ನಿಮ್ಮ ಇಪಿಎಫ್ ಹಣ ಸುರಕ್ಷಿತವಾಗಿರಲಿ: ಆನ್‌ಲೈನ್‌ನಲ್ಲೇ ನಾಮಿನೇಷನ್ ಮಾಡಲು ಇಲ್ಲಿದೆ ಸುಲಭ ದಾರಿ!
ನಿಮ್ಮ ಇಪಿಎಫ್ (EPF) ಖಾತೆಗೆ ಆನ್‌ಲೈನ್ ಮೂಲಕ ನಾಮಿನಿ ಹೆಸರನ್ನು ಸೇರಿಸುವುದು ಹೇಗೆ? ನಾಮಿನಿ ಆಗಲು ಯಾರೆಲ್ಲಾ ಅರ್ಹರು- ಎಂಬುದರ ವಿವರವಾದ ಮಾಹಿತಿ ಇಲ್ಲಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಈ ಸಲದ ತ್ರೈಮಾಸಿಕದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಇಪಿಎಫ್ ಮತ್ತು ಸ್ವಯಂಪ್ರೇರಿತ ಭವಿಷ್ಯ ನಿಧಿಗೆ (VPF) ಶೇಕಡಾ 8.25 ರಷ್ಟು ಬಡ್ಡಿದರವನ್ನು ನೀಡುತ್ತಿದೆ. ನಿಮ್ಮ ಖಾತೆಗೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ನಾಮಿನಿಯನ್ನು ಸೇರಿಸಬಹುದು. ಆಫ್‌ಲೈನ್‌ನಲ್ಲಿ ಮಾಡಲು 'ಫಾರ್ಮ್ ನಂ-2' ಅನ್ನು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಆನ್‌ಲೈನ್ ಮೂಲಕ ಇ-ನಾಮಿನೇಷನ್ (e-Nomination) ಮಾಡಲು ಇರುವ ನಿಯಮಗಳು ಮತ್ತು ಹಂತಗಳು ಇಲ್ಲಿವೆ.

ಇ-ನಾಮಿನೇಷನ್ ಮಾಡಲು ಯಾರು ಅರ್ಹರು?
ಕೇವಲ ಯುಎಎನ್ (UAN) ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮತ್ತು ನಿಗದಿತ ಸದಸ್ಯರು ಮಾತ್ರ ಆನ್‌ಲೈನ್‌ನಲ್ಲಿ ಇ-ನಾಮಿನೇಷನ್ ಸಲ್ಲಿಸಬಹುದು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಅತ್ಯಗತ್ಯವಾಗಿದೆ.
ಇ-ನಾಮಿನೇಷನ್ ಮಾಡುವ ಹಂತಗಳು
1. ಪೋರ್ಟಲ್‌ಗೆ ಲಾಗಿನ್ ಮಾಡಿ
ಮೊದಲು ಇಪಿಎಫ್ ಸದಸ್ಯರ ಅಧಿಕೃತ ವೆಬ್‌ಸೈಟ್ (epfindia.gov.in) ಗೆ ಭೇಟಿ ನೀಡಿ. ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ ಸೈನ್ ಇನ್ ಮಾಡಿ.
2. ಇ-ನಾಮಿನೇಷನ್ ಆಯ್ಕೆ ಮಾಡಿ
ಮೇಲ್ಭಾಗದಲ್ಲಿರುವ 'Manage' ಟ್ಯಾಬ್ ಕ್ಲಿಕ್ ಮಾಡಿ, ಅಲ್ಲಿ 'e-Nomination' ಆಯ್ಕೆಯನ್ನು ಆರಿಸಿ. ನಂತರ 'Enter new nomination' ಮೇಲೆ ಕ್ಲಿಕ್ ಮಾಡಿ ಪ್ರೊಸೀಡ್ (Proceed) ಬಟನ್ ಒತ್ತಿ.
3. ಕುಟುಂಬದ ವಿವರಗಳನ್ನು ಸೇರಿಸಿ
ಕುಟುಂಬದ ವಿವರಗಳನ್ನು ನವೀಕರಿಸಲು 'Yes' ಆಯ್ಕೆಮಾಡಿ ಮತ್ತು 'Add Family Details' ಕ್ಲಿಕ್ ಮಾಡಿ. ಒಂದಕ್ಕಿಂತ ಹೆಚ್ಚು ನಾಮಿನಿಗಳಿದ್ದರೆ 'Add now' ಬಳಸಿ.
4. ನಾಮಿನಿ ಮಾಹಿತಿ ನೀಡಿ
ನಾಮಿನಿಯ ಆಧಾರ್ ಸಂಖ್ಯೆ, ಹೆಸರು, ಜನ್ಮ ದಿನಾಂಕ, ಲಿಂಗ, ಸಂಬಂಧ, ವಿಳಾಸ, ಬ್ಯಾಂಕ್ ಖಾತೆ ವಿವರಗಳು ಮತ್ತು ಫೋಟೋವನ್ನು (100KB ಒಳಗೆ) ಅಪ್‌ಲೋಡ್ ಮಾಡಿ. ನಾಮಿನಿಗೆ ನೀಡಲು ಬಯಸುವ ಒಟ್ಟು ಮೊತ್ತದ ಪಾಲನ್ನು (ಶೇಕಡಾವಾರು - ಒಟ್ಟು 100%) ನಮೂದಿಸಿ.
5. ವಿವರಗಳನ್ನು ಉಳಿಸಿ
ಮೊದಲು 'Save Family Details' ಕ್ಲಿಕ್ ಮಾಡಿ, ನಂತರ 'Save EPF Nomination' ಮೇಲೆ ಕ್ಲಿಕ್ ಮಾಡಿ.
6. ಇ-ಸೈನ್ ಪ್ರಕ್ರಿಯೆ ಮುಗಿಸಿ
ಈಗ 'Manage' ಅಡಿಯಲ್ಲಿ 'e-nomination' ಗೆ ಹೋದರೆ 'Pending Nomination' ಕಾಣಿಸುತ್ತದೆ. ಅಲ್ಲಿ 'e-sign' ಕ್ಲಿಕ್ ಮಾಡಿ, ನಿಮ್ಮ ಆಧಾರ್ ಅಥವಾ ವರ್ಚುವಲ್ ಐಡಿ ನಮೂದಿಸಿ, ಒಪ್ಪಿಗೆ ನೀಡಿ 'Get OTP' ಒತ್ತಿ. ಮೊಬೈಲ್‌ಗೆ ಬಂದ ಒಟಿಪಿ ನಮೂದಿಸಿ ಸಬ್ಮಿಟ್ ಮಾಡಿ.
ಯಶಸ್ವಿ ಪರಿಶೀಲನೆ ಪ್ರಕ್ರಿಯೆ ಮುಗಿದ ನಂತರ 'Nomination History' ನಲ್ಲಿ 'Nomination Successful' ಎಂದು ತೋರಿಸುತ್ತದೆಯೇ ಎಂದು ಮರುಪರಿಶೀಲಿಸಿಕೊಳ್ಳಿ.
ನಾಮಿನೇಷನ್ ನಿಯಮಗಳು: ಯಾರು ಅರ್ಹರು?
ಪುರುಷ ಉದ್ಯೋಗಿಗಳಿಗೆ: ಹೆಂಡತಿ, ಮಕ್ಕಳು (ಮದುವೆಯಾದ ಮತ್ತು ಆಗದ), ಆಶ್ರಿತ ಪೋಷಕರು ಮತ್ತು ಮರಣ ಹೊಂದಿದ ಮಗನ ಹೆಂಡತಿ ಹಾಗೂ ಮಕ್ಕಳು ಅರ್ಹರು.
ಮಹಿಳಾ ಉದ್ಯೋಗಿಗಳಿಗೆ: ಪತಿ, ಮಕ್ಕಳು, ಆಶ್ರಿತ ಪೋಷಕರು, ಪತಿಯ ಆಶ್ರಿತ ಪೋಷಕರು ಮತ್ತು ಮರಣ ಹೊಂದಿದ ಮಗನ ಹೆಂಡತಿ ಹಾಗೂ ಮಕ್ಕಳು ಅರ್ಹರು.
ವಿವಾಹಿತರು: ವಿವಾಹಿತ ಸದಸ್ಯರು ತಮ್ಮ ಸಂಗಾತಿಯನ್ನು ಕಡ್ಡಾಯವಾಗಿ ಕುಟುಂಬದ ಪಟ್ಟಿಯಲ್ಲಿ ಸೇರಿಸಬೇಕು.
ಅವಿವಾಹಿತರು: ಅವಿವಾಹಿತ ಸದಸ್ಯರು ಯಾವುದೇ ವ್ಯಕ್ತಿಯನ್ನು ನಾಮಿನಿ ಮಾಡಬಹುದು. ಇಪಿಎಫ್ ಕಾಯ್ದೆಯ ಪ್ರಕಾರ, ಯಾವುದೇ ಸಂಗಾತಿ ಅಥವಾ ಮಕ್ಕಳಿಲ್ಲದ ಅವಿವಾಹಿತ ಸದಸ್ಯರು ತಮ್ಮ ಒಡಹುಟ್ಟಿದವರನ್ನು (ಅಣ್ಣ/ತಮ್ಮ/ಅಕ್ಕ/ತಂಗಿ) ಪಿಎಫ್ ಮತ್ತು ಪೆನ್ಷನ್‌ಗೆ ನಾಮಿನಿ ಮಾಡಬಹುದು. ಆದರೆ ಮದುವೆಯಾದ ನಂತರ ಈ ಹಳೆಯ ನಾಮಿನೇಷನ್ ರದ್ದಾಗುತ್ತದೆ ಮತ್ತು ಹೊಸದಾಗಿ ಕುಟುಂಬದವರ ಹೆಸರನ್ನು ಸೇರಿಸಬೇಕಾಗುತ್ತದೆ.
ಬರಹ: ಭವಾನಿ ಭಟ್














Click it and Unblock the Notifications