ಜೈಲಲ್ಲಿದ್ದರೂ ಕಮ್ಮಿಯಾಗಿಲ್ಲ ದರ್ಶನ್ ಕ್ರೇಜ್; ರೀರಿಲೀಸ್ ಆಗ್ತಿದೆ ಬ್ಲಾಕ್‌ಬಸ್ಟರ್ ಸಿನಿಮಾ, ಟಿಕೆಟ್ ಆಗ್ಲೇ ಸೋಲ್ಡ್ ಔಟ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಸದ್ಯ ಜೈಲು ಪಾಲಾಗಿದ್ದರೂ, ಅವರ ಸಿನಿಮಾ ಕ್ರೇಜ್ ಮತ್ತು ಬಾಕ್ಸ್ ಆಫೀಸ್ ಸುಲ್ತಾನನ ಹವಾ ಮಾತ್ರ ಕಿಂಚಿತ್ತೂ ಕಮ್ಮಿಯಾಗಿಲ್ಲ. ನಟ ದರ್ಶನ್ ಕಣ್ಣೆದುರಿಗಿಲ್ಲದಿದ್ದರೂ ಅವರ ಹಳೇ ಸಿನಿಮಾಗಳ ಮರುಬಿಡುಗಡೆಗೆ ಸ್ಯಾಂಡಲ್‌ವುಡ್‌ನಲ್ಲಿ ಹಿಂದೆಂದೂ ಕಾಣದಂತಹ ಅಭೂತಪೂರ್ವ ರೆಸ್ಪಾನ್ಸ್ ಸಿಗುತ್ತಿದ್ದು, ಥಿಯೇಟರ್‌ಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಇದೀಗ ಅವರನ್ನು ದೊಡ್ಡ ಸ್ಟಾರ್ ಮಾಡಿದ್ದ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ ರೀರಿಲೀಸ್ ಆಗುತ್ತಿದೆ.
ನಟ ದರ್ಶನ್ ಅವರ ರೀ-ರಿಲೀಸ್ ಚಿತ್ರಗಳಿಗೆ ಅಭಿಮಾನಿಗಳಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ದರ್ಶನ್ ಜೈಲು ಸೇರಿದ ನಂತರವೂ ಅವರ ಸಿನಿಮಾ ಕ್ರೇಜ್ ಜೋರಾಗಿಯೇ ಮುಂದುವರಿದಿದೆ. ಇತ್ತೀಚೆಗಷ್ಟೇ 'ಶಾಸ್ತ್ರಿ', 'ನಮ್ಮ ಪ್ರೀತಿಯ ರಾಮು' ಹಾಗೂ 'ನವಗ್ರಹ' ಸಿನಿಮಾಗಳು ಮರುಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದವು.

ಇದೀಗ ಅದೇ ಹಾದಿಯಲ್ಲಿ ದರ್ಶನ್ ಅವರ ಕೆರಿಯರ್‌ನ ಬ್ಲಾಕ್‌ಬಸ್ಟರ್ ಸಿನಿಮಾ 'ಕಲಾಸಿಪಾಳ್ಯ' (Kalasipalya) ಈ ವಾರ ಚಿತ್ರಮಂದಿರಗಳಿಗೆ ಅಪ್ಪಳಿಸಲು ಸಿದ್ಧವಾಗಿದ್ದು, ಅಭಿಮಾನಿಗಳಲ್ಲಿ ಕ್ರೇಜ್ ಮುಗಿಲು ಮುಟ್ಟಿದೆ. ಮುಂದಿನ ಜೂನ್ 19ರ ಶುಕ್ರವಾರದಂದು ರಾಜ್ಯಾದ್ಯಂತ ಈ ಸಿನಿಮಾ ಭರ್ಜರಿಯಾಗಿ ರೀ-ರಿಲೀಸ್ ಆಗುತ್ತಿದ್ದು, ಬಿಡುಗಡೆಗೆ 4 ದಿನಗಳ ಮುಂಚಿತವಾಗಿಯೇ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿರುವುದಾಗಿ ತಿಳಿದುಬಂದಿದೆ.
ಬೆಳಗ್ಗೆ 6 ಗಂಟೆಗೆ ಫ್ಯಾನ್ಸ್ ಶೋ
ಸಾಮಾನ್ಯವಾಗಿ ಹೊಸದಾಗಿ ತೆರೆಗೆ ಬರುವ ದೊಡ್ಡ ಸ್ಟಾರ್‌ಗಳ ಸಿನಿಮಾಗಳಿಗೆ ಮುಂಜಾನೆ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಆದರೆ, 22 ವರ್ಷಗಳ ಹಳೆಯ ಚಿತ್ರವೊಂದರ ರೀ-ರಿಲೀಸ್‌ಗೆ ಬೆಳ್ಳಂಬೆಳಗ್ಗೆ ಶೋ ಕ್ರಿಯೇಟ್ ಆಗಿರುವುದು ಸ್ಯಾಂಡಲ್‌ವುಡ್‌ನಲ್ಲೇ ದಾಖಲೆ. ಜೂನ್ 19ರಂದು ಬೆಂಗಳೂರಿನ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರ, ಜೆಪಿ ನಗರದ ಸಿದ್ದೇಶ್ವರ ಹಾಗೂ ಕೆ.ಜಿ ರಸ್ತೆಯ ನರ್ತಕಿ ಥಿಯೇಟರ್‌ಗಳಲ್ಲಿ 'ಕಲಾಸಿಪಾಳ್ಯ' ಪ್ರದರ್ಶನಗೊಳ್ಳುವುದು ಗ್ಯಾರಂಟಿಯಾಗಿದೆ. ವಿಶೇಷವೆಂದರೆ, ಪ್ರಸನ್ನ ಚಿತ್ರಮಂದಿರದಲ್ಲಿ ಜೂನ್ 19ರಂದು ಬರೋಬ್ಬರಿ 6 ಪ್ರದರ್ಶನಗಳು ಇರಲಿದ್ದು, ಮುಂಜಾನೆ 6 ಗಂಟೆಯ ಶೋನ ಎಲ್ಲ ಟಿಕೆಟ್‌ಗಳು ಈಗಲೇ 'ಹೌಸ್‌ಫುಲ್' ಆಗಿವೆ. ಈ ಹಿಂದೆ 'ಮೆಜೆಸ್ಟಿಕ್' ಹಾಗೂ 'ನವಗ್ರಹ' ಚಿತ್ರಗಳು ಮರುಬಿಡುಗಡೆಯಾದಾಗಲೂ ಪ್ರಸನ್ನ ಥಿಯೇಟರ್‌ನಲ್ಲಿ ಇಂತಹದ್ದೇ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು.
#Kalasipalya Re Releasing on June 19,2026 ✨#dboss #dhanveerah pic.twitter.com/1INvmX7xEd
— ನಾನು ᴅʜᴀɴᴠᴇᴇʀᴀ ꜰᴀɴ ✪ (@NKurubagouda) June 15, 2026
ದರ್ಶನ್ ಬದುಕಿಗೆ ಬಿಗ್ ಬ್ರೇಕ್ ನೀಡಿದ್ದ 'ಕೆಂಚನ' ಕಥೆ
2004ರಲ್ಲಿ ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ದರ್ಶನ್ ಲೋಕಲ್ ಹೈದ 'ಕೆಂಚ'ನಾಗಿ ಅಬ್ಬರಿಸಿದ್ದರು. ಅಲ್ಲಿಯವರೆಗೆ ದರ್ಶನ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಏರಿಳಿತ ಕಾಣುತ್ತಿದ್ದವು. ಆದರೆ, 'ಕಲಾಸಿಪಾಳ್ಯ' ಕೊಟ್ಟ ಭರ್ಜರಿ ಯಶಸ್ಸು ದರ್ಶನ್ ಅವರ ಇಡೀ ಸಿನಿ ಜರ್ನಿಯನ್ನೇ ಬದಲಾಯಿಸಿತು. ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಹಾಗೂ ಸಾಧು ಕೋಕಿಲ ಅವರ ಕಾಮಿಡಿ ಜುಗಲ್‌ಬಂದಿ ಹೊಂದಿದ್ದ ಈ ಚಿತ್ರದ ಬಳಿಕ ದರ್ಶನ್ ಮಾಸ್ ನಾಯಕನಾಗಿ ಹೊರಹೊಮ್ಮಿದರು. ಇದರಿಂದ ಅವರ ಅಭಿಮಾನಿಗಳ ಬಳಗ ದುಪ್ಪಟ್ಟಾಯಿತು.
ಥಿಯೇಟರ್‌ಗಳಲ್ಲಿ ಬರೋಬ್ಬರಿ 35 ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿದ್ದ ಈ ಸಿನಿಮಾ, ಅಂದಿನ ದಿನಗಳಲ್ಲೇ ಸುಮಾರು 18ರಿಂದ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಇತಿಹಾಸ ನಿರ್ಮಿಸಿತ್ತು ಎಂದು ಸ್ವತಃ ನಿರ್ದೇಶಕ ಓಂಪ್ರಕಾಶ್ ರಾವ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಸಾಧು ಕೋಕಿಲ ಮತ್ತು ರಾಮ್‌ನಾರಾಯಣ್ ಜೋಡಿಯ ಮ್ಯೂಸಿಕ್‌ನಲ್ಲಿ ಮೂಡಿಬಂದಿದ್ದ ಚಿತ್ರದ ಎಲ್ಲ ಹಾಡುಗಳು ಇಂದಿಗೂ ಸೂಪರ್ ಹಿಟ್. ಇದೀಗ ಇಂತಹದ್ದೊಂದು ಮೈಲಿಗಲ್ಲು ಸಿನಿಮಾ ಮತ್ತೆ ಬೆಳ್ಳಿಪರದೆಗೆ ಮರಳುತ್ತಿರುವುದು ಡಿ-ಬಾಸ್ ಅಭಿಮಾನಿಗಳ ಸಂಭ್ರಮಕ್ಕೆ ಹೊಸ ಕಳೆ ತಂದಿದೆ.













Click it and Unblock the Notifications