ನಾನು ಮೌನವಾಗಿಲ್ಲ; ನಮ್ಮ ಕ್ರಮಗಳೇ ಮಾತನಾಡುತ್ತಿವೆ: ಸಿಎಂ ಬಸವರಾಜ ಬೊಮ್ಮಾಯಿ
ಉಡುಪಿ, ಏ.11: 'ನಾನು ಮೌನವಾಗಿಲ್ಲ. ನಾವು ಮಾತನಾಡಬಾರದು ಸಹ. ನಮ್ಮ ಕ್ರಮಗಳೇ ಮಾತನಾಡುತ್ತಿವೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಉಡುಪಿ ಹೆಲಿಪ್ಯಾಡ್‌ಗೆ ಸೋಮವಾರ ಬಂದಿಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಗಳಿಗೆ ಈ ರೀತಿ ಮಾತನಾಡಿದರು.
'ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಮುಖ್ಯಮಂತ್ರಿಗಳು ಮೌನವಾಗಿದ್ದಾರೆ' ಎಂದು ವಿಪಕ್ಷಗಳು ಆರೋಪಿಸಿಸುತ್ತಿವೆ ಎಂದು ಕೇಳಲಾದ ಪ್ರಶ್ನೆಗೆ, 'ನನ್ನ ಕ್ರಮಗಳೇ ಮಾತನಾಡುತ್ತಿವೆ. ನಾವು ಮಾತನಾಡಬಾರದು. ನಮ್ಮ ಕೆಲಸಗಳು ಮಾತನಾಡಬೇಕು. ಯಾವ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳ ಬೇಕು, ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ನಮಗೆ ತಿಳಿದಿದೆ. ಇವರಿಂದ ಏನು ಕಲಿಯಬೇಕಿಲ್ಲ' ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಹೇಳಿಕೆಯೊಂದಕ್ಕೆ ಹೇಳಿಕೆ ಪ್ರತಿಕ್ರಿಯೆ ನೀಡಿ ಅವರ ಕಾಲದಲ್ಲಿ ಹತ್ತು ಹಲವಾರು ಹಿಂದೂ ಯುವಕರ ಕೊಲೆಗಳಾದವು. ಆ ಸಂಸ್ಥೆಗಳ ಮೇಲಿನ ಪ್ರಕರಣವನ್ನೇ ಹಿಂಪಡೆದರಲ್ಲಾ, ಆಗ ಅವರು ಬುದ್ದಿ ಕಳೆದುಕೊಂಡಿದ್ದರೇ ಎಂದು ಪ್ರಶ್ನಿಸಿದರು.
ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರು:
ನಮ್ಮದು ಸಂವಿಧಾನಬದ್ಧವಾಗಿ ರಚನೆಯಾಗಿರುವ ಸರ್ಕಾರ. ಕಾನೂನು ಸುವ್ಯವಸ್ಥೆ ಮತ್ತು ಸಮಾನತೆ ಎಂಬ ದೃಷ್ಟಿಕೋನದಿಂದ ಕೆಲಸ ಮಾಡುತ್ತಿದ್ದೇವೆ. ಅವರವರ ವಿಚಾರಗಳನ್ನು ಪ್ರಚಾರ ಮಾಡಿದರೆ ತೊಂದರೆ ಇಲ್ಲ. ಆದರೆ ಕಾನೂನನ್ನು ಕೈಗೆ ತೆಗೆದುಕೊಂಡಾಗ ಅಥವಾ ಹಿಂಸೆಗಿಳಿದಾಗ ಸರ್ಕಾರ ಅದನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳೂರಿನಲ್ಲಿ ಲವ್ ಜಿಹಾದ್ ಬಗ್ಗೆ ಹಿಂದೂ ಟಾಸ್ಕ್ ಫೋರ್ಸ್ ರಚಿಸಲಾಗುತ್ತಿರುವ ಬಗ್ಗೆ ಮಾತನಾಡಿ ಎಲ್ಲದ್ದಕ್ಕೂ ಕಾನೂನಿದೆ. ಮತ್ತು ಕೆಲವು ಕಾನೂನುಗಳನ್ನು ಹಿಂದಿನ ಸರ್ಕಾರಗಳೇ ಮಾಡಿವೆ. ಅವುಗಳನ್ನು ಬಿಟ್ಟು ನಾವು ಹೊಸ ಕಾನೂನು ಮಾಡುತ್ತಿಲ್ಲ. ಕಾನೂನಿನ ಪ್ರಕಾರ ನಡೆಯುವುದು, ಕಾನೂನು ರಕ್ಷಿಸುವುದು ನಮ್ಮ ಕೆಲಸ ಎಂದರು.












Click it and Unblock the Notifications