ಸಿದ್ದರಾಮಯ್ಯ ರಾಹುಲ್ ಗಾಂಧಿ ಸಲಹೆ ಕೇಳಲ್ವಾ?; ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರಶ್ನೆ
ಉಡುಪಿ, ಆಗಸ್ಟ್ 29: ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಇಂದು ಉಡುಪಿಯ ಜೀವನದಿ ಸ್ವರ್ಣೆಗೆ ಬಾಗಿನ ಅರ್ಪಿಸಿದರು. ಪತ್ನಿ ಸಮೇತ ಆಗಮಿಸಿದ ಸಚಿವರು ಸ್ವರ್ಣಾ ನದಿ ತಟದಲ್ಲಿ ಬಾಗಿನ ಅರ್ಪಣೆ ಮಾಡಿದರು.
ಶೀಂಬ್ರಾ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನೂ ನಡೆಸಲಾಯಿತು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, "ಬಾಗಿನ ಅರ್ಪಿಸುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ಇಲ್ಲಿನ ಶೀಂಬ್ರಾ ದೇವಸ್ಥಾನ ಮತ್ತು ಸ್ನಾನಘಟ್ಟವನ್ನು ಮುಜರಾಯಿ ಇಲಾಖೆಯಿಂದ ಅಭಿವೃದ್ಧಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ಮುಜುರಾಯಿ ದೇವಸ್ಥಾನದ ಹಣ ದುರ್ಬಳಕೆ ಆಗಲು ಬಿಡಲ್ಲ. ಇದು ಮುಜರಾಯಿ ಇಲಾಖೆಯ ಕಟ್ಟುನಿಟ್ಟಿನ ನಿರ್ಣಯ" ಎಂದು ಸಚಿವರು ಈ ವೇಳೆ ಸ್ಪಷ್ಟಪಡಿಸಿದರು.
"ಈ ಬಗ್ಗೆ ಈಗಾಗಲೇ ಎರಡು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. 27 ಸಾವಿರ ದೇವಸ್ಥಾನಗಳಿಗೆ ಇಲಾಖೆಯಿಂದ ತಸ್ತೀಕು ನೀಡಲಾಗುತ್ತಿದೆ. ವರ್ಷಕ್ಕೆ 48 ಸಾವಿರ ತಸ್ತೀಕು ಕೊಡ್ತೇವೆ. ತಸ್ತೀಕಿನಲ್ಲಿ ತಾರತಮ್ಯ ಇದೆ ಎಂಬ ಆರೋಪ ಇದೆ. ಈ ಗವರ್ನೆನ್ಸ್ ಮೂಲಕ ಖಾತೆಗೆ ಹಣ ಜಮಾ ಮಾಡಲು ಯೋಜನೆ ರೂಪಿಸಿದ್ದೇವೆ. ಈ ಬಗ್ಗೆ ಸೂಕ್ತ ಆದೇಶ ಹೊರಡಿಸಿದ್ದೇನೆ. ವಾರದೊಳಗೆ ಈ ಕುರಿತ ಪ್ರಕ್ರಿಯೆ ಪೂರ್ಣವಾಗಲಿದೆ" ಎಂದರು.

"ಮೀನುಗಾರರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ತರಲು ಚಿಂತನೆ ನಡೆಸಲಾಗುತ್ತಿದೆ. ಈ ಸಂಬಂಧ ಕಾರ್ಮಿಕ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಆದರೆ ಕಟ್ಟಡ ಕಾರ್ಮಿಕರ ವಲಯಕ್ಕೆ ತರಲು ಆಗುವುದಿಲ್ಲ. ಕಟ್ಟಡ ಕಾರ್ಮಿಕರ ಸೆಸ್ ನ ಪ್ರಯೋಜನ ಮೀನುಗಾರರಿಗೆ ಕೊಡಲು ಬರುವುದಿಲ್ಲ. ಅಸಂಘಟಿತ ವಲಯಕ್ಕೆ ಮೀನುಗಾರರನ್ನು ತರಲು ಸರ್ವ ಪ್ರಯತ್ನ ಮಾಡಲಾಗುವುದು" ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಅಮಿತ್ ಶಾ ಆಡಳಿತ ಎಂಬ ವಿಪಕ್ಷಗಳ ಟೀಕೆಗೆ ಉತ್ತರ ನೀಡಿದ ಕೋಟ, "ರಾಜ್ಯದ ಸಿಎಂಗೆ ಹೈಕಮಾಂಡ್, ಪ್ರಧಾನಿ, ಗೃಹ ಸಚಿವರು ಸಲಹೆ ಕೊಡೋದು ಸಹಜ. ಅವರ ಸಲಹೆ ಸಮಷ್ಟಿಹಿತ, ರಾಜ್ಯದ ಹಿತಕ್ಕೆ ಪೂರಕ. ಸಿದ್ದರಾಮಯ್ಯ ರಾಹುಲ್ ಗಾಂಧಿ ಸಲಹೆ ಕೇಳಲ್ವಾ?" ಎಂದು ಪ್ರಶ್ನಿಸಿದರು.
"ಉಸ್ತುವಾರಿ ಸಚಿವರ ನೇಮಕದಲ್ಲಿ ಯಾವುದೇ ಗೊಂದಲ ಇಲ್ಲ. ಮೂವರು ಡಿಸಿಎಂ ನೇಮಕದಿಂದ ಪ್ರವಾಹ ನಿರ್ವಹಣೆಗೆ ಅನುಕೂಲ ಆಗಲಿದೆ. ಜೆಡಿಎಸ್ ಕಾಂಗ್ರೆಸ್ ಯಾವತ್ತೂ ಒಂದಾಗಿಲ್ಲ. ಯಡಿಯೂರಪ್ಪ ಸಿಎಂ ಆಗಬಾರದು ಎಂಬ ಉದ್ದೇಶದಿಂದ ಒಂದಾಗಿದ್ದರು. ಈಗ ಅಸಮಾಧಾನ ಬಯಲಾಗಿದೆ" ಎಂದರು.












Click it and Unblock the Notifications