ದಾಖಲಾತಿ ವೇಳೆ ಸಮವಸ್ತ್ರ ನಿಯಮಕ್ಕೆ ಸಹಿ, ಈಗ ಸಮರ; ಹಿಜಾಬ್ ವಿದ್ಯಾರ್ಥಿನಿಯರ ದಾಖಲೆ ಬಹಿರಂಗ!
ಉಡುಪಿ, ಫೆಬ್ರವರಿ 5: ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ ಹಿಜಾಬ್ ವಿವಾದ ರಾಜ್ಯದ ಹಲವು ಕಾಲೇಜುಗಳಿಗೆ ವ್ಯಾಪಿಸಿದೆ. ಸದ್ಯ ಈ ಹಿಜಾಬ್ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದ್ದು, ಫೆ.8ರಂದು ಹಿಜಾಬ್ ಪ್ರಹಸನಕ್ಕೆ ಅಂತಿಮ ತೆರೆ ಬೀಳಲಿದೆ.
ಈ ನಡುವೆ ಇಂದು ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಖಾಸಗಿ ಶಾಲಾ-ಕಾಲೇಜುಗಳಲ್ಲಿ ಸಹ ಆಯಾ ಆಡಳಿತ ಮಂಡಳಿ ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಬೇಕಾದುದುದ ಕಡ್ಡಾಯವಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿ ಮೇಲ್ವಿಚಾರಣಾ ಸಮಿತಿ ನಿರ್ಧರಿಸುವ ಸಮವಸ್ತ್ರ ಧರಿಸಬೇಕು ಎಂದು ತಿಳಿಸಿದೆ.

ಹಿಜಾಬ್ ವಿದ್ಯಾರ್ಥಿನಿಯರು ಸಮವಸ್ತ್ರ ನಿಯಮಕ್ಕೆ ಸಹಿ, ಈಗ ಸಮರ
ಉಡುಪಿ ಕಾಲೇಜಿನಲ್ಲಿ ಹಿಜಾಬ್ ಹಿಂದಿನಿಂದಲೂ ವಿದ್ಯಾರ್ಥಿನಿಯರು ಧರಿಸುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಈ ವಿವಾದ ಆರಂಭವಾಗಿದೆ ಅಂತಾ ಕಾಲೇಜು ಆಡಳಿತ ಮಂಡಳಿ ಹೇಳುತ್ತಿದೆಯಾದರೂ, ವಿದ್ಯಾರ್ಥಿನಿಯರು ಮಾತ್ರ ನಾವು ಹಿಜಾಬ್ ಅನ್ನು ಹಿಂದಿನಿಂದಲೂ ಧರಿಸುತ್ತಿದ್ದೆವು. ಇದು ನಮ್ಮ ಧಾರ್ಮಿಕ ಸ್ವಾತಂತ್ರ್ಯ ಅಂತಾ ಹೇಳುತ್ತಿದ್ದಾರೆ. ಆದರೆ ವಿದ್ಯಾರ್ಥಿನಿಯರು ಸಮವಸ್ತ್ರದ ನಿಯಮವನ್ನು ಕಡ್ಡಾಯವಾಗಿ ಪಾಲಿಸುತ್ತೇವೆ ಎಂದು ಕಾಲೇಜಿಗೆ ಪ್ರವೇಶಾತಿ ಆಗುವ ಸಂದರ್ಭದಲ್ಲೇ ಸಹಿ ಮಾಡಿರುವ ಬಗ್ಗೆ ಸದ್ಯ ದಾಖಲೆಗಳು ಬಿಡುಗಡೆಯಾಗಿವೆ.
ಉಡುಪಿಯ ಕಾಲೇಜಿನಲ್ಲಿ ಎಂಟೂ ವಿದ್ಯಾರ್ಥಿನಿಯರೂ ಪ್ರವೇಶಾತಿ ಸಂದರ್ಭದಲ್ಲಿ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸುತ್ತೇವೆ ಎಂಬ ಪತ್ರಕ್ಕೆ ಸಹಿ ಹಾಕಿರುವ ಬಗ್ಗೆ ದಾಖಲೆಗಳು ಬಹಿರಂಗವಾಗಿದೆ. ಸದ್ಯ ಹಿಜಾಬ್ ಬಗ್ಗೆ ಧ್ವನಿ ಎತ್ತಿರುವ ರೇಶಾಂ, ಮುಷ್ಕಾನ್, ಅಶ್ರಾಜ್, ಆಲಿಯಾ, ಹಜ್ರಾ, ಆಯಿಷಾ, ಬೀಬಿ ಆಯಿಷಾ ಮತ್ತು ಶಫಾ ಎಂಬ ವಿದ್ಯಾರ್ಥಿನಿಯರು ಪ್ರವೇಶಾತಿ ಸಂದರ್ಭದಲ್ಲಿ ಸಹಿ ಹಾಕಿರುವ ದಾಖಲೆಗಳು ಹೊರಬಿದ್ದಿದೆ.

ಒಟ್ಟು ಹತ್ತು ಅಂಶಗಳ ಈ ಕಾಲೇಜು ನಿಯಾಮಾವಳಿ ಪಾಲನೆಯ ತಿಳುವಳಿಕೆ ಪತ್ರದಲ್ಲಿ ಒಂಭತ್ತನೇ ಅಂಶ "ವಾರದ ಎಲ್ಲಾ ದಿನಗಳಲ್ಲಿ ಸಮವಸ್ತ್ರ ಮತ್ತು ಗುರುತಿನ ಚೀಟಿ ಧರಿಸಿ ಬರುವುದು ಕಡ್ಡಾಯ' ಎಂಬ ಅಂಶ ಉಲ್ಲೇಖವಾಗಿದ್ದು, ಈ ಸೂಚನೆಗಳಿಗೆ ಅಂದು ವಿದ್ಯಾರ್ಥಿನಿಯರು ಒಪ್ಪಿ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ಈ ಸೂಚನಾ ಪತ್ರಕ್ಕೆ ಹೆತ್ತವರು/ಪೋಷಕರು ಕೂಡಾ ಸಹಿ ಹಾಕಿದ್ದು, ಕಾಲೇಜಿನ ಸೂಚನಾ ಪ್ರಕಾರವಾಗಿಯೇ ಮಕ್ಕಳನ್ನೂ ಕಾಲೇಜಿಗೆ ಕಳುಹಿಸಲು ಒಪ್ಪಿದ್ದರು.
ಆದರೆ ಈಗ ಈ ಎಂಟು ವಿದ್ಯಾರ್ಥಿಗಳು ಸಮವಸ್ತ್ರ ನಿಯಮಕ್ಕೆ ವಿರೋಧ ಮಾಡುತ್ತಿರುವುದರ ಹಿಂದೆ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಸಹಕಾರ ಇದೆ ಎಂದು ಉಡುಪಿ ಶಾಸಕ ರಘಪತಿ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿದ್ಯಾರ್ಥಿನಿಯರಿಗೆ ಕಳೆದೆರಡು ವರ್ಷಗಳಿಂದ ಹಿಜಾಬ್ ಬಗ್ಗೆ ಯಾವುದೇ ಆಕ್ಷೇಪಗಳು ಇರಲಿಲ್ಲ. ಆದರೆ ಕಳೆದ ಹಲವು ದಿನಗಳಿಂದ ಹಿಜಾಬ್‌ಗಾಗಿ ಪ್ರತಿಭಟನೆಗಿಳಿದಿದ್ದಾರೆ. ಕಾಲೇಜಿನ ಎರಡು ವರ್ಷಗಳ ದಾಖಲೆಯ ಪ್ರಕಾರ ಈ ವಿದ್ಯಾರ್ಥಿನಿಯರು ಎಂದೂ ಕಾಲೇಜಿಗೆ ಹಿಜಾಬ್ ಧರಿಸಿ ಬಂದಿಲ್ಲ. ಯಾವುದೇ ಕಾರ್ಯಕ್ರಮದಲ್ಲೂ ಹಿಜಾಬ್ ಧರಿಸಿ ಭಾಗವಹಿಸಿಲ್ಲ. ಈಗ ಸಮವಸ್ತ್ರ ನೀತಿಗೆ ಧಿಡೀರ್ ಆಗಿ ಹಿಜಾಬ್ ನಮ್ಮ ಸಂಸ್ಕೃತಿ, ಧಾರ್ಮಿಕ ನಂಬಿಕೆ ಎಂದು ಹೇಳುತ್ತಿರುವುದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಅಡಗಿದೆ ಅಂತಾ ಹೇಳಿದ್ದಾರೆ.
ಇನ್ನು ಸರ್ಕಾರ ಕೂಡಾ ಕಾಲೇಜಿನ ಸಮವಸ್ತ್ರ ನೀತಿ ಬಗ್ಗೆ ಸ್ಪಷ್ಟ ನಿಯಮ ಮಾಡಿದ್ದು, ಸರ್ಕಾರದ ನೂತನ ಸಮವಸ್ತ್ರ ಆದೇಶದ ಬಗ್ಗೆ ಶಾಸಕ ರಘಪತಿ ಭಟ್ ಸ್ವಾಗತ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಈ ಕುರಿತು ಮಾತನಾಡಿದ ಶಾಸಕ ರಘಪತಿ ಭಟ್, ಸರ್ಕಾರದ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆಯ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
Recommended Video
ಸೋಮವಾರದಿಂದ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ. ಹಿಜಾಬ್, ಕೇಸರಿ ಶಾಲು ಧರಿಸಿ ತರಗತಿಗೆ ಬರಬಾರದು. ಸರಕಾರದ ಆದೇಶದಲ್ಲಿ ಎಲ್ಲವೂ ಸ್ಪಷ್ಟವಾಗಿ ಉಲ್ಲೇಖಿಸಿದೆ. ಸರಕಾರಿ ಕಾಲೇಜು ಅಭಿವೃದ್ಧಿ ಸಮಿತಿ ನಿಯಮ ಅಂತಿಮವಾಗಿದೆ. ಖಾಸಗಿ ಕಾಲೇಜಲ್ಲೂ ಆಡಳಿತ ಮಂಡಳಿ ನಿಯಮ ಮಾಡಬಹುದು ಎಂದರು.
ಹಿಂದೂಗಳು ಕೇಸರಿ ಶಾಲು ಹಾಕಲು ಸಾಧ್ಯವಿಲ್ಲ. ಕಾನೂನು ವಿರುದ್ಧ ಹೋದರೆ ಕಾನೂನು ಕ್ರಮ ಕೈಗೊಳ್ಳಬಹುದು. ಮುಸ್ಲಿಂ ವಿದ್ಯಾರ್ಥಿನಿಯರು ಸಾಕ್ಷರತೆಗೆ ಒತ್ತು ಕೊಡಬಹುದು. ಶಿಕ್ಷಣ ಮಾತ್ರ ಬೇಕು ಎನ್ನುವವರಿಗೆ ಈ ಆದೇಶದಿಂದ ಒಳಿತಾಗಲಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications