ನಾಗರ ಪಂಚಮಿ ಸಂಭ್ರಮ: ಕಾಪುವಿನಲ್ಲಿ ಜೀವಂತ ಹಾವಿಗೆ ಜಲಾಭಿಷೇಕ
ಉಡುಪಿ, ಆಗಸ್ಟ್ 21: ಇಂದು ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ನಾಗಪ್ಪನಿಗೆ ಹಾಲೆರೆದು ಪೂಜೆ ಸಲ್ಲಿಸುತ್ತಿದ್ದಾರೆ. ಹಿಂದೂ ಧರ್ಮದ ಪ್ರಕಾರ ನಾಗರಹಾವವನ್ನು ದೇವರು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನಾಗರ ಪಂಚಮಿಯ ದಿನ ನಾಗದೇವತೆಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.
ಇಂದು ಮುಂಜಾನೆಯಿಂದಲೇ ನಾಗರ ಪಂಚಮಿ ಹಬ್ಬದ ಪೂಜಾ ಕೈಕಾರ್ಯಗಳು ಆರಂಭವಾಗಿದ್ದು, ಭಕ್ತರು ಹುತ್ತಕ್ಕೆ ಹಾಲೇರೆಯುವುದು ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಉಡುಪಿಯಲ್ಲಿ ಜೀವಂತ ಹಾವಿಗೆ ನಾಗರ ಪಂಚಮಿ ಹಬ್ಬದ ಪೂಜೆ ಸಲ್ಲಿಸಲಾಗಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕು ಮಜೂರಿನಲ್ಲಿರುವ ಗೋವರ್ಧನ ಭಟ್ ಅವರ ಮನೆಯಲ್ಲಿಜೀವಂತ ಹಾವಿಗೆ ಜಲಾಭಿಷೇಕ ಮಾಡಿ ಪೂಜೆ ಸಲ್ಲಿಸಲಾಗಿದೆ.

ಮಜೂರಿನ ಗೋವರ್ಧನ ಭಟ್ ಅವರು ಸುಮಾರು 20 ವರ್ಷಗಳಿಂದ ನಾಗರ ಹಾವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಅಪಘಾತ ಸೇರಿದಂತೆ ಇತರ ಘಟನೆಯಿಂದ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿರುವ ನಾಗರ ಹಾವುಗಳನ್ನು ಗೋವರ್ಧನ ಭಟ್ ರಕ್ಷಿಸುತ್ತಾರೆ. ಗಾಯಗೊಂಡ ಹಾವುಗಳನ್ನು ಮನೆಗೆ ತರುವ ಅವರು ನಾಗರ ಹಾವಿಗೆ ಸಂಪೂರ್ಣ ಚಿಕಿತ್ಸೆ ನೀಡಿ ಕಾಡಿಗೆ ಬಿಡುತ್ತಾರೆ. ಕಾಪು ಭಾಗದಲ್ಲಿ ಗೋವರ್ಧನ ಭಟ್ ಅವರು ನಾಗರ ಹಾವು ವೈದ್ಯರೆಂದೇ ಖ್ಯಾತರಾಗಿದ್ದಾರೆ.
ಇಂದು ನಾಗರ ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಮನೆಯಲ್ಲಿದ್ದ ಸದ್ಯ ಗುಣಮುಖವಾದ ನಾಗರ ಹಾವಿಗೆ ಜಲಾಭಿಷೇಕ ಮಾಡಿ, ದೀಪ ಬೆಳಗುವ ಮೂಲಕ ಗೋವರ್ಧನ ಭಟ್ ಪೂಜೆ ಸಲ್ಲಿಸಿದ್ದಾರೆ. ಜೀವಂತ ಹಾವಿನ ಪೂಜೆ ನೋಡಿ ಭಕ್ತರು ಪುಳಕಿತರಾಗಿದ್ದಾರೆ.

ಇನ್ನು ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ನಾಗನ ವಿಗ್ರಹಕ್ಕೆ ಹಾಲು, ಸೀಯಾಳಾಭಿಷೇಕ ಮಾಡಿ ಪೂಜೆ ಸಲ್ಲಿಸಿದ್ದಾರೆ.












Click it and Unblock the Notifications