Heavy rain: ಬೆಳ್ಳಂಬೆಳಗ್ಗೆಯೇ ಉಡುಪಿ ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲು ಸಹಿತ ಭಾರೀ ಮಳೆ
Heavy rain: ರಾಜ್ಯದ ಹಲವೆಡೆ ಕಳೆದ ವಾರದಿಂದ ಮಳೆರಾಯ ಕರುಣೆ ತೋರುತ್ತಾ ಬಂದಿದ್ದಾನೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿಗೆ ಮೊನ್ನೆಯಷ್ಟೇ ಎಂಟ್ರಿ ಕೊಟ್ಟಿದ್ದು, ನಿನ್ನೆಯೂ (ಏಪ್ರಿಲ್ 19) ನಗರದ ಹಲವೆಡೆ ಜಿನುಗು ಮಳೆಯಾಗಿದೆ. ಹಾಗೆಯೇ ಇದೀಗ ಇಷ್ಟು ದಿನ ಬಿಸಿಲಿನ ಬೇಗೆಗೆ ಬೆಂದಿದ್ದ ಕೃಷ್ಣನಗರಿ ಉಡುಪಿ ಜಿಲ್ಲೆಯ ಹಲವೆಡೆ ಇಂದು (ಏಪ್ರಿಲ್ 20) ಬೆಳ್ಳಂಬೆಳಗ್ಗೆಯೇ ಗುಡುಗು, ಮಿಂಚು ಸಹಿಯ ಮಳೆ ಸುರಿದಿದೆ. ಹಾಗಾದರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಉಡುಪಿ ಜಿಲ್ಲೆಯ ಉಡುಪಿ, ಮಣಿಪಾಲ, ಮಲ್ಪೆ, ಪಡುಬಿದ್ರೆ, ಕಾಪು, ಶಿರ್ವ, ಕಾರ್ಕಳ, ಬೈಲೂರು, ಕುಂದಾಪುರ, ಬ್ರಹ್ಮಾವರ, ಬೈಂದೂರು ಸೇರಿದಂತೆ ಹಲವೆಡೆ ಇಂದು ಬೆಳ್ಳಗ್ಗೆ 2 ಗಂಟೆಗೂ ಹೆಚ್ಚು ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಾಳೆಯಾಗಿದೆ. ಇದರಿಂದ ಇಷ್ಟು ದಿನ ಬಿಸಿಲಿನ ಝಳಕ್ಕೆ ಬೇಸತ್ತಿದ ಇಲ್ಲಿನ ಜನರಿಗೆ ತುಸು ನೆಮ್ಮದಿ ಸಿಕ್ಕಂತಾಗಿದೆ.

ಕರಾವಾಳಿ ತೀರ ಅಂದರೆ ಬೇಸಿಗೆ ವೇಳೆ ಬಿಸಿಲಿನ ಝಳಕ್ಕೆ ಇಲ್ಲಿನ ಜನರು ಬೆಂದು ಹೋಗಿರುತ್ತಾರೆ. ಇನ್ನು ಇಂತಹ ಸಮಯದಲ್ಲಿ ಮಳೆ ಬಂದರೆ ಸಾಕು ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಹಾಗೆಯೇ ಇಂದು ಸುರಿದ ಮಳೆಯಿಂದಾಗಿ ಇಲ್ಲಿನ ಜನರ ಮುಖದಲ್ಲಿ ಮಂದಹಾಸ ಮೂಡಿದೆ.
ಉಡುಪಿಯ ಕೆಲವು ಭಾಗಗಳಲ್ಲಿ ಬೆಳಗ್ಗೆ 7 ಗಂಟೆಯ ನಂತರವೂ ಮಳೆ ಸುರಿದಿದೆ ಎಂದು ತಿಳಿದುಬಂದಿದೆ. ಇನ್ನು ಬಿರುಗಾಳಿ ಮಳೆ ಹಿನ್ನೆಲೆ ಹಲವೆಡೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರ ಪರಿಣಾಮ ರಾತ್ರಿ ವ್ಯತ್ಯಯಗೊಂಡಿದ್ದ ವಿದ್ಯುತ್ ಪೂರೈಕೆ ಬೆಳಗ್ಗೆವರೆಗೂ ಮುಂದುವರೆದಿದೆ. ಈಗಾಗಲೇ ನೀರಿನ ಸಂಕಷ್ಟದಲ್ಲಿದ್ದ ಹಲವು ಗ್ರಾಮ, ನಗರ ಭಾಗಕ್ಕೆ ಈ ಮುಂಗಾರು ಪೂರ್ವ ಮಳೆ ತುಸು ನೆಮ್ಮದು ತರಿಸಿದೆ ಎಂದರೆ ತಪ್ಪಾಗಲಾರದು.
ಮತ್ತೊಂದೆಡೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಶುಕ್ರವಾರ (ಏಪ್ರಿಲ್ 19) ಸಂಜೆ ವೇಳೆ ಉತ್ತಮ ಮಳೆಯಾಗಿದೆ. ಮಂಗಳೂರಿನ ಹೊರ ವಲಯ, ಸುರತ್ಕಲ್, ಹಳೆಯಂಗಡಿ ಪರಿಸರದಲ್ಲಿ ಶುಕ್ರವಾರ ಮುಂಜಾನೆ ಮತ್ತು ರಾತ್ರಿ ವೇಳೆ ಸಾಧಾರಣ ಮಳೆಯಾಗಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಭಾರೀ ಮಳೆಗೆ ಅನಾಹುತಗಳು ಸೃಷ್ಟಿ: ಕಳೆದ ಎರಡು ವಾರಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇನ್ನು ಕೆಲವೆಡೆ ಮಾತ್ರ ಮಳೆರಾಯ ಅನಾಹುತಗಳನ್ನೇ ಸೃಷ್ಟಿಸಿದ್ದಾನೆ. ಹಾಗೆಯೇ ನಿನ್ನೆಯೂ (ಏಪ್ರಿಲ್ 19) ಹಲವು ಜಿಲ್ಲೆಗಳಲ್ಲಿ ಮಳೆರಾಯ ಅನಾಹುತಗಳನ್ನು ಸೃಷ್ಟಿಸಿದ್ದಾನೆ. ಇಂತಹದ್ದೇ ಒಂದು ಘಟನೆ ದಾವಣಗೆರೆ ಜಿಲ್ಲೆಯಲ್ಲೂ ನಡೆದಿದೆ.
ನಿನ್ನೆ (ಏಪ್ರಿಲ್ 19) ಹಲವು ಜಿಲ್ಲೆಗಳಲ್ಲಿ ಮಳೆರಾಯ ತಂಪೆರೆದಿದ್ದು, ಇದರಿಂದ ರೈತರ ಮುಖದಲ್ಲಿ ತುಸು ಮಂದಹಾಸ ಮೂಡಿದಂತಾಗಿದೆ. ಮತ್ತೊಂದೆಡೆ ಕೆಲವೆಡೆ ಬಿರುಗಾಳಿ ಮಳೆಗೆ ಅನಾಹುತಗಳು ಸಂಭವಿಸಿರುವ ಘಟನೆಗಳು ಕೂಡ ನಡೆದಿವೆ.
ಜಿಲ್ಲೆಯ ಹಲವೆಡೆ ಭಾರೀ ಗಾಳಿ ಮಳೆಯಿಂದಾಗಿ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆ ಮೇಲೆ ಮರಗಳು ಬಿದ್ದ ಕಾರಣ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಭಾರೀ ಗಾಳಿಗೆ ವಿದ್ಯುತ್ ಕಂಬಗಳು ಧರಶಾಯಿಯಾದ ಕಾರಣ, ವಿದ್ಯುತ್ ಇಲ್ಲದೇ ಜನರು ಪರದಾಡುವಂತಾಗಿದೆ. ಅಲ್ಲದೆ, ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಜನರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ದಾವಣಗೆರೆ ನಗರದ ಹಲವೆಡೆ ಬಿರುಗಾಳಿ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಜಯದೇವ ವೃತ್ತದ ಪ್ರವಾಸಿ ಮಂದಿರದ ರಸ್ತೆಯಲ್ಲಿ ಮೂರು ವಿದ್ಯುತ್ ಕಂಬಗಳು ಬಿದ್ದಿದ್ದು, ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗಳಿಗೆ ಹಾನಿಯಾಗಿದೆ. ಜಯದೇವ ವೃತ್ತ, ಯಲ್ಲಮ್ಮ ನಗರ, ನಿಜಲಿಂಗಪ್ಪ ಬಡಾವಣೆ, ತರಳಬಾಳು ಬಡಾವಣೆ ಸೇರಿದಂತೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಬಿದ್ದಿವೆ.
ನಗರದ ಹಲವು ರಸ್ತೆಗಳಲ್ಲಿ ನೀರು ನಿಂತಿದ್ದ ದೃಶ್ಯವೂ ಕಂಡು ಬಂದಿದ್ದು, ಕೆಲ ನಿಮಿಷ ಸುರಿದ ಮಳೆಯಲ್ಲಿಯೇ ವಾಹನ ಸವಾರರು ಸಂಚರಿಸಿದರು. ಮಲೇಬೆನ್ನೂರು, ಜಗಳೂರಿನಲ್ಲೂ ಸಹ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದೆ.
ಸಿಡಿಲು ಬಡಿದು 25 ಮೇಕೆ ಸಾವು: ದಾವಣಗೆರೆ ತಾಲೂಕಿನ ಆನಗೋಡು ಸಮೀಪದ ಈಚಘಟ್ಟ ಗ್ರಾಮದಲ್ಲಿ ಸಿಡಿಲು ಬಡಿದು 16 ಮೇಕೆ, 9 ಗಂಡು ಮೇಕೆ ಮೃತಪಟ್ಟಿರುವ ಘಟನೆ ಗುರುವಾರ (ಏಪ್ರಿಲ್ 18) ಸಂಜೆ ನಡೆದಿದೆ.
ದಾವಣಗೆರೆ ತಾಲೂಕಿನ ಸುತ್ತಮುತ್ತ ಗುರುವಾರ ಸಂಜೆ ಭಾರೀ ಗುಡುಗು, ಮಿಂಚು, ಗಾಳಿ ಸಹಿತ ಮಳೆ ಸುರಿಯಿತು. ಈಚಘಟ್ಟ ಗ್ರಾಮದ ರೈತ ಪಾಪ್ಯಾನಾಯ್ಕ ಮತ್ತು ರೇವತಿಬಾಯಿ ಅವರಿಗೆ ಸೇರಿದ ತಮ್ಮ ಮೇಕೆಗಳನ್ನು ಮೇಯಿಸಲು ಜಮೀನಿಗೆ ತೆರಳಿದ್ದರು. ಮಳೆ ಆರಂಭವಾದಾಗ ಮೇಕೆಗಳು ಮರದ ಕೆಳಗೆ ಬಂದು ನಿಂತಿವೆ. ಈ ವೇಳೆ ಸಿಡಿಲು ಬಡಿದು 16 ಮೇಕೆ ಮತ್ತು 9 ಗಂಡು ಮೇಕೆ ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಅಂದಾಜು 5 ಲಕ್ಷ ರೂಪಾಯಿ ನಷ್ಟ ಸಂಭವಿಸಿದ್ದು, ಪಾಪ್ಯಾನಾಯ್ಕ ಅವರು ಉಳಿದ ಮೇಕೆಗಳನ್ನು ಹೊಡೆದುಕೊಂಡು ಬರಲು ಸಿಡಿಲು ಬಡಿದ ಸ್ಥಳದಿಂದ ದೂರ ಹೋಗಿದ್ದರಿಂದ ಪಾಪ್ಯಾನಾಯ್ಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಮೇಕೆಗಳನ್ನು ಕಳೆದುಕೊಂಡ ಕುಟುಂಬಕ್ಕೆ ಸಂತ್ವಾನ ಹೇಳಿದ್ದಾರೆ. ಈ ವೇಳೆ ಕಂದಾಯ ಅಧಿಕಾರಿಗಳು, ಪೊಲೀಸರು ಪರಿಶೀಲನೆ ನಡೆಸಿದರು.












Click it and Unblock the Notifications