ಮಂಗಳೂರು ವಿ.ನಿಲ್ದಾಣ, ಶ್ರೀಮಧ್ವಶಂಕರ ವಿಮಾನ ನಿಲ್ದಾಣ ಎಂದು ಮರುನಾಮಕರಣಗೊಳ್ಳಲಿ
ಉಡುಪಿ, ನ 26: ಇಡೀ ಜಗತ್ತು ಭಾರತವನ್ನು ಮುಖ್ಯವಾಗಿ ಆಧ್ಯಾತ್ಮಿಕ ದೃಷ್ಟಿಯಿಂದಲೇ ಗುರುತಿಸುತ್ತಿದ್ದು, ರಾಜಕಾರಣಿಗಳೂ ಕೂಡಾ ಭಾರತವನ್ನು 'ವಿಶ್ವಗುರು' ಮಾಡಬೇಕೆಂದು ಪದೇ ಪದೇ ಪುನರುಚ್ಚರಿಸುತ್ತಿದ್ದಾರೆಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಗಳು ಹೇಳಿದ್ದಾರೆ.
"ಉಡುಪಿ, ಶೃಂಗೇರಿಯಲ್ಲಿ ತಮ್ಮ ಕೇಂದ್ರಗಳನ್ನು ಸ್ಥಾಪಿಸಿ ಶತಶತಮಾನಗಳಿಂದ ತಮ್ಮ ಆಧ್ಯಾತ್ಮಿಕ ಕಾರ್ಯಕ್ಷೇತ್ರಗೊಳಿಸಿರುವ ಜಗದ್ಗುರು ಶ್ರೀಮಧ್ವಾಚಾರ್ಯ, ಜಗದ್ಗುರು ಶ್ರೀಶಂಕರಾಚಾರ್ಯರ ಹೆಸರಲ್ಲಿ ಪರಶುರಾಮ ಕ್ಷೇತ್ರದಲ್ಲಿರುವ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಶ್ರೀಮಧ್ವಶಂಕರ ವಿಮಾನ ನಿಲ್ದಾಣವೆಂದು ನಾಮಕರಣ ಮಾಡುವುದು ಅತ್ಯಂತ ಅರ್ಥಪೂರ್ಣ, ಅಪೂರ್ವ ಮತ್ತು ಮೌಲಿಕವೆನಿಸುತ್ತದೆ"ಎಂದು ಪುತ್ತಿಗೆ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
"ಅಯೋಧ್ಯೆಯಲ್ಲಿ ಶ್ರೀರಾಮನ ಹೆಸರಿನಲ್ಲಿ ವಿಮಾನನಿಲ್ದಾಣ ಮೂಡಿಬಂದಂತೆ, ದಾರ್ಶನಿಕ ಆಚಾರ್ಯರುಗಳ ನೆಲೆವೀಡಾದ ದಕ್ಷಿಣಭಾರತದ ಈ ವಿಮಾನನಿಲ್ದಾಣಕ್ಕೆ ಶ್ರೀಮಧ್ವಶಂಕರರ ನಾಮಕರಣ ಭಾರತದ ದಾರ್ಶನಿಕ ಪರಂಪರೆಗೆ ಗೌರವ ಸಲ್ಲಿಸಿದಂತಾಗುವುದು"ಎಂದು ಶ್ರೀಗಳು ಹೇಳಿದ್ದಾರೆ.

ಆಧ್ಯಾತ್ಮಿಕತೆಯೇ ಭಾರತದ ಮೂಲ ಮತ್ತು ಅಪೂರ್ವ ಸಂಪತ್ತಾದ್ದರಿಂದ ಧಾರ್ಮಿಕ ಆಧ್ಯಾತ್ಮಿಕ ಕ್ಷೇತ್ರದಲ್ಲೇ ಭಾರತಕ್ಕೆ ಮುಂದೆ ಜಗತ್ತಿನ ನೇತೃತ್ವ ಪಡೆಯಲು ಉಜ್ವಲ ಹಾಗೂ ವಿಪುಲ ಅವಕಾಶವಿರುವುದರಿಂದಲೂ, ಶ್ರೀರಾಮಾನುಜಾಚಾರ್ಯ, ಬಸವಣ್ಣ ಮೊದಲಾದ ಮಹಾ ಧಾರ್ಮಿಕ ನೇತಾರರ ಮೂಲಸ್ಥಳಗಳ ಸಮೀಪದಲ್ಲಿರುವ ದೇಶದ ಉಳಿದ ವಿಮಾನ ನಿಲ್ದಾಣಾದಿಗಳಿಗೂ ಆ ಧಾರ್ಮಿಕ ನೇತಾರರ ನಾಮಕರಣ ಮಾಡುವುದೇ ಉಳಿದೆಲ್ಲ ಆಯ್ಕೆಗಳಿಗಿಂತಲೂ ಅತ್ಯಂತ ಪ್ರಶಸ್ತ ಎಂದು ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
"ಕೊರೊನಾದಿಗಳ ಹಿನ್ನೆಲೆಯಲ್ಲಿ ಚಿಂತಿಸಿದಾಗ ಜಗತ್ತಿಗೆ ಇದೀಗ ಆಧ್ಯಾತ್ಮಿಕ ಆಂದೋಲನದ ಆವಶ್ಯಕತೆ ಬಹುವಾಗಿ ಎದ್ದು ಕಾಣುತ್ತಿದ್ದು ಈ ಹಿನ್ನೆಲೆಯಲ್ಲಿ ಧಾರ್ಮಿಕ ಆಧ್ಯಾತ್ಮಿಕತೆಗೆ ಸರಕಾರಗಳು ಹೆಚ್ಚಿನ ಒತ್ತು ನೀಡುವ ದೃಷ್ಟಿಯಲ್ಲೂ ಶ್ರೀಮಧ್ವಶಂಕರ ವಿಮಾನ ನಿಲ್ದಾಣದ ನಾಮಕರಣ ಅತ್ಯಂತ ಸೂಕ್ತ ಹಾಗೂ ಸಂದರ್ಭೋಚಿತ" ಎಂದು ಶ್ರೀಗಳು ಹೇಳಿದ್ದಾರೆ.
"ಮಾತ್ರವಲ್ಲದೆ ಜಗತ್ತಿನಲ್ಲಿ ಧರ್ಮಪ್ರಚಾರಕ್ಕೆ ಅದು ಪೂರಕವೂ ಆಗುವುದಲ್ಲದೆ ಭಾವೈಕ್ಯಕ್ಕೂ ಇಂಬುನೀಡುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕೆಂದು" ಎಂದು ಶ್ರೀಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಮದುಪೇಂದ್ರತೀರ್ಥ ಪೀಠದ ಪೀಠಾಧೀಶರಾದ ಉಡುಪಿ ಶ್ರೀಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಗಳು ಕೋರಿದ್ದಾರೆ.












Click it and Unblock the Notifications