ಸಾಲು ಸಾಲು ಹೀನಾಯ ಸೋಲು: ಗೋಬ್ಯಾಕ್ ಲಕ್ಷ್ಮೀಯಕ್ಕ ಆರಂಭಿಸಿದ ಉಡುಪಿ ಕೈ ಕಾರ್ಯಕರ್ತರು
ಉಡುಪಿ, ಜೂನ್ 04: ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಉಡುಪಿ ಜಿಲ್ಲೆಯ ಕಾಂಗ್ರೆಸ್‌ನಲ್ಲಿ 'ಗೋ ಬ್ಯಾಕ್' ಲಕ್ಷ್ಮೀ ಹೆಬ್ಬಾಳ್ಕರ್ ಅಭಿಯಾನ ಶುರುವಾಗಿದೆ. ಕರಾವಳಿಯಲ್ಲಿ ಕಾಂಗ್ರೆಸ್ ಸೋಲಿಗೆ ಜಿಲ್ಲಾ ಉಸ್ತುವಾರಿಗಳು ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕಿಡಿಕಾರಿದ್ದಾರೆ.
ಉಡುಪಿ ಜಿಲ್ಲಾ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗರಂ ಆಗಿರುವ ಕಾರ್ಯಕರ್ತರು ಪೋಸ್ಟರ್ ಅಭಿಯಾನ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆ ಸಮಯದಲ್ಲಿ ಹಾಗೂ ಪಕ್ಷದಲ್ಲಿ ಸಮಸ್ಯೆ ಆದಾಗ ಬರುವುದೇ ಇಲ್ಲ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಉಡುಪಿ ಜಿಲ್ಲಾ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ಘೋಷಣೆಯಾದ ನಂತರ ಲಕ್ಷ್ಮೀ ಹೆಬ್ಬಾಳ್ಕರ್ ಕರಾವಳಿ ಕಡೆ ಮುಖ ಮಾಡಿಲ್ಲ. ಪಕ್ಷದ ಚಟುವಟಿಕೆ ಸಲುವಾಗಿ ಜನವರಿ 27ಕ್ಕೆ ಕೊನೆಯ ಬಾರಿ ಉಡುಪಿಗೆ ಬಂದ್ದಿದ್ದರು. ಅದನ್ನು ಬಿಟ್ಟರೆ ಮಾರ್ಚ್ 13 ಗ್ಯಾರಂಟಿ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಅದನ್ನು ಹೊರತು ಪಡಿಸಿ ಚುನಾವಣಾ ಸಂದರ್ಭದಲ್ಲಿ ಎಂದೂ ಕ್ಷೇತ್ರಕ್ಕೆ ಬಂದಿಲ್ಲ, ಕಾರ್ಯಕರ್ತರ ಜೊತೆ ಸಭೆ ನಡೆಸಿಲ್ಲ, ಕ್ಷೇತ್ರದಲ್ಲಿ ಪ್ರಚಾರ ನಡೆಸಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯವೈಖರಿಗೆ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.
ಉಡುಪಿ ಚಿಕ್ಕಮಗಳೂರಿಗೆ ಮೊದಲನೇ ಹಂತದ ಚುನಾವಣೆ ನಡೆದಿತ್ತು. ಬೆಳಗಾವಿಗೆ ನಡೆದಿದ್ದು ಎರಡನೇ ಹಂತದ ಚುನಾವಣೆ. ಇಷ್ಟಾದರೂ ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿಯತ್ತ ಮುಖ ಮಾಡಿಲ್ಲ. ವಿಧಾನಪರಿಷತ್ ಚುನಾವಣೆಗೂ ಬಂದಿಲ್ಲ. ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿಲ್ಲ. ನಾನು ಉಡುಪಿ ಉಸ್ತುವಾರಿ ಎನ್ನುವುದನ್ನು ಲಕ್ಷ್ಮೀ ಹೆಬ್ಬಾಳ್ಕರ್ ಮರೆತಿದ್ದಾರೆ.

ಚುನಾವಣೆ ಸಂದರ್ಭದಲ್ಲಿಯೂ ಬಂದಿಲ್ಲ.. ಕುಡಿಯುವ ನೀರಿನ ಸಮಸ್ಯೆ ಇದ್ದಾಗಲೂ ಬಂದಿಲ್ಲ. ಉಡುಪಿ ಜಿಲ್ಲೆಗಾಗಲೀ, ಕಾಂಗ್ರೆಸ್ ಕಾರ್ಯಕರ್ತರಿಗಾಗಲೀ ನಿಮ್ಮಿಂದ ಯಾವುದೇ ಕೊಡುಗೆ ಇಲ್ಲ. ನಿಮ್ಮಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವು ಉಂಟಾಗಿದೆ. ಜಿಲ್ಲೆಯ ಜನರೂ ನಿಮ್ಮ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಾರ್ಯಕರ್ತರು ಪೋಸ್ಟರ್ ಮೂಲಕ ಬೇಸರ ಹೊರಹಾಕಿದ್ದಾರೆ.
ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಐದಕ್ಕೆ ಐದು ಅಭ್ಯರ್ಥಿಗಳ ಸೋಲು. ಎರಡು ಲೋಕಸಭೆಯಲ್ಲಿ ಅಭ್ಯರ್ಥಿಗಳ ಹೀನಾಯ ಸೋಲು, ಜಿ.ಪಂ ತಾ.ಪಂ ಚುನಾವಣೆಯಲ್ಲಿ ಹೀನಾಯ ಸೋಲು, ನಗರ ಸಭೆ ಪುರಸಭೆ ಚುನಾವಣೆಯಲ್ಲಿ ಹೀನಾಯ ಸೋಲು, ನಗರ ಸಭೆ ಉಪ ಚುನಾವಣೆಯಲ್ಲಿ ಹೀನಾಯ ಸೋಲು. ಇದರ ಅರ್ಥ ಉಡುಪಿ ಜಿಲ್ಲಾ ಕಾಂಗ್ರೆಸ್ ನಾಯಕರು ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಉಸ್ತುವಾರಿ ಸಚಿವರನ್ನು ಬದಲಿಸುವಂತೆ ಹಾಗೂ ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವಂತೆ ಉಡುಪಿ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.











Click it and Unblock the Notifications