ಪಡುಕೆರೆ ಹುಡುಗಿ, ನೇಪಾಳದ ಹುಡುಗನಿಗೆ ಫಿಶ್ ಮಿಲ್ ಪ್ರೇಮ, ಮದುವೆ
ಉಡುಪಿ, ಸೆಪ್ಟೆಂಬರ್ 22 : ಉಡುಪಿ ಜಿಲ್ಲೆಯ ಇವರಿಬ್ಬರ ಪ್ರೇಮ ವಿವಾಹ ಆದರ್ಶದಂತೆಯೂ ಮಾದರಿಯಂತೆಯೂ ಇದೆ. ಕೋಟ ಪಡುಕೆರೆಯ ದಲಿತ ಬತ್ತಾಡ ಸಮುದಾಯದ ಯುವತಿಯು ನೇಪಾಳಿ ಯುವಕನನ್ನು ಶುಕ್ರವಾರ ಮದುವೆ ಆಗಿದ್ದಾರೆ.
ಕೋಟ ಪಡುಕರೆಯ ದಿ.ಕಾಳ ಬತ್ತಾಡ ಮತ್ತು ರಾಧಾ ಅವರ ಎರಡನೇ ಮಗಳು ದೀಪಾ(21) ನೇಪಾಳಿ ಮೂಲದ ಮೂಲದ ಉಪೆನ್ ಡೈಮಾರ(23) ಅವರನ್ನು ಸರಳವಾದ ಸಮಾರಂಭದಲ್ಲಿ ಮದುವೆ ಆಗಿದ್ದಾರೆ.

ಮಣೂರು ರಾಜಲಕ್ಷ್ಮೀ ಸಭಾಭವನದಲ್ಲಿ ಶುಕ್ರವಾರ ನೇಪಾಳಿ ಮೂಲದ ಉಪೆನ್ ಮತ್ತು ಕರಾವಳಿಯ ದೀಪಾ ಮದುವೆ ಮುಹೂರ್ತ ನೆರವೇರಿತು. ಶಿಕ್ಷಕ, ಪತ್ರಕರ್ತ ಪಿ.ವಿ. ಆನಂದ್ ಗುಂಡ್ಮಿ ಮುಂದಾಳತ್ವದಲ್ಲಿ ನಡೆದ ಈ ಮದುವೆಗೆ ಹುಡುಗಿಯ ಸಂಬಂಧಿಕರು ಹಾಗೂ ಹುಡುಗನ ಕಡೆಯಿಂದ ನೇಪಾಳದಿಂದ ಬಂದಿದ್ದ ತಂಡವು ಶುಭ ಹಾರೈಸಿದರು.
ಅಂದಹಾಗೆ, 5 ವರ್ಷಗಳಿಂದ ಮಣೂರು ಪಡುಕರೆಯ ಗೋಯನ್ ಫಿಶ್ ಮಿಲ್‌ನಲ್ಲಿ ಕೆಲಸ ಮಾಡುತ್ತಿರುವ ಉಪೆನ್ ಪ್ರಾಮಾಣಿಕತೆ ಮತ್ತು ಶ್ರದ್ಧೆಯ ಮೂಲಕವೇ ಹೆಸರು ಪಡೆದಿದ್ದ. ಅದೇ ಫಿಶ್‌ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ದೀಪಾಗೆ ಆತನ ಜತೆಗೆ ಎರಡು ವರ್ಷಗಳ ಹಿಂದೆ ಪ್ರೇಮಾಂಕುರವಾಗಿತ್ತು.

"ನಾನು ಮತ್ತು ಉಪೆನ್ ಸುಮಾರು 3 ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಈ ವಿಚಾರವನ್ನು ನಾನು ನನ್ನ ಭಾವ ಪಿ.ವಿ.ಆನಂದ್ ಅವರ ಬಳಿ ತಿಳಿಸಿದಾಗ ಸಹಮತ ಸೂಚಿಸಿದ್ದರು. ಅಲ್ಲದೇ ಮದುವೆಯ ಜವಾಬ್ದಾರಿ ತೆಗೆದುಕೊಂಡು ಮಾತುಕತೆ ನಡೆಸುವ ಕುರಿತು ಭರವಸೆ ನೀಡಿದ್ದರು" ಎಂದಿದ್ದಾರೆ ದೀಪಾ.
"ಪ್ರೀತಿ ಮಾಡಿ, ಮದುವೆಯಾಗುವ ಸನ್ನಿವೇಶ ಎದುರಾದಾಗ ಕೆಲವರು ತಪ್ಪು ಮಾಡುತ್ತಿದ್ದಾರೆ. ಅಂತಹ ತಪ್ಪು ಮಾಡಲು ನನಗಿಷ್ಟವಿರಲಿಲ್ಲ. ಆದ್ದರಿಂದಲೇ ಹಿರಿಯರ ಸಮ್ಮುಖದಲ್ಲಿಯೇ ಉಪೆನ್ ಕೈ ಹಿಡಿಯಲು ಬಯಸಿದ್ದೆ. ಇಂದು ಅದು ಸಾಧ್ಯವಾಗಿದೆ" ಎಂದು ದೀಪಾ ಹೇಳಿದ್ದಾರೆ.












Click it and Unblock the Notifications