾರ್‌ಗಳಲ್ಲೇ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೋಜನೆಯ ಮಹತ್ವವನ್ನು ತಿಳಿಸಿದ್ದಾರೆ.
ಕಳೆದ ಭಾನುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಬಳಿ ಎಕ್ಸ್‌ಪ್ರೆಸ್‌ವೇ ಕಾಮಗಾರಿಯ ಪ್ರಗತಿಯನ್ನು ಸಚಿವರು ಖುದ್ದಾಗಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರಕಾರದ 'ಪ್ರಗತಿ ಪಥ ಯಾತ್ರೆ ದರ್ಶನ' ಕಾರ್ಯಕ್ರಮದ ಅಡಿಯಲ್ಲಿ ಈ ಕ್ಷೇತ್ರ ಭೇಟಿ ಆಯೋಜಿಸಲಾಗಿದೆ ಎಂದರು. ಈ ಹೆದ್ದಾರಿಯು ಕೇವಲ ಎರಡು ಪ್ರಮುಖ ನಗರಗಳ ನಡುವಿನ ಭೌಗೋಳಿಕ ಅಂತರವನ್ನು ಕಡಿಮೆ ಮಾಡುವುದಿಲ್ಲ, ಬದಲಿಗೆ ದೇಶದ ರಫ್ತು ಸಾಮರ್ಥ್ಯ ಹಾಗೂ ಆಂತರಿಕ ಕೈಗಾರಿಕಾ ಜಾಲವನ್ನು ಬಲಪಡಿಸಲು ಪ್ರಮುಖ ಆಧಾರಸ್ತಂಭವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಭಾರತಮಾಲಾ ಪರಿಯೋಜನೆಯಡಿ ನಿರ್ಮಾಣ
ಈ ಎಕ್ಸ್‌ಪ್ರೆಸ್‌ವೇ ಮಾರ್ಗವನ್ನು ಭಾರತ ಸರಕಾರದ ಅತ್ಯಂತ ಯಶಸ್ವಿ ಯೋಜನೆಯಾದ 'ಭಾರತಮಾಲಾ ಪರಿಯೋಜನೆ'ಯ ಮೊದಲ ಹಂತದ ಅಡಿಯಲ್ಲಿ ಗ್ರೀನ್‌ಫೀಲ್ಡ್ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಸಂಪೂರ್ಣವಾಗಿ ನೂತನ ಮಾರ್ಗದಲ್ಲಿ ಸಾಗುವ ಈ ರಸ್ತೆಯು ಯಾವುದೇ ಅಡೆತಡೆಗಳಿಲ್ಲದ ಅತ್ಯಾಧುನಿಕ ರಸ್ತೆ ಸಾರಿಗೆ ಜಾಲವನ್ನು ಸೃಷ್ಟಿಸಲಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಗಡಿಗಳನ್ನು ದಾಟಿ ಸಾಗುವ ಈ ಮಾರ್ಗವು ದಕ್ಷಿಣ ಭಾರತದ ರಾಜ್ಯಗಳ ಆರ್ಥಿಕ ಮಾರುಕಟ್ಟೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸಹಾಯ ಮಾಡಲಿದೆ.
ಕೈಗಾರಿಕಾ ವಲಯಗಳಿಗೆ ಲಾಭ
ಈ ಯೋಜನೆಯಿಂದ ಹೊಸಕೋಟೆ, ಮಾಲೂರು, ಬಂಗಾರಪೇಟೆ, ನರಸಾಪುರ ಕೈಗಾರಿಕಾ ಪ್ರದೇಶ, ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಾನಗಳು ಸೇರಿದಂತೆ ಪ್ರಮುಖ ಕೈಗಾರಿಕಾ ಕೇಂದ್ರಗಳಿಗೆ ಸಂಪರ್ಕ ಮತ್ತಷ್ಟು ಸುಧಾರಿಸಲಿದೆ. ಜೊತೆಗೆ ದೊಡ್ಡಬಳ್ಳಾಪುರ ಸಮೀಪದ ಪ್ರಸ್ತಾವಿತ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ (MMLP) ಗೆ ಬೆಂಗಳೂರು ರಿಂಗ್‌ರೋಡ್ ಜಾಲದ ಮೂಲಕ ಸುಲಭ ಸಂಪರ್ಕ ದೊರೆಯಲಿದೆ ಎಂದು ಸಚಿವೆ ಮಾಹಿತಿ ನೀಡಿದರು.
ಆರ್ಥಿಕ ಬೆಳವಣಿಗೆಗೆ ನೆರವು
ದೇವನಹಳ್ಳಿಯಲ್ಲಿ ಯೋಜನೆಯ ಪ್ರಗತಿ ಪರಿಶೀಲಿಸಿದ ನಿರ್ಮಲಾ ಸೀತಾರಾಮನ್, ಆಧುನಿಕ ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಆರ್ಥಿಕ ಬೆಳವಣಿಗೆಗೆ ವೇಗ ನೀಡುವುದು ಮತ್ತು ಜನರ ಜೀವನಮಟ್ಟವನ್ನು ಸುಧಾರಿಸುವುದು ಕೇಂದ್ರ ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ಗೆ ಬಲ
ಕೇಂದ್ರ ಸರ್ಕಾರದ ಹೆಮ್ಮೆಯ ಯೋಜನೆಗಳಲ್ಲಿ ಒಂದಾದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ, 'ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್' (CBIC) ಯೋಜನೆಯ ಅತ್ಯಂತ ಪ್ರಮುಖ ಆದ್ಯತೆಯ ಭಾಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವೇಗವಾಗಿ ಮುನ್ನಡೆಯುತ್ತಿರುವ ಈ ಯೋಜನೆ ಪೂರ್ಣಗೊಂಡರೆ, ಉಭಯ ನಗರಗಳ ನಡುವಿನ ಪ್ರಯಾಣದ ಅವಧಿ ಗಣನೀಯವಾಗಿ ಇಳಿಕೆಯಾಗಲಿದೆ. ಇದು ಕೇವಲ ಪ್ರಯಾಣಿಕರಿಗಷ್ಟೇ ಅಲ್ಲದೆ, ಈ ಕಾರಿಡಾರ್ ವ್ಯಾಪ್ತಿಯಲ್ಲಿ ಬರುವ ಕೈಗಾರಿಕೆಗಳು, ವ್ಯಾಪಾರ ವಹಿವಾಟು ಹಾಗೂ ಸರಕು ಸಾಗಣೆ ಕ್ಷೇತ್ರಗಳ ಮಹತ್ತರ ಆರ್ಥಿಕ ಬೆಳವಣಿಗೆಗೆ ದಾರಿಯಾಗಲಿದೆ.














Click it and Unblock the Notifications