ಉಡುಪಿಯಲ್ಲಿ ಪೀಠಾಧಿಪತಿಗಳೇ ನಾಚಿಸುವಂತೆ ಶ್ರೀರಾಮುಲು 'ಸ್ವಾಮೀಜಿ' ಗೆಟಪ್
ಉಡುಪಿ, ಸೆ 28: ಅಷ್ಟಮಠಗಳ ಪೀಠಾಧಿಪತಿಗಳಿಂದ ಪೂಜಿಸಲ್ಪಡುವ ಉಡುಪಿ ಶ್ರೀಕೃಷ್ಣನ ನಾಡಿನಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಫುಲ್ ಸ್ವಾಮೀಜಿ ಗೆಟಪ್ ನಲ್ಲಿ ದೇವರ ದರ್ಶನ ಪಡೆದಿದ್ದಾರೆ.
ಶುಕ್ರವಾರ (ಸೆ 27) ರಾತ್ರಿ ನಗರಕ್ಕೆ ಆಗಮಿಸಿದ್ದ ಶ್ರೀರಾಮುಲು, ಜಿಲ್ಲಾ ಆಸ್ಪತ್ರೆಯ ಕೊಠಡಿಯಲ್ಲೇ ತಂಗಿದ್ದರು. ಶನಿವಾರ ಬೆಳ್ಳಂಬೆಳಗ್ಗೆನೇ ಕೃಷ್ಣಮುಖ್ಯಪ್ರಾಣನ ಗುಡಿಗೆ ತೆರಳಿದ್ದರು.
" ಶ್ರೀಕೃಷ್ಣನ ನಾಡು ಉಡುಪಿಗೆ ಆಗಮಿಸಿ ಅಜ್ಜರಕಾಡುವಿನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದೆ. ಸ್ಥಳೀಯ ಶಾಸಕರು ಕೂಡ ಜತೆಗಿದ್ದರು. ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಜತೆ ಸಮಾಲೋಚಿಸಿದ್ದಲ್ಲದೆ, ರೋಗಿಗಳು ಮತ್ತು ಅವರ ಬಂಧುಗಳ ಅಹವಾಲುಗಳನ್ನೂ ಆಲಿಸಿದೆ" ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

" ಆಸ್ಪತ್ರೆಗೆ ಬರುವ ರೋಗಿಗಳ ಸಮಸ್ಯೆಗಳನ್ನು ಆಲಿಸಿದಾಗ, ಇಂಥವರ ಸೇವೆಗೆ ಸಿಕ್ಕಿದ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಅವರಿಗೆ ಸರಿಯಾದ ಚಿಕಿತ್ಸೆ ಸಿಗುವಂತೆ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಬೇಕು ಎಂಬ ದೃಢ ನಿಶ್ಚಯಕ್ಕೆ ಬಂದಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬಯಸುತ್ತೇನೆ" ಎಂದು ರಾಮುಲು ಟ್ವಿಟ್ಟರ್ ನಲ್ಲಿ ಆಗ್ರಹಿಸಿದ್ದರು.
ಕೃಷ್ಣಮಠದ ಹೊರಾಂಗಣದಲ್ಲಿ ಮಹಾಲಯ ಅಮವಾಸ್ಯೆಯ ಪ್ರಯುಕ್ತ ಹಿರಿಯರಿಗೆ ಶ್ರೀರಾಮುಲು ಪಿಂಡಪ್ರಧಾನವನ್ನೂ ಮಾಡಿದರು. ಎರಡೆರಡು ಬಾರಿ ಕೃಷ್ಣನ ದರ್ಶನವನ್ನು ರಾಮುಲು ಪಡೆದಿದ್ದರು. ಇದಲ್ಲದೇ, ಮತ್ತೊಮ್ಮೆ ದೇವರ ದರ್ಶನ ಪಡೆದು, ಪರ್ಯಾಯ ಪಲಿಮಾರು ಶ್ರೀಗಳನ್ನು ಭೇಟಿಯಾಗುವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದಾರೆ.

"ಉಡುಪಿ ಜಿಲ್ಲೆ ರಚನೆಯಾಗಿ 22 ವರ್ಷಗಳಾಗಿವೆ. 2009 ರಲ್ಲಿ ತಾವು ಆರೋಗ್ಯ ಸಚಿವರಾಗಿದ್ದಾಗಲೇ ಅಜ್ಜರಕಾಡು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಶಿಫಾರಸು ಮಾಡಿದ್ದೆ. ಆದರೆ ಆಗ ಆಗಿರಲಿಲ್ಲ. ಈ ಬಾರಿ ಇಲ್ಲಿರುವ ಬೆಡ್ ಗಳನ್ನು 250ಕ್ಕೆ ಏರಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವೆ" ಎಂದು ಶ್ರೀರಾಮುಲು ಭರವಸೆ ನೀಡಿದ್ದಾರೆ.
" ವೈದ್ಯರ ಕೊರತೆ ಇರುವ ಕಡೆ ವೈದ್ಯರ ನೇಮಕಾತಿಗೆ ಈಗಾಗಲೇ ಕ್ರಮ ಕೈಗೊಂಡಿದ್ದು, ನೇರ ನೇಮಕಾತಿಗೆ ಡಿಎಸ್ ಓ ಗಳಿಗೆ ಅಧಿಕಾರ ನೀಡಲಾಗಿದೆ. ತಜ್ಞ ವೈದ್ಯರ ನೇಮಕಾತಿಗೂ ಕಾರ್ಯಯೋಜನೆ ಸಿದ್ಧಗೊಳಿಸಲಾಗಿದೆ ಎಂದು ಶ್ರೀರಾಮುಲು ಶುಕ್ರವಾರ ಹೇಳಿದ್ದರು.












Click it and Unblock the Notifications