ಉಡುಪಿಯಲ್ಲಿ ಝಗಮಗಿಸಿದ ವಿಶ್ವ ಸುಂದರಿ ಮಾನುಷಿ ಚಿಲ್ಲಾರ್
ಉಡುಪಿ, ಜುಲೈ 07 : ದೇಗುಲಗಳ ನಗರಿ ಉಡುಪಿಗೆ ವಿಶ್ವ ಸುಂದರಿ ಮಾನುಷಿ ಚಿಲ್ಲಾರ್ ಶನಿವಾರ ಭೇಟಿ ನೀಡಿ, ಸುರಿವ ಮಳೆಯಲ್ಲಿಯೂ ಅಭಿಮಾನಿಗಳ ನಡುವೆ ಝಗಮಗಿಸಿದರು.
ಮಲಬಾರ್ ಗೋಲ್ಡ್ ನ ನೂತನ ಮಳಿಗೆಯ ಉದ್ಘಾಟನೆಗಾಗಿ ಆಗಮಿಸಿದ ವಿಶ್ವ ಸುಂದರಿ ಮಾನುಷಿ ಚಿಲ್ಲಾರ್ ಶ್ವೇತ ವರ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾನುಷಿ, ಸದ್ಯಕ್ಕೆ ಯಾವುದೇ ಚಲನಚಿತ್ರಗಳಲ್ಲಿ ನಟಿಸುವ ಯೋಚನೆ ಇಲ್ಲ ಸುಮಾರು 140 ವಿವಿಧ ಸಮಾಜ ಸೇವಾ ಸಂಸ್ಥೆಗಳ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅವೆಲ್ಲಾ ಮುಗಿದ ಬಳಿಕ ಚಲನಚಿತ್ರ ನಟನೆಯ ಬಗ್ಗೆ ಗಮನ ಹರಿಸ್ತೇನೆ ಅಂತಾ ಹೇಳಿದರು.

ಇದೇ ಮೊದಲ ಬಾರಿಗೆ ಉಡುಪಿಗೆ ಬಂದಿದ್ದು, ಇಲ್ಲಿನ ಹಸಿರು, ತಂಪು ತಂಪಾದ ವಾತಾವರಣ ನೋಡಿ ಖುಷಿಯಾಗಿದೆ ಎಂದು ಉಡುಪಿಯ ಬಗ್ಗೆ ಮೆಚ್ಚುಗೆಯ ಮಾತಾಡಿದರು.
ವಿಶ್ವ ಸುಂದರಿಯನ್ನು ನೋಡೋದಿಕ್ಕೆ ಸುರಿವ ಮಳೆಯನ್ನೂ ಲೆಕ್ಕಿಸದೆ ಬಹಳಷ್ಟು ಜನ ಸೇರಿದ್ದರು. ಕೆಲವರು ಅವರ ಮಾತು ಕೇಳಲು ಬಂದಿದ್ದರೆ, ಕೆಲವರು ಆಟೋಗ್ರಾಫ್ ಹಾಕಿಸಿಕೊಂಡು ಖುಷಿಪಟ್ಟರು. ಕೆಲವರು ಅವರ ಕೋರೈಸುವ ಸೌಂದರ್ಯಕ್ಕೆ ಮರುಳಾಗಿ ಆಟೋಗ್ರಾಫ್ ಹಾಕಿಸಿಕೊಳ್ಳುವುದನ್ನೂ ಮರೆತರು.












Click it and Unblock the Notifications