Udupi: ಬಿಜೆಪಿ ಮುಖಂಡ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮಿಲಿಟರಿ ಮದ್ಯ ಪತ್ತೆ
ಉಡುಪಿ, ಏಪ್ರಿಲ್ 11: ಉಡುಪಿ ಜಿಲ್ಲೆ ಬಿಜೆಪಿ ಯುವ ಮೋರ್ಚಾ ಮುಖಂಡೊಬ್ಬರ ಮನೆಯ ಮೇಲೆ ಜಿಲ್ಲಾ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವನನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಡಿಫೆನ್ಸ್ (ಮಿಲಿಟರಿ) ಮದ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಲೋಕಸಭಾ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು ಉಡುಪಿ ಜಿಲ್ಲೆ ಇವರುಗಳು ಮಾರ್ಗದರ್ಶನದಂತೆ ಖಚಿತ ಮಾಹಿತಿ ಮೇರೆಗೆ ಏಪ್ರಿಲ್ 8ರಂದು ರಾತ್ರಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಬ್ರಹ್ಮಾವರ ಇಂದಿರಾನಗರದಲ್ಲಿರುವ ರಮೇಶ ಪ್ರಭು ಎಂಬವರ ಮನೆ ಮೇಲೆ ಈ ಅಬಕಾರಿ ದಾಳಿ ನಡೆದಿದೆ. ರಮೇಶ್ ಪ್ರಭು ಅವರ ಪುತ್ರ ಅರ್ಜುನ್ ಪ್ರಭು ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾದ ಮುಖಂಡ ಎಂದು ತಿಳಿದು ಬಂದಿದೆ

ಮನೆಯಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿರುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ದಾಳಿ ನಡೆಸಿದಾಗ ಒಟ್ಟು 33.500 ಲೀಟರ್ ಡಿಫೆನ್ಸ್ ಮದ್ಯ ಪತ್ತೆಯಾಗಿದ್ದು, ಇದರ ಒಟ್ಟು ಮೌಲ್ಯ 1,55,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಪ್ರಕರಣ ಸಂಬಂಧ ರಮೇಶ್ ಪ್ರಭುವನ್ನು ಬಂಧಿಸಲಾಗಿದೆ. ಈ ಬಗ್ಗೆ ಉಡುಪಿ ಉಪವಿಭಾಗದ ಅಬಕಾರಿ ಉಪನಿರೀಕ್ಷಕಿ ಮಧುರಾ ಎನ್.ದಾಸ್ ಮೊಕದ್ದಮೆಯನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ಬೆಂಗಳೂರಿನಲ್ಲಿ 4 ಕೋಟಿಗೂ ಅಧಿಕ ನಗದು ಸೀಜ್
ಲೋಕಸಭಾ ಚುನಾವಣಾ ಸಮಯದಲ್ಲೇ ಚುನಾವಣಾ ಅಧಿಕಾರಿಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲೇ ಇಲ್ಲಿವರೆಗೂ 4 ಕೋಟಿಗೂ ಅಧಿಕ ನಗದು ವಶಕ್ಕೆ ಪಡೆದಿದ್ದಾರೆ ಎಂದ ವರದಿಯಾಗಿದೆ.
93640.935 ಲೀಟರ್ ಮದ್ಯ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ 6,72,77,420 ರೂಪಾಯಿ ಮೌಲ್ಯದ 103.564 ಕೆಜಿ ಮಾದಕ ದ್ರವ್ಯವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದು ಅಲ್ಲದೇ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದ್ದು, 37,50,000 ರೂಪಾಯಿ ಮೌಲ್ಯದ 18.409 ಕೆಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

1,09,34,877 ರೂಪಾಯಿ ಮೌಲ್ಯದ ಇತರೆ ವಸ್ತುಗಳು ಹಾಗೂ ಈ ಎಲ್ಲ ವಸ್ತುಗಳನ್ನು ಸಾಗಿಸುತ್ತಿದ್ದಂತಹ ಒಟ್ಟು 65 ವಾಹನಗಳನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ವಾಹನಗಳ ಮೌಲ್ಯ 1,52,41,560 ರೂಪಾಯಿ ಆಗಿದೆ. ಯಾವುದೇ ದಾಖಲೆ ಇಲ್ಲದ 18,28,49,790 ರೂಪಾಯಿ ಸೀಜ್ ಮಾಡಲಾಗಿದೆ. ಈವರೆಗೆ ನಗರ ವ್ಯಾಪ್ತಿಯಲ್ಲಿ ಒಟ್ಟು 18,36,14,569 ರೂಪಾಯಿ ಮೌಲ್ಯದ ವಸ್ತುಗಳನ್ನ ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.












Click it and Unblock the Notifications