ಉಡುಪಿಯಲ್ಲಿ ಕೋಮುದ್ವೇಷ; ಕಾಪು ಹೊಸಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿಷೇಧ!?
ಉಡುಪಿ, ಮಾರ್ಚ್ 19: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಉಡುಪಿಯ ಹಿಜಾಬ್ ವಿವಾದ ಈಗ ಮತ್ತೊಂದು ಮಗ್ಗುಲು ಪಡೆದಿದೆ. ಉಡುಪಿಯಲ್ಲಿ ಹಿಜಾಬ್ ಹೋರಾಟದ ನಂತರ ಈಗ ಬಹಿಷ್ಕಾರ ಚಳವಳಿ ಆರಂಭವಾಗಿದೆ.
ಕರಾವಳಿ, ಮಲೆನಾಡು ಜಿಲ್ಲೆಯಲ್ಲಿ ಹಿಂದೂಪರ ಸಂಘಟನೆಗಳಿಂದ ವ್ಯಾಪಾರ ಬಹಿಷ್ಕಾರ ಚಳುವಳಿ ಮಾಡಲು ಕರೆ ನೀಡಿದೆ. 'ಉಡುಪಿಯ ಧಾರ್ಮಿಕ ಕೇಂದ್ರಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರ ಅವಕಾಶ ಕೊಡಬೇಡಿ', 'ಕೋರ್ಟ್ ತೀರ್ಪಿಗೆ ಬೆಲೆ ಕೊಡದವರ ಅವರ ವಿರುದ್ಧ ಹೋರಾಟ', 'ಒಂದು ದಿನ ಬಂದ್ ಮಾಡಿದ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚೋಣ' ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ಆರಂಭಿಸಿದ್ದಾರೆ.
ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಈ ಅಭಿಯಾನ ಆರಂಭವಾಗಿದ್ದು, ಉಡುಪಿ ಜಿಲ್ಲೆಯ ಕಾಪುವಿನ ಪ್ರಸಿದ್ಧ ಹೊಸ ಮಾರಿಗುಡಿ ಜಾತ್ರೆಯ ಮಾರಿಪೂಜೆಯಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡಬೇಡಿ ಎಂದು ಪತ್ರ ಮತ್ತು ಪೋಸ್ಟರ್‌ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಲಾಗಿದೆ. ಅಲ್ಲದೇ ಜಾತ್ರೆ ನಡೆಯುವ ಸ್ಥಳದಲ್ಲಿ ಈ ಬಗ್ಗೆ ಬ್ಯಾನರ್ ಕೂಡಾ ಅಳವಡಿಸಲಾಗಿದೆ.

ಕಾಪು ತಾಲೂಕಿನ ಇತಿಹಾಸ ಪ್ರಸಿದ್ಧ ಹೊಸ ಮಾರಿಗುಡಿಯಲ್ಲಿ ನಡೆಯುವ ಸುಗ್ಗಿ ಮಾರಿ ಪೂಜೆಯಲ್ಲಿ ಮುಸ್ಲಿಮರಿಗೆ ಅಂಗಡಿ ನೀಡದಿರಲು ಕಾಪು ಪುರಸಭೆಗೆ ಮನವಿ ಮಾಡಲಾಗಿದೆ ಮತ್ತು ಕಾಪು ತಾಲೂಕಿನ ಮೂರು ಮಾರಿಗುಡಿಯ ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ. ಹೊಸ ಮಾರಿಗುಡಿ ಮುಂಭಾಗ ಹಿಂದೂ ಕಾರ್ಯಕರ್ತರು ಜಮಾವಣೆಯಾಗಿದ್ದು, ಹಿಂದೂಯೇತರರಿಗೆ ಅಂಗಡಿ ಕೊಡದಿರಲು ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.
ಉಡುಪಿಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗುವ ಸುಗ್ಗಿ ಮಾರಿಪೂಜೆ ಇದಾಗಿದ್ದು, ಕೋಟ್ಯಂತರ ರೂಪಾಯಿ ವ್ಯವಹಾರ ಈ ಜಾತ್ರೆಯಲ್ಲಿ ನಡೆಯುತ್ತದೆ. ಹಣ್ಣುಕಾಯಿ, ಹೂವು, ಕೋಳಿ, ಕುರಿ, ವ್ಯಾಪಾರಕ್ಕೆ ಅನ್ಯಧರ್ಮೀಯರಿಗೆ ಅವಕಾಶ ನೀಡದಿರಲು ಕಾಪು ಹೊಸ ಮಾರಿಗುಡಿ ಆಡಳಿತ ಮಂಡಳಿ ನಿರ್ಧಾರ ಮಾಡಿದೆ.

ಕಾಪುವಿನ ಪ್ರಸಿದ್ಧ ಮೂರು ಮಾರಿಗುಡಿಗಳಲ್ಲಿ ನಡೆಯುವ 'ಸುಗ್ಗಿ ಮಾರಿ ಪೂಜೆ' ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಮರಿಗೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬೇಡಿ ಎಂದು ಹಿಂದೂ ಕಾರ್ಯಕರ್ತರು ಕಾಪು ಪಟ್ಟಣ ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ. ಮಾರ್ಚ್ 22 ಮತ್ತು ಮಾರ್ಚ್ 23ರಂದು ನಡೆಯಲಿರುವ ಈ ಕಾರ್ಯಕ್ರಮದ ಉತ್ಸವದಂದು ಅನ್ಯ ಸಮುದಾಯದವರು ಜಾತ್ರೆಯಲ್ಲಿ ತಮ್ಮ ಅಂಗಡಿ ಮುಚ್ಚಬೇಕು ಒಂದು ವೇಳೆ ಅಂಗಡಿ ತೆರೆಯಲು ಅವಕಾಶ ನೀಡಿದರೆ ಮುಂದಿನ ಪರಿಣಾಮಗಳಿಗೆ ನೀವೇ ಹೊಣೆಯಾಗುತ್ತೀರಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯ ಅಧಿಕಾರಿ ವೆಂಕಟೇಶ ನಾವಡ, "ಮುಸ್ಲಿಮರ ಅಂಗಡಿ/ ಮುಂಗಟ್ಟು ತೆರೆಯಲು ಅವಕಾಶ ನೀಡಬೇಡಿ ಎಂದು ನಮಗೆ ಪತ್ರ ಬಂದಿದೆ. ಆದರೆ ಭಾರತ ಜಾತ್ಯತೀತ ದೇಶವಾಗಿರುವುದರಿಂದ ಎಲ್ಲಾ ಸಮುದಾಯಗಳ ವ್ಯಾಪಾರಿಗಳು ಅಂಗಡಿಗಳನ್ನು ತೆರೆಯಬಹುದು. ನಾವು ಇನ್ನೂ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದೇವೆ,'' ಎಂದು ತಿಳಿಸಿದ್ದಾರೆ.












Click it and Unblock the Notifications