ಲೈಂಗಿಕ ದೌರ್ಜನ್ಯ ಆರೋಪ: ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿಗೆ 15 ದಿನಗಳ ನ್ಯಾಯಾಂಗ ಬಂಧನ
ಉಡುಪಿ, ಡಿಸೆಂಬರ್ 4: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿಸಲಾಗಿರುವ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿಗೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಡಿಸೆಂಬರ್ 03 ರಂದು ಚಂದ್ರ ಕೆ. ಹೆಮ್ಮಾಡಿ ಅವರನ್ನು ಸಂಜೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ನ್ಯಾಯಾಧೀಶರು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.
ಬಾಲಕರನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಚಂದ್ರ ಕೆ.ಹೆಮ್ಮಾಡಿ ಮೇಲಿದೆ. ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾಗುತ್ತಿದ್ದಂತೆ ಚಂದ್ರ ಕೆ. ಹೆಮ್ಮಾಡಿ ವಿರುದ್ಧ ಈಗ ಕೆಲ ಬೆಚ್ಚಿ ಬೀಳಿಸುವ ಸಂಗತಿಗಳು ಬೆಳಕಿಗೆ ಬರುತ್ತಿವೆ.
ಬಂಧಿತ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ವಿರುದ್ಧ ಈ ವರೆಗೆ ಪೋಕ್ಸೊ ಕಾಯ್ದೆಯಡಿ 21 ಪ್ರಕರಣಗಳು ದಾಖಲಾಗಿವೆ. ಬೈಂದೂರು ಠಾಣೆಯಲ್ಲಿ 16 , ಗಂಗೊಳ್ಳಿಯಲ್ಲಿ 3 , ಕೊಲ್ಲೂರು ಮತ್ತು ಕುಂದಾಪುರ ಗ್ರಾಮಾಂತರದಲ್ಲಿ ತಲಾ 1 ಸಹಿತ ಒಟ್ಟು 21 ಪ್ರಕರಣಗಳು ದಾಖಲಾಗಿವೆ.

ಕುಂದಾಪುರ ತಾಲೂಕಿನ ಹೆಮ್ಮಾಡಿಯ ಚಂದ್ರ ಕೆ.ಹೆಮ್ಮಾಡಿ(40) ರಾಜ್ಯಮಟ್ಟದ ಪತ್ರಿಕೆಯ ಬಿಡಿ ವರದಿಗಾರನಾಗಿದ್ದು, ಶಾಲಾ ಸಮಾರಂಭಗಳ ವರದಿ ಮಾಡಲು ತೆರಳುತ್ತಿದ್ದ ಸಂದರ್ಭ ಬಾಲಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಬಾಲಕರ ಜತೆ ಆತ್ಮೀಯವಾಗಿ ಬೆರೆತು, ವಿಶ್ವಾಸ ಗಳಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ನಂತರ ಮಕ್ಕಳ ಅಭಿರುಚಿಯನ್ನು ಗುರುತಿಸಿ ಗಾಯನ, ಫೋಟೋಗ್ರಾಫಿ , ನೃತ್ಯ ಹೇಳಿಕೊಡುವುದಾಗಿ ಸೆಳೆಯುತ್ತಿದ್ದ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸೆಕ್ಸ್ ಬಗ್ಗೆ ಮಾತನಾಡುತ್ತಿದ್ದ. ಪೋರ್ನ್ ವಿಡಿಯೋ ಹಾಗೂ ಫೋಟೊಗಳನ್ನು ತೋರಿಸಿ ಪ್ರಚೋದಿಸಿ, ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಬಳಿಕ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಕಳೆದ 6ವರ್ಷಗಳಿಂದ ಈತ ಕೃತ್ಯಗಳನ್ನು ಎಸಗುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಕೆಲ ದಿನಗಳ ಹಿಂದೆ ಬೈಂದೂರಿನಲ್ಲಿ ಬಾಲಕನೊಬ್ಬ ಮಾನಸಿಕ ಆಘಾತಕ್ಕೊಳಗಾಗಿದ್ದ. ಪೋಷಕರು ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಲೈಂಗಿಕ ದೌರ್ಜನ್ಯ ನಡೆದಿರುವ ವಿಚಾರ ಬಯಲಾಗಿತ್ತು.












Click it and Unblock the Notifications