ಆಗಸ್ಟ್ 30ರ ವರೆಗೆ ರಾಜ್ಯದಲ್ಲಿನ ಈ ಹೆದ್ದಾರಿ ಬಂದ್
ರಾಜ್ಯದಲ್ಲಿ ಮುಂಗಾರು ಚುರುಕು ಪಡೆದಿದ್ದು, ಹಲವು ಜಿಲ್ಲೆಗಳಲ್ಲಿ ರಣಭೀಕರ ಮಳೆ ಮುಂದುವರೆದಿದೆ. ಪರಿಣಾಮ ಅವಾಂತರಗಳೇ ಸಂಭವಿಸಿದ್ದು, ಕೆಲವೆಡೆ ಹೆದ್ದಾರಿ ಬಂದ್ ಕೂಡ ಆಗಿವೆ. ಹಾಗೆಯೇ ಇದೀಗ ಈ ಭಾಗದ ಹೆದ್ದಾರಿಯಲ್ಲಿ ಆಗಸ್ಟ್ 30ರ ವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಹಾಗಾದ್ರೆ, ಎಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಳೆಗಾಲ ಬಂತೆಂದರೆ ಸಾಕು ಕೆಲ ಭಾಗಗಳಲ್ಲಿ ಇದ್ದಿದ್ದೇ ರಗಳೆ ಇನ್ನುವಂತೆ ರಸ್ತೆಗೆ ಮಣ್ಣು ಸುರಿದು ಸಂಚಾರ ಬಂದ್ ಆಗುತ್ತಲಿರುತ್ತದೆ. ಹಾಗೆಯೆ ಸಿದ್ಧಾಪುರ- ಹೆಬ್ರಿ ರಾಜ್ಯ ಹೆದ್ದಾರಿ 296ರ ಮಾರ್ಗದಲ್ಲಿ ಜುಲೈ 30ರ ವರೆಗೆ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಇದೀಗ ಇದನ್ನು ಆಗಸ್ಟ್ 30ರವರೆಗೆ ವಿಸ್ತರಣೆ ಮಾಡಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.ಆದೇಶ ಹೊರಡಿಸಿದ್ದಾರೆ.

ವಿಸ್ತರಣೆ ಯಾಕೆ?: ಭಾರೀ ಮಳೆ ಸುರಿದ ಪರಿಣಾಮದಿಂದ ಹಾನಿಯಾದ ರಸ್ತೆ ಹಾಗೂ ಮೋರಿಯನ್ನು ರಕ್ಷಣಾ ತಡೆಗೋಡೆಯೊಂದಿಗೆ ಪುನರ್ ನಿರ್ಮಾಣ ಮಾಡುವ ಕಾಮಗಾರಿ ಕೈಗೊಳ್ಳಲಾಗಿತ್ತು. ಕಾಮಗಾರಿ ಮುಗಿದಿದ್ದರೂ ಸದ್ಯ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಪ್ರೋಚ್ ರಸ್ತೆ ಕಾಮಗಾರಿ ಕೈಗೊಳ್ಳಲು ಸಾಧ್ಯ ಆಗಿಲ್ಲ. ಆದ್ದರಿಂದ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧವನ್ನ ಆಗಸ್ಟ್ 30ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಪರ್ಯಾಯ ಮಾರ್ಗಗಳ ವಿವರ: ಇನ್ನು ಈ ಮಾರ್ಗದಲ್ಲಿ ಸಂಚಾರ ಮಾಡುವ ವಾಹನಗಳು ಪರ್ಯಾಯ ಮಾರ್ಗದ ರಸ್ತೆ ಮಾಡಿಮೂರಕೈ- ಮೀನುಗದ್ದೆ- ಬೇಳಂಜೆ- ಕುಚ್ಚೂರು- ಹೆಬ್ರಿ ಮೂಲಕ ಸಂಚಾರ ಮಾಡುವಂತೆ ಸೂಚನೆ ನೀಡಲಾಗಿದೆ. ಹೀಗೆ ಯಾವುದೇ ದಾರಿ ಇಲ್ಲದೆ ಈ ಮಾರ್ಗದಲ್ಲಿ ಸಂಚರಿಸುವಂತೆ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಬಂದ್: ಮತ್ತೊಂದೆಡೆ ಇತ್ತೀಚೆಗಷ್ಟೇ ಗುಡ್ಡ ಕುಸಿದ ಪರಿಣಾಮ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಬಳಿಯ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ಬಂದ್ ಮಾಡಲಾಗಿದೆ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತ ಆಗಿದೆ.
ಮಳೆಗಾಲ ಬಂತೆಂದರೆ ಸಾಕು ಇಲ್ಲಿ ಈ ಗೋಳು ಇದ್ದಿದ್ದೇ ಎನ್ನುವಂತಾಗಿದೆ. ಇನ್ನು ಅಧಿಕಾರಿಗಳ ನಿರ್ಲಕ್ಷದಿಂದ ಹೆದ್ದಾರಿಗೆ ಮಣ್ಣು ಬೀಳುತ್ತಿದೆ. ಆದರೂ, ಯಾವುದೇ ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಇಲ್ಲಿ ಸ್ಥಳೀಯರು ಹಾಗೂ ಈ ಭಾಗದಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು ಆಕ್ರೋಶ ಹೊರಹಾಕುತ್ತಿದ್ದಾರೆ.
ತಡೆಗೋಡೆ ಕುಸಿತ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ-275 ತಡೆಗೋಡೆ ಬಿರುಕು ಬಿಟ್ಟಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ವಾಹನಗಳನ್ನು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಇದೇ ಹೆದ್ದಾರಿಯಲ್ಲಿ 2018ರಲ್ಲಿ ಭಾರೀ ಭೂಕುಸಿತದಿಂದ ವಾಹನಗಳ ಸಂಚಾರವೇ ಸ್ಥಗಿತ ಆಗಿತ್ತು. ನಂತರ ನಾಲ್ಕೈದು ವರ್ಷ ಕಾಮಗಾರಿ ಮಾಡಿ 3,00,00,000 ರೂಪಾಯಿ ವೆಚ್ಚದಲ್ಲಿ ಬೃಹತ್ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿತ್ತು.
ಆದರೆ, ಈ ತಡೆಗೋಡೆ ನಿರ್ಮಾಣ ಆಗಿ ಒಂದು ಮಳೆಗಾಲ ಕಳೆಯುವುದರೊಳಗೆ ಬಿರುಕು ಬಿಟ್ಟಿದ್ದು, ಯಾವಾಗ ಬೇಕಾದರೂ ಕುಸಿಯುವಂತಹ ಭೀತಿ ಉಂಟಾಗಿದೆ. ಸುಮಾರು 4 ಹಂತಗಳಲ್ಲಿ 80 ಮೀಟರ್ ಎತ್ತರದಲ್ಲಿ ಈ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಆದರೂ, ಮಳೆ ನೀರು ಮತ್ತು ಮಣ್ಣಿನ ಅತೀಯಾದ ಒತ್ತಡದಿಂದ ಬಿರುಕು ಬಿಟ್ಟಿದೆ. ಸದ್ಯ ಇದೀಗ ಹೆದ್ದಾರಿಗೆ ಯಾವುದೇ ಅಪಾಯ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications