ಹುತಾತ್ಮ ಯೋಧನಿಗೆ ಪುಟ್ಟ ಲಹರಿಯ ಗೌರವ: ವಿಡಿಯೋ ವೈರಲ್
ಕುಂದಾಪುರ, ಮಾಚ್ 18: ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳು ಬಾಲ್ಯದಲ್ಲಿ ಏನು ಕಲಿಯುತ್ತಾರೋ, ಎಂತಹ ವಾತಾವರಣದಲ್ಲಿ ಇರುತ್ತಾರೋ ಅವರ ವ್ಯಕ್ತಿತ್ವ ಹಾಗೆ ರೂಪುಗೊಳ್ಳುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಹಿರಿಯರಿಂದ ಮಕ್ಕಳು ಕಲಿಯುದಕ್ಕಿಂತ ಮಕ್ಕಳಿಂದ ಹಿರಿಯರು ಕಲಿಯುವ ವಿಚಾರಗಳು ಬಹಳಷ್ಟಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಕುಂದಾಪುರದ ಬಾಲಕಿಯ ವಿಡಿಯೋವೊಂದು ವೈರಲ್ ಆಗುತ್ತಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಮೂಲದ ವೀರ ಯೋಧ ಅನೂಪ್ ಪೂಜಾರಿ (33) ಇತ್ತೀಚೆಗೆ ಹುತಾತ್ಮರಾದರು. ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ನೋಯಿನಲ್ಲಿ ಕಳೆದ ಡಿಸೆಂಬರ್ 24ರಂದು ಸೇನಾ ವಾಹನ ಅಪಘಾತ ಸಂಭವಿಸಿತ್ತು. ಯೋಧರು ಪ್ರಯಾಣಿಸುತ್ತಿದ್ದ ಸೇನಾ ವಾಹನವು ಕಿರಿದಾದ ರಸ್ತೆಯಿಂದ ಜಾರಿ ಸುಮಾರು 150 ಅಡಿ ಆಳಕ್ಕೆ ಉರುಳಿ ಬಿದ್ದಿತ್ತು. ಈ ಭೀಕರ ಅಪಘಾತದಲ್ಲಿ ಲ್ಯಾನ್ಸ್ ಹವಾಲ್ದಾರ್ ಅನೂಪ್ ಪೂಜಾರಿ ಹುತ್ಮಾತ್ಮರಾಗಿದ್ದರು.

ಅನೂಪ್ ಪೂಜಾರಿ ಅವರ ಅಕಾಲಿಕ ಅಗಲಿಕೆಗೆ ಸಂಪೂರ್ಣ ಉಡುಪಿ ಜಿಲ್ಲೆಯೇ ಮರುಗಿತ್ತು. ಜಿಲ್ಲೆಯ ಹೆಮ್ಮೆಯ ಯೋಧನಿಗೆ ಗೌರವ ಸೂಚಿಸುವ ಅಂಗವಾಗಿ ಕುಂದಾಪುರ ತಾಲೂಕಿನ ವಿವಿಧೆಡೆ ಹುತಾತ್ಮರಾದ ವೀರ ಯೋಧ ಅನೂಪ್ ಪೂಜಾರಿ ಅವರ ಶ್ರದ್ಧಾಂಜಲಿಯ ಬ್ಯಾನರ್ ಅಳವಡಿಸಲಾಗಿದೆ.
ಅಂತೆಯೇ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಐರ್‌ಬೈಲು ಸ್ಥಳೀಯರು ಕೂಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಳಿ ಅನೂಪ್ ಪೂಜಾರಿ ಅವರ ಬ್ಯಾನರ್ ಅಳವಡಿಸಿದ್ದರು. ಈ ಶಾಲೆಗೆ ಬರುವ ಮಕ್ಕಳು ಅನೂಪ್ ಪೂಜಾರಿ ಅವರಿಗೆ ಗೌರವ ಸಲ್ಲಿಸುತ್ತಾರೆ. ಅದರಲ್ಲೂ ಲಹರಿ ಎನ್ನುವ ವಿದ್ಯಾರ್ಥಿನಿ ಪ್ರತಿ ದಿನ ಶಾಲೆಗೆ ತೆರಳುವ ಮುನ್ನ ಅನೂಪ್ ಪೂಜಾರಿ ಅವರ ಭಾವಚಿತ್ರವಿರುವ ಬ್ಯಾನರ್‌ಗೆ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸುತ್ತಾಳೆ.
ತಾನು ಶಾಲೆಗೆ ಹೋಗುವ ಗಡಿಬಿಡಿಯ ನಡುವೆ ಅನೂಪ್ ಪೂಜಾರಿ ಅವರ ಭಾವಚಿತ್ರಕ್ಕೆ ವಿದ್ಯಾರ್ಥಿನಿ ಲಹರಿ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿ ಶಾಲೆಗೆ ತೆರಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ಕಿರಿಯ ಪ್ರಾಥಮಿಕದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಲಹರಿಯ ದೇಶಭಕ್ತಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬ್ಯಾನರ್ ಏನು? ಬ್ಯಾನರ್ ಏನೂ ಎಂದೂ ನೋಡದೇ ಒರಗಿ ನಿಲ್ಲುವ, ಉಗುಳುವ ಹಿರಿಯರು ಲಹರಿಯನ್ನು ನೋಡಿ ಕಲಿಯಬೇಕು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.












Click it and Unblock the Notifications