ಉಡುಪಿ: ಲೈನ್‌ಮ್ಯಾನ್‌ಗಳಿಗೆ ಭೋಜನ ಕೂಟ ಏರ್ಪಡಿಸಿ ಜನ್ಮದಿನ ಆಚರಿಸಿದ ಇಂಧನ ಸಚಿವ
ಉಡುಪಿ, ಆಗಸ್ಟ್ 16: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಅಸ್ತಿತ್ವಕ್ಕೆ ಬಂದ ನಂತರ ಮಾದರಿ ನಡೆಗಳನ್ನು ಕಂಡಿದೆ. ಯಥಾ ರಾಜ ತಥಾ ಪ್ರಜಾ ಎಂಬಂತೆ ಒಂದರ ಮೇಲೆ ಒಂದಂತೆ ಹಲವು ಮಾದರಿ ನಿರ್ಧಾರಗಳನ್ನು ಬೊಮ್ಮಾಯಿ ತೆಗೆದುಕೊಂಡಂತೇ, ಬೊಮ್ಮಾಯಿ ಸಂಪುಟದ ಕೆಲ ಸಚಿವರೂ ಬೊಮ್ಮಾಯಿ ಹಾದಿಯನ್ನೇ ತುಳಿಯುತ್ತಿದ್ದಾರೆ.
ಅದರಲ್ಲೂ ಸಂಪುಟದ ಡೈನಾಮಿಕ್ ಮಿನಿಸ್ಟರ್, ಪವರ್ ಮಿನಿಸ್ಟರ್, ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಅವರಂತೂ ಮಾದರಿ ನಡೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯನ್ನೇ ಮೀರಿಸಿದ್ದಾರೆ.
75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ದೇಶವಿದ್ದರೆ, ಸಚಿವ ವಿ. ಸುನೀಲ್ ಕುಮಾರ್‌ಗೆ ಡಬಲ್ ಸಂಭ್ರಮ. ಯಾಕೆಂದರೆ ಸುನೀಲ್ ಕುಮಾರ್ ಹುಟ್ಟುಹಬ್ಬ ಸ್ವಾತಂತ್ರ್ಯ ದಿನಾಚರಣೆಯಂದೇ ಇತ್ತು. ಆದರೆ ಈ ಬಾರಿ ಸುನೀಲ್ ಕುಮಾರ್ ಹುಟ್ಟುಹಬ್ಬ ಬಹಳ ವಿಶೇಷತೆಯಿಂದ ಕೂಡಿತ್ತು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳನ್ನೆಲ್ಲಾ ಮುಗಿಸಿದ ನಂತರ ಸಚಿವ ಸುನಿಲ್ ಕುಮಾರ್ ಮನೆಗೆ ಅತಿಥಿಗಳ ದಂಡೇ ಹರಿದು ಬಂದಿತ್ತು.

ಶ್ರಮಿಕ ವರ್ಗದ ಜೊತೆಗೇನೇ ಆಚರಿಸಬೇಕೆಂದು ನಿರ್ಧಾರ
ಈ ಬಾರಿ ಸಚಿವ ಸುನೀಲ್ ಕುಮಾರ್ ತಮ್ಮ ಹುಟ್ಟುಹಬ್ಬಕ್ಕೆ ವಿಶೇಷ ಅತಿಥಿಗಳನ್ನಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಲೈನ್‌ಮ್ಯಾನ್‌ಗಳನ್ನು ಮನೆಗೆ ಅಹ್ವಾನಿಸಿದ್ದರು. ಇಂಧನ ಸಚಿವರಾದ ಬಳಿಕ ಮೊದಲ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಸುನೀಲ್ ಕುಮಾರ್ ತನ್ನ ಇಲಾಖೆಗಾಗಿ ದುಡಿಯುತ್ತಿರುವ ಶ್ರಮಿಕ ವರ್ಗದ ಜೊತೆಗೇನೇ ಆಚರಿಸಬೇಕೆಂದು ನಿರ್ಧಾರ ಮಾಡಿದ್ದರು. ಸುಮಾರು 200ಕ್ಕೂ ಅಧಿಕ ಲೈನ್‌ಮ್ಯಾನ್‌ಗಳನ್ನು ಮನೆಗೆ ಅಹ್ವಾನಿಸಿದ್ದರು.

ಸ್ನೇಹಿತನಂತೆ ಕುಶಲೋಪಚಾರಿ ವಿಚಾರಿಸಿದರು
ಮನೆಯಲ್ಲೇ ಸಿಹಿ ಭೋಜನದ ವ್ಯವಸ್ಥೆಯನ್ನು ಮಾಡಿದ ಇಂಧನ ಸಚಿವ ಸುನೀಲ್ ಕುಮಾರ್, ಮನೆಗೆ ಬಂದ ಎಲ್ಲರ ಜೊತೆಯೂ ಪ್ರೀತಿಯಿಂದ ಮಾತನಾಡಿದರು. ಸ್ನೇಹಿತನಂತೆ ಕುಶಲೋಪಚಾರಿ ವಿಚಾರಿಸಿದರು. ಅತ್ತ ಲೈನ್‌ಮ್ಯಾನ್‌ಗಳೂ ನೂತನ ಸಚಿವರ ಉದಾರತೆ ಕಂಡು ಮರುಳಾದರು. ಹಲವು ಮಂದಿ ಸಚಿವ ಸುನೀಲ್ ಕುಮಾರ್ ಜೊತೆ ಸೆಲ್ಫಿ ತೆಗೆದುಕೊಂಡರೆ, ಇನ್ನೂ ಕೆಲವು ಮಂದಿ ಸಚಿವರಿಗೆ ತಮ್ಮ ಅಹವಾಲನ್ನು ನೀಡಿದರು.
ಬಳಿಕ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಅಷ್ಟೇ ಭರ್ಜರಿಯಾಗಿ ಸಚಿವರು ಮಾಡಿದ್ದರು. ಸಚಿವ ಎಂಬ ಹಮ್ಮು- ಬಿಮ್ಮಿಲ್ಲದೇ ಸುನೀಲ್ ಕುಮಾರ್ ಕೂಡಾ ಲೈನ್‌ಮ್ಯಾನ್‌ಗಳ ಜೊತೆಗೆ ಕೂತು ಊಟ ಮಾಡಿದರು. ಊಟದ ಬಳಿಕ ಎಲ್ಲರನ್ನೂ ಅಷ್ಟೇ ಆತ್ಮೀಯತೆಯಿಂದ ಬೀಳ್ಕೋಟ್ಟ ಸುನೀಲ್ ಕುಮಾರ್, ಯಾವುದೇ ಕಷ್ಟ, ಸಮಸ್ಯೆಗಳಿದ್ದರೂ ನೇರವಾಗಿ ತನ್ನ ಗಮನಕ್ಕೆ ತರಬೇಕೆಂದು ಕೇಳಿಕೊಂಡರು.

ಬೋಳ ಪ್ರಭಾಕರ್ ಕಾಮತ್‌ರಿಂದ ಕಚೇರಿ ಉದ್ಘಾಟನೆ
ಇಂಧನ ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗಲೂ ಸುನೀಲ್ ಕುಮಾರ್ ನಡೆದುಬಂದ ಹಾದಿಯನ್ನು ಮರೆಯಲಿಲ್ಲ. ವಿಧಾನಸೌಧದಲ್ಲಿ ತನ್ನ ಕಚೇರಿ ಉದ್ಘಾಟನೆಯನ್ನು ರಾಜಕೀಯಕ್ಕೆ ಕರೆದುಕೊಂಡು ಬಂದ ಹಿರಿಯ ಸ್ವಯಂಸೇವಕ ಬೋಳ ಪ್ರಭಾಕರ್ ಕಾಮತ್ ಎಂಬುವವರಿಂದಲೇ ಉದ್ಘಾಟನೆ ಮಾಡಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಜರಂಗದಳದಲ್ಲಿ ಸಕ್ರಿಯರಾಗಿದ್ದ ಸುನೀಲ್ ಕುಮಾರ್‌ಗೆ ಭಾರತೀಯ ಜನತಾ ಪಕ್ಷವನ್ನು ಪರಿಚಯಿಸಿದ ಬೋಳ ಪ್ರಭಾಕರ್ ಕಾಮತ್‌ರಿಂದ ಕಚೇರಿ ಉದ್ಘಾಟನೆ ಮಾಡಿಸಿ ಆಶೀರ್ವಾದವನ್ನು ಪಡೆದಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾಗಿ ಅಧಿಕಾರವನ್ನು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಮೆಟ್ಟಿಲುಗಳಲ್ಲಿ ಕೂತು ಸ್ವೀಕರಿಸುವ ಮೂಲಕ ಸುನೀಲ್ ಕುಮಾರ್ ತಾನು ಡೈನಾಮಿಕ್ ಎಂದು ನಿರೂಪಿಸಿದ್ದರು. ಆ ಬಳಿಕ ಹಾರ ತುರಾಯಿಯನ್ನು ಹಾಕುವ ಬದಲು ಕನ್ನಡ ಪುಸ್ತಕವನ್ನು ನೀಡಿ, ರಾಜ್ಯದ ಗ್ರಂಥಾಲಯಗಳಿಗೆ ನೀಡುತ್ತೇನೆ ಅಂತಾ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದರು.
Recommended Video

ಕೊವೀಡ್ ನಿಯಮಗಳನ್ನು ಗಾಳಿಗೆ ತೂರಿದ್ದರು
ಆದರೆ, ನೂತನ ಸಚಿವರಾಗಿ ಪ್ರಮಾಣ ವಚನ ಮುಗಿಸಿ ಉಡುಪಿ ಜಿಲ್ಲೆಗೆ ಆಗಮಿಸಿದ್ದ ಸಚಿವ ಸುನೀಲ್ ಕುಮಾರ್, ಬರುತ್ತಲೇ ಕೊವೀಡ್ ನಿಯಮಗಳನ್ನು ಗಾಳಿಗೆ ತೂರಿದ್ದರು. ಉಡುಪಿ ಜಿಲ್ಲೆಯಲ್ಲಿ ಯಾವುದೇ ರಾಜಕೀಯ, ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅವಕಾಶ ಇಲ್ಲದೇ ಇದ್ದರೂ, ಸಚಿವ ಸುನೀಲ್ ಕುಮಾರ್ ಮಾತ್ರ ಜನ ಜಾತ್ರೆಯೇ ಮಾಡಿದ್ದರು.
ನೂತನ ಸಚಿವ ಸುನೀಲ್ ಕುಮಾರ್‌ಗೆ ಅಭಿನಂದನೆ ಸಲ್ಲಿಸುವ ನೆಪದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಸೇರಿದ್ದರು ಮತ್ತು ಬೆರಳಣಿಕೆಯ ಜನರಲ್ಲಿ ಮಾತ್ರ ಮಾಸ್ಕ್ ಕಂಡುಬಂದಿತ್ತು. ಉಡುಪಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ, ಸಚಿವರಿಗೆ ಮಾತ್ರ ಈ ನಿಯಮ ಮಾತ್ರ ಅನ್ವಯವಾಗುವುದೇ ಇಲ್ಲ ಎಂಬಂತಾಗಿತ್ತು.












Click it and Unblock the Notifications