ಡೈವೋರ್ಸ್ ಕೊಟ್ಟು ಮತ್ತೆ ಬಿಜೆಪಿಯ ಕೈಹಿಡಿದ ಹಾಲಾಡಿ: ರಾಕೇಶ್ ಮಲ್ಲಿ ವ್ಯಂಗ್ಯ
ಉಡುಪಿ, ಫೆಬ್ರವರಿ 4: ಡೈವೋರ್ಸ್ ಕೊಟ್ಟ ಮೇಲೆ ಮರು ಮದುವೆಯಾಗಲ್ಲ ಎಂದು ಹೇಳಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮತ್ತೆ ಅದೇ ಡೈವೋರ್ಸ್ ಕೊಟ್ಟ ಬಿಜೆಪಿ ಪಕ್ಷದ ಕೈಹಿಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗು ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ವ್ಯಂಗ್ಯವಾಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸೇರುವುದು ಹಾಲಾಡಿ ವೈಯಕ್ತಿಕ ವಿಚಾರ. ಆದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕುಂದಾಪುರದ ಜನರಿಗೆ ಹಾಲಾಡಿ ಶ್ರೀನಿವಾಸ್ ಶೆಟ್ಟಿ ವಂಚಿಸಿದ್ದಾರೆ ಎಂದು ಅವರು ಆರೋಪಿಸಿದರು.
"ಬಜೆಟ್ ಸಮಯದಲ್ಲಿ ಶ್ರೀನಿವಾಸ್ ಶೆಟ್ಟಿ ರಾಜೀನಾಮೆ ನೀಡಿದ್ದು ಸರಿಯಲ್ಲ," ಎಂದು ಹೇಳಿದ ಅವರು, "ಕುಂದಾಪುರದ ಜನತೆಗೆ ಕೊಟ್ಟ ಮಾತನ್ನು ಶ್ರೀನಿವಾಸ್ ಶೆಟ್ಟಿ ಉಳಿಸಿಕೊಂಡಿಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಂದಾಪುರದ ಜನತೆಗೆ ಸುಳ್ಳು ಹೇಳಿ ಶಾಸಕರಾಗಿದ್ದೀರಿ ಎಂದು ವಾಗ್ದಾಳಿ ನಡೆಸಿದ ರಾಕೇಶ್ ಮಲ್ಲಿ, ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಹಾಲಾಡಿ ಅವರಿಗೆ ಸರಿಯಾದ ಮದ್ದು ನೀಡುತ್ತಾರೆ ಎಂದು ಹೇಳಿದರು.
ರಾಜ್ಯ ಬಜೆಟ್ ಸಂದರ್ಭದಲ್ಲೇ ಶ್ರೀನಿವಾಸ್ ಶೆಟ್ಟಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕುಂದಾಪುರವನ್ನು ಅನಾಥವಾಗಿಸಿದ್ದಾರೆ ಎಂದು ಅವರು ಕಿಡಿಕಾರಿದರು. ಹಾಲಾಡಿಯವರಿಗೆ ಪಕ್ಷೇತರನಾಗಿ ಗೆಲ್ಲುವ ವಿಶ್ವಾಸವಿಲ್ಲ. ಆ ಕಾರಣಕ್ಕಾಗಿಯೇ ಮತ್ತೆ ಬಿಜೆಪಿ ಸೇರಿಕೊಂಡಿದ್ದಾರೆ ಎಂದು ಅವರು ದೂರಿದರು.












Click it and Unblock the Notifications