ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದು ಮೆಣಸಿನ ಪುಡಿ ಎರಚಿ ದರೋಡೆ
ಉಡುಪಿ, ಸೆಪ್ಟೆಂಬರ್ 4: ರಾತ್ರಿ ಗ್ರಾಹಕರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಅಂಗಡಿ ಮಾಲಿಕರೊಬ್ಬರನ್ನು ಕಟ್ಟಿಹಾಕಿ ದರೋಡೆಗೈದು ಪರಾರಿಯಾದ ಘಟನೆ ಕುಂದಾಪುರ ದಲ್ಲಿ ನಡೆದಿದೆ.
ಕುಂದಾಪುರ ತಾಲೂಕಿನ ಸಾಲಿಗ್ರಾಮದಲ್ಲಿ ನಿನ್ನೆ ರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇರುವ ಗ್ರೇಶನ್ ಲೋಬೊ ಎಂಬವರ ಲೋಬೊ ಚಿಕನ್ ಸೆಂಟರಿಗೆ ರಾತ್ರಿ ಗ್ರಾಹಕರ ಸೋಗಿನಲ್ಲಿ ಬಂದ ದರೋಡೆಕೋರರು ಗ್ರೇಶನ್ ಲೋಬೊ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಬಳಿಕ ಅವರ ಕೈಗಳನ್ನು ಬಳ್ಳಿಯಿಂದ ಕಟ್ಟಿಹಾಕಿದ್ದಾರೆ.

ನಂತರ ಅವರ ಮೇಲೆ ಹಲ್ಲೆ ನಡೆಸಿದ ದರೋಡೆಕೋರರು 50 ಸಾವಿರ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಗ್ರೇಶನ್ ಅವರ ತಮ್ಮ ಕೋಳಿಯ ತ್ಯಾಜ್ಯವನ್ನು ಹೊರಗಡೆ ಹಾಕಲು ಹೋಗಿದ್ದು ವಾಪಾಸು ಬಂದು ನೋಡುವಾಗ ಅಣ್ಣ ಗ್ರೇಶನ್ ಲೋಬೊ ನೆಲದಲ್ಲಿ ಬಿದ್ದಿದ್ದರು. ಕೂಡಲೇ ಸಹಾಯಕ್ಕಾಗಿ ಸ್ಥಳೀಯರನ್ನು ಕೂಗಿದ ಅವರು ಬಳಿಕ ಅಂಬುಲೆನ್ಸ್ ಮೂಲಕ ಗ್ರೇಶನ್ ಅವರನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗ್ರೇಶನ್ ಅವರಿಗೆ ಪ್ರಜ್ಞೆ ಬಂದ ಬಳಿಕವಷ್ಟೇ ಎಷ್ಟು ಮಂದಿ ದರೋಡೆ ಕೋರರು ಇದ್ದರು ಎನ್ನುವ ಸ್ಪಷ್ಟ ಮಾಹಿತಿ ಲಭಿಸಬೇಕಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಎರಡು ಮಂದಿ ಕತ್ತಲಿನಲ್ಲಿ ಓಡಿ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.
ಘಟನೆ ನಡೆದ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ .












Click it and Unblock the Notifications