ಸಾಲುಮರದ ತಿಮ್ಮಕ್ಕನ ಪದ್ಮಶ್ರೀ ಪ್ರಶಸ್ತಿಗೂ ಉಡುಪಿಗೂ ಏನಿದು ನಂಟು?
ಉಡುಪಿ, ಸೆಪ್ಟೆಂಬರ್ 17: ಸಾಲು ಮರದ ತಿಮ್ಮಕ್ಕನಿಗೆ ಪದ್ಮಶ್ರೀ ಪುರಸ್ಕಾರ ಸಿಕ್ಕಿದ್ದು ಎಲ್ಲರಿಗೂ ಗೊತ್ತು. ಆದರೆ ಪದ್ಮಶ್ರೀ ಸಿಗೋದಕ್ಕೆ ಕಾರಣವೇನು ಅಂತ ಯಾರಿಗಾದ್ರೂ ಗೊತ್ತಿದ್ಯಾ?
ಉಡುಪಿಯ ಅಂಬಲಪಾಡಿ ದೇವಸ್ಥಾನಕ್ಕೆ ಸಾಲುಮರದ ತಿಮ್ಮಕ್ಕ ಭೇಟಿ ಕೊಟ್ಟಾಗ ಈ ರಹಸ್ಯ ಬಯಲಾಗಿದೆ. ಮೂರು ವರ್ಷಗಳ ಹಿಂದೆ ತಿಮ್ಮಕ್ಕ ಉಡುಪಿಯ ಅಂಬಲಪಾಡಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ರು. ಆಗಿನ್ನೂ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರಲಿಲ್ಲ. ತಿಮ್ಮಕ್ಕನ ಸಾಕು ಮಗನ ಮನಸ್ಸಿನಲ್ಲಿ ಈ ಬಗ್ಗೆ ಖೇದವಿತ್ತು.
ಎಂತೆಂಥವರಿಗೆಲ್ಲಾ ಪದ್ಮಶ್ರೀ ಪ್ರಶಸ್ತಿ ಬಂದಾಗಿದೆ, ತಿಮ್ಮಕ್ಕನಂತಹಾ ಹಿರಿಯ ಜೀವಕ್ಕೆ ಪ್ರಶಸ್ತಿ ಸಿಗೋದು ಯಾವಾಗ? ಇದು ಉಮೇಶ್ ಗಿದ್ದ ನೋವು. ದೇವಸ್ಥಾನದ ಆಡಳಿತ ಮಂಡಳಿಯವರು ಅಂಬಲಪಾಡಿ ಮಹಾಕಾಳಿ ದೇವಿಗೆ ತೊಡಿಸಿದ ಸೀರೆಯನ್ನು ತಿಮ್ಮಕ್ಕನಿಗೆ ಪ್ರಸಾದವಾಗಿ ನೀಡಿದರು. ಅವತ್ತೇ ಉಮೇಶ್ ಒಂದು ನಿರ್ಧಾರಕ್ಕೆ ಬಂದಿದ್ದರು.

ಒಂದು ವೇಳೆ ಪದ್ಮಶ್ರೀ ಪ್ರಶಸ್ತಿ ಬಂದರೆ ಅದೇ ಸೀರೆ ಉಡಿಸಿ ತಿಮ್ಮಕ್ಕನನ್ನು ಅಂಬಲಪಾಡಿ ಮಹಾಕಾಳಿಯ ದೇವಿಯ ದರ್ಶನಕ್ಕೆ ಕರೆತರೋದಾಗಿ ಮನಸಲ್ಲೇ ಹರಕೆ ಹೊತ್ತಿದ್ರು. ಇದೀಗ ಕಾಲ ಕೂಡಿಬಂದಿದೆ. ಸಾಲುಮರದ ತಿಮ್ಮಕ್ಕನಿಗೆ ಪದ್ಮಶ್ರೀ ಪ್ರಶ್ತಸ್ತಿ ಒಲಿದು ಬಂದಿದೆ. ಹಾಗಾಗಿ ಸೋಮವಾರ ಉಡುಪಿ ಭೇಟಿಯ ಸಂದರ್ಭದಲ್ಲಿ ತಿಮ್ಮಕ್ಕನನ್ನು ಪುತ್ರ ಉಮೇಶ್ ದೇವಿಯ ದರ್ಶನಕ್ಕೆ ಕರೆದುಕೊಂಡು ಬಂದಿದ್ದರು. ತಾಯಿಗೆ ಹೊತ್ತ ಹರಕೆ ತೀರಿಸಿ ವಾಪಸ್ಸಾದ್ರು ಮತ್ತು ಈ ಪದ್ಮಶ್ರೀ ರಹಸ್ಯವನ್ನೂ ಅವರೇ ಹೇಳಿಕೊಂಡರು.











Click it and Unblock the Notifications