ನಟ ಪ್ರಕಾಶ್ ರೈ ವಿರುದ್ಧ ಕಿಡಿಕಾರಿದ ಕೋಟಾ ಶ್ರೀನಿವಾಸ ಪೂಜಾರಿ
ಉಡುಪಿ, ನವೆಂಬರ್. 06: ನಟ ಪ್ರಕಾಶ್ ರೈ ಅವರು ಗೌರಿಯ ಮಾನಸಿಕತೆಯಿಂದ ಇನ್ನು ಹೊರಬಂದಿಲ್ಲ. ಆ ಕಾರಣಕ್ಕೆ ಸ್ವಾಮಿ ಅಯ್ಯಪ್ಪ ದೇವರೇ ಅಲ್ಲ ಎಂದು ಪ್ರಕಾಶ್ ರೈ ಹೇಳಿಕೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅಯ್ಯಪ್ಪ ದೇವರೇ ಅಲ್ಲ ಎಂದು ಹೇಳಿಕೆ ನೀಡಿರುವ ನಟ ಪ್ರಕಾಶ ರೈ ವಿರುದ್ಧ ವಾಗ್ದಾಳಿ ನಡೆಸಿದರು.
ಗೌರಿ ಲಂಕೇಶ್ ಅವರ ಹತ್ಯೆ ನಮಗೆಲ್ಲಾ ನೋವು ತಂದಿದೆ ನಿಜ. ಯಾವ ಹಿಂಸೆಯನ್ನೂ ಸಹಿಸಲು ನಮಗೆ ಸಾಧ್ಯವಿಲ್ಲ. ಆದರೆ ಗೌರಿ ಅವರ ನಿಲುವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಗೌರಿ ಲಂಕೇಶ್ ಹಿಂದೂ ಧರ್ಮ ಧರ್ಮವೇ ಅಲ್ಲ ಅಂದಿದ್ದರು. ಹಿಂದೂ ದೇವರುಗಳು ದೇವರೇ ಅಲ್ಲ ಅಂದಿದ್ದರು . ಗೌರಿಯ ಆ ಮಾನಸಿಕತೆಯಿಂದ ಪ್ರಕಾಶ್ ರೈ ಹೊರ ಬಂದಿಲ್ಲ.

ಬುದ್ಧಿಜೀವಿಗಳು, ನಗರ ನಕ್ಸಲರ ಮಾತಿಗೆ ಅವರೇ ಸ್ಪಷ್ಟನೆ ಕೊಡಬೇಕು. ಇತರ ಧರ್ಮಗಳ ವಿಚಾರವನ್ನು ಆಯಾ ಧರ್ಮಗಳು ನಿರ್ಧರಿಸುತ್ತದೆ. ಹಿಂದೂ ಧರ್ಮದ ವಿಚಾರದಲ್ಲಿ ನ್ಯಾಯಾಲಯ, ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಟೀಕಿಸಿದ ಕೋಟಾ ಶ್ರೀನಿವಾಸ ಪೂಜಾರಿ ಅವರು ಶಬರಿಮಲೆ ವಿಚಾರದಲ್ಲಿ ಧಾರ್ಮಿಕ ನಂಬಿಕೆಗೆ ಬೆಲೆ ಕೊಡಬೇಕು.
ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ ನಂತರವೂ ಪಿಣರಾಯಿ ವಿಜಯನ್ ವರ್ತನೆ ಸರಿಯಾಗಿಲ್ಲ. ನಂಬಿಕೆಯ ಮೇಲೆ ಬಲಾತ್ಕಾರ, ದಬ್ಬಾಳಿಕೆ ಸಹಿಸಲು ಸಾಧ್ಯವಿಲ್ಲ ಎಂದು ಶ್ರೀನಿವಾಸ ಪೂಜಾರಿ ತಿಳಿಸಿದರು.












Click it and Unblock the Notifications