ಕೊಲ್ಲೂರು: ಸಲಾಮ್ ಮಂಗಳಾರತಿ ಹೆಸರು ಬದಲಾವಣೆಗೆ ಸರ್ಕಾರ ನಿರ್ಧಾರ, ಆಕ್ರೋಶ
ಕೊಲ್ಲೂರು, ನವೆಂಬರ್, 03: ಸಂಘಪರಿವಾರದ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಐತಿಹಾಸಿಕ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಸಾಂಪ್ರದಾಯಿಕ ಸಲಾಮ್ ಮಂಗಳಾರತಿ ಪೂಜೆಯ ಹೆಸರು ಬದಲಾಯಿಸಲು ಸರ್ಕಾರ ಮುಂದಾಗಿದೆ. ಈ ಪೂಜೆಯನ್ನು "ದೀವಟಿಗೆ ಮಂಗಳಾರತಿ" ಪೂಜೆ ಎಂದು ಮರು ನಾಮಕರಣ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಮೈಸೂರು ಸಂಸ್ಥಾನದ ರಾಜನಾದ ಟಿಪ್ಪುಸುಲ್ತಾನ್ 1763ರಲ್ಲಿ ಐತಿಹಾಸಿಕ ಕೊಲ್ಲೂರುಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದರು. ಆಗಿನಿಂದ ಸಂರಕ್ಷಣೆ ಒದಗಿಸಿದ ನೆನಪಿಗಾಗಿ ಈ ದೇವಸ್ಥಾನದಲ್ಲಿ ಪ್ರತಿ ದಿನ ಸಂಜೆ ಸಲಾಮ್ ಮಂಗಳಾರತಿ ನಡೆಸಿ ಟಿಪ್ಪುಗೆ ಗೌರವ ಸಲ್ಲಿಸಲಾಗುತ್ತಿತ್ತು. ಸದ್ಯ ಸಂಘಪರಿವಾರದ ಒತ್ತಡಕ್ಕೆ ಮಣಿದು ಸಲಾಮ್ ಮಂಗಳಾರತಿ ಹೆಸರನ್ನು ಬದಲಿಸಲು ಸರ್ಕಾರ ಮುಂದಾಗಿದೆ. ಸರ್ಕಾರದ ಈ ನಿರ್ಧಾರದಿಂದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಬಿಜೆಪಿ ಬೆಂಬಲಿತ ಬಲಪಂಥೀಯ ಸಂಘಟನೆಗಳ ಒತ್ತಡಕ್ಕೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಸಲಾಂ ಮಂಗಳಾರತಿ ಪೂಜೆಯ ಹೆಸರನ್ನು ಬದಲಾಯಿಸಲು ಒಪ್ಪಿಕೊಂಡಿದೆ. ಸುಮಾರು 250 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಮಂಗಳಾರತಿ ಪೂಜೆಯನ್ನು 'ದೀವಟಿಗೆ ಮಂಗಳಾರತಿ ಪೂಜೆ' ಎಂದು ಮರುನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ.

ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ
ಇದೀಗ ಸರ್ಕಾದ ನಿರ್ಧಾರಕ್ಕೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಟಿಪ್ಪುಸುಲ್ತಾನ್ 1763ರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ನೆನಪಿಗಾಗಿ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಇರುವ ಮೂಕಾಂಬಿಕೆ ದೇವಸ್ಥಾನದಲ್ಲಿ ಸಲಾಂ ಮಂಗಳಾರತಿ ಪೂಜೆಯ ಆಚರಣೆಯ ಸಂಪ್ರದಾಯವನ್ನು ಪ್ರಾರಂಭಿಸಲಾಗಿತ್ತು.

ಸಲಾಮ್ ಮಂಗಳಾರತಿ ಹೆಸರು ಬಂದಿದ್ದು ಹೇಗೆ?
ಕೊಲ್ಲೂರು ಮೂಕಾಂಬಿಕೆ ದೇಗುಲದಲ್ಲಿ ನಡೆಯುವ ಸಲಾಮ್ ಮಂಗಳಾರತಿ ಎಂಬ ಆರತಿಯ ಹೆಸರು ತೆಗೆಯುವಂತೆ ಕೆಲವು ದಿನಗಳ ಹಿಂದೆಯಷ್ಟೇ ಒತ್ತಾಯಗಳು ಕೇಳಿಬಂದಿದ್ದವು. ಈ ಬಗ್ಗೆ ದೇಗುಲದ ಅಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿತ್ತು. ಟಿಪ್ಪು ಸುಲ್ತಾನ್ ನೆನಪಿಗಾಗಿ ನಡೆಯುವ ಮಂಗಳಾರತಿಯ ಸಲಾಂ ಮಂಗಳಾರತಿ ಎಂಬ ಹೆಸರನ್ನು ತೆಗೆಯಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿತ್ತು. ಟಿಪ್ಪು ಸಾವಿರಾರು ಹಿಂದೂಗಳ ನರಮೇಧ ನಡೆಸಿದ್ದಾರೆ. ಟಿಪ್ಪು ನೂರಾರು ದೇವಸ್ಥಾನಗಳು ಧ್ವಂಸ ಮಾಡಿದ್ದಾರೆ. ಅವರ ಹೆಸರಿನಲ್ಲಿ ಮಂಗಳಾರತಿ ನಡೆಸುವುದು ಸರಿಯಲ್ಲ. ಇದರಿಂದ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಆಗುತ್ತದೆ. ಸಲಾಂ ಹೆಸರಿನಲ್ಲಿ ಮಂಗಳಾರತಿ ಮಾಡುವುದು ಗುಲಾಮಗಿರಿಯ ಸಂಕೇತ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ವಿಶ್ವ ಹಿಂದೂ ಪರಿಷತ್‌ನಿಂದ ಮನವಿ
ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಕ್ರಮ ಕೈಗೊಳ್ಳಬೇಕು. ಸಲಾಂ ಹೆಸರನ್ನು ತೆಗೆದು ದೇವರ ಹೆಸರಿನಲ್ಲಿ ಆರತಿ ಮಾಡಿ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಕಾರ್ಯನಿರ್ವಹಣಾಧಿಕಾರಿ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಗೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿತ್ತು. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ದೇವಾಲಯದಲ್ಲಿ ಜಾತ್ರಾ ಮಹೋತ್ಸವ ವೇಳೆ ಮಾಡಲಾಗುವ ಆರತಿಯ ಹೆಸರು ಬದಲಿಸುವಂತೆ ಆಗ್ರಹ ಕೇಳಿಬಂದಿತ್ತು.

ಮುಸ್ಲಿಂ ವ್ಯಾಪಾರಿಗಳ ಜೊತೆ ಚರ್ಚೆ
ಕೊಲ್ಲೂರು ಜಾತ್ರೆಯಲ್ಲಿ ಮುಸ್ಲಿಮರಿಗೆ ಅವಕಾಶ ನೀಡಬೇಡಿ ಎಂದು ಕೊಲ್ಲೂರು ಪಂಚಾಯತಿಗೆ ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿತ್ತು. ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಕೊಲ್ಲೂರು ದೇವಾಲಯದ ವ್ಯವಸ್ಥಾಪನಾ ಸಮಿತಿಗೂ ಮನವಿ ಮಾಡಿದ್ದರು. ಬಳಿಕ ಮುಸ್ಲಿಂ ವ್ಯಾಪಾರಿಗಳ ಜೊತೆ ಪಂಚಾಯಿತಿ ಅಧ್ಯಕ್ಷ ಚರ್ಚೆ ನಡೆಸಿದ್ದರು. ನಂತರ ದೇವಾಲಯದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ನಿರ್ಧರಿಸಲಾಗಿತ್ತು. ಸಲಾಂ ಪೂಜೆಯ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ದೇವಾಲಯದಲ್ಲಿ ಮನವಿ ಮಾಡಿದ್ದು, ಸಂಘಪರಿವಾರದ ಒತ್ತಡದ ಹಿನ್ನೆಲೆಯಲ್ಲಿ "ಸಲಾಮ್ ಮಂಗಳಾರತಿ" ಪೂಜೆಯ ಹೆಸರು ಬದಲಾಯಿಸಲು ಸರ್ಕಾರ ಮುಂದಾಗಿದೆ.












Click it and Unblock the Notifications