ಉಡುಪಿಯಲ್ಲಿ ಜೂನ್ ನಲ್ಲಿ ಜಿಲ್ಲಾಡಳಿತದಿಂದ ಸಾವಯವ ಸಂತೆ
ಉಡುಪಿ, ಮೇ 25: ಇಲ್ಲಿನ ಜಿಲ್ಲಾಡಳಿತ ಅಂದುಕೊಂಡಂತೆಯೇ ಎಲ್ಲ ನಡೆದರೆ ಜೂನ್ ಅಂತ್ಯದ ವೇಳೆಗೆ ಸಾವಯವ ಸಂತೆ ಆರಂಭವಾಗಲಿದೆ. ಇಲ್ಲಿನ ದೊಡ್ಡನಗುಡ್ಡೆಯಲ್ಲಿರುವ ಹೂವು ಹರಾಜು ಕೇಂದ್ರದಲ್ಲಿ ವಾರದ ಸಾವಯವ ಸಂತೆ ನಡೆಸಲು ಒಪ್ಪಿಗೆ ಸಿಕ್ಕಿದೆ. ರಾಜ್ಯ ಸರಕಾರದ ಸಾವಯವ ಭಾಗ್ಯ ಯೋಜನೆ ಅಡಿಯಲ್ಲಿ ಜಿಲ್ಲೆಯ ಆರು ನೂರಾ ಮೂವತ್ತೆರಡು ರೈತರು ಸಾವಯವ ಕೃಷಿ ಮಾಡುತ್ತಿದ್ದಾರೆ.
ಇದಕ್ಕಾಗಿ ಸರಕಾರೇತರ ಸಂಸ್ಥೆಗಳು ಹಾಗೂ ಕೃಷಿ ಇಲಾಖೆ ಸೇರಿ ಜಿಲ್ಲೆಯಲ್ಲಿ ಹಿರೇಬೆಟ್ಟು, ಕಡೂರು, ಕತ್ತಿನಗೇರಿ, ಬೆಳಿಂಜೆ, ಜಪ್ತಿ ಹಾಗೂ ತೆಗ್ಗರ್ಸೆಯಲ್ಲಿ ಕ್ಲಸ್ಟರ್ ಮಾಡಿವೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉಡುಪಿ ಒಳಗೊಂಡಂತೆ ಪ್ರಾದೇಶಿಕ ಸಹಕಾರ ಸಾವಯವ ಕೃಷಿಕರ ಒಕ್ಕೂಟ ಸಹ ಮಾಡಲಾಗಿದೆ.[ಅನ್ನದಾತನ ಕೈಹಿಡಿದಿರುವ ಮಹತ್ವಾಕಾಂಕ್ಷಿ ಯೋಜನೆಗಳು]

ಸಾವಯವ ಸಂತೆಯಲ್ಲಿ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳೆದ ಸಾವಯವ ತರಕಾರಿ, ಆಹಾರ ಧಾನ್ಯ ಮತ್ತು ಹಣ್ಣುಗಳು ಸಹ ದೊರೆಯಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ. ರಾಜ್ಯ ಸರಕಾರದ ಯೋಜನೆ ಹೊರತುಪಡಿಸಿ ಕೇಂದ್ರದ ಪರಂಪರಾಗತ್ ಕೃಷಿ ವಿಕಾಸ್ ಯೋಜನೆಯಲ್ಲಿ ಸಹ ಜಿಲ್ಲೆಯ ಒಂಬತ್ತು ಗ್ರಾಮಗಳ 292 ರೈತರು ಸಾವಯವ ಕೃಷಿ ಮಾಡುತ್ತಿದ್ದಾರೆ.[ಭಾರತವನ್ನು ಸಾವಯವ ಕೃಷಿ ದೇಶವಾಗಿಸುವುದೇ ನಮ್ಮ ಗುರಿ - ಅನಂತ್ ಕುಮಾರ್]
ಸಾವಯವ ಸಂತೆಯು ಮುದಿನ ತಿಂಗಳಿಂದ ಭಾನುವಾರದಂದು ನಡೆಯಲಿದೆ. ಆದರೆ ದಿನಾಂಕ ನಿಗದಿಯಾಗಿಲ್ಲ. ಮೊದಲ ಬಾರಿಗೆ ಹೂವು ಹರಾಜು ಕೇಂದ್ರದಲ್ಲಿ ಗೋದಾಮು ಮಾಡಲಾಗುವುದು ಮತ್ತು ಅಲ್ಲೇ ಸಾವಯವ ವಸ್ತುಗಳು ಮಾರಾಟಕ್ಕಿವೆ ಎಂದು ಫಲಕ ಇಟ್ಟು ಆರಂಭದಲ್ಲಿ ಮಾರಾಟ ಮಾಡಲಾಗುವುದು. ಸಾವಯವ ಸಂತೆ ಬಗ್ಗೆ 'ದ ಹಿಂದೂ' ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ.












Click it and Unblock the Notifications