ಉಡುಪಿ: ರಾತ್ರೋರಾತ್ರಿ ಉಕ್ಕಿ ಹರಿದ ಇಂದ್ರಾಣಿ ನದಿ, ಸಂಕಷ್ಟದಲ್ಲಿದ್ದ ಕಾರ್ಮಿಕ ಕುಟುಂಬಗಳ ರಕ್ಷಣೆ
ಉಡುಪಿ, ಜುಲೈ 06: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆ ಮುಂದುವರಿದ ಪರಿಣಾಮ ಜಿಲ್ಲೆಯ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದೆ.
ಬರದ ಛಾಯೆಯಿಂದ ಒಣಗಿದ್ದ ಕೆರೆ, ಕಾಲುವೆ, ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಉಡುಪಿ ಕೊಡಂಕೂರು ಭಾಗದಲ್ಲಿ ಹರಿಯುವ ಇಂದ್ರಾಣಿ ನದಿ ನಿನ್ನೆ ತಡರಾತ್ರಿಯಿಂದ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿದ್ದ ಕಾರ್ಮಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಂದ್ರಾಣಿ ನದಿ ಮರ ಗಿಡಗಳನ್ನೆಲ್ಲಾ ಕೊಚ್ಚಿಕೊಂಡು ಹೋಗಿದ್ದು, ಹಲವು ಮನೆಗಳು ನಡುಗಡ್ಡೆಯಾಗಿವೆ. ಕೂಡಲೇ ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಶೆಡ್‌ನಲ್ಲಿದ್ದ ಐದು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯರು ಕೂಡ ಸಾಥ್ ನೀಡಿದ್ದಾರೆ.
ಉಡುಪಿ ಜಿಲ್ಲಾ ಶಾಲಾ-ಕಾಲೇಜುಗಳಿಗೆ ರಜೆ
ಉಡುಪಿ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆಯಾಗಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಉಡುಪಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಜುಲೈ6ರ ಗುರುವಾರ ರಜೆ ನೀಡಿ ಉಡುಪಿ ಡಿಸಿ ಕೂರ್ಮಾರಾವ್ ಆದೇಶಿಸಿದ್ದಾರೆ.
ಅಬ್ಬರಿಸಿದ ವರುಣ: ಈವರೆಗೂ ಮೂರು ಸಾವು
ಉಡುಪಿ ಜಿಲ್ಲೆಯಲ್ಲಿ ಈವರೆಗೂ ಮಳೆಗೆ ಮೂರು ಸಾವು ಸಂಭವಿಸಿರುವುದು ಬೆಳಕಿಗೆ ಬಂದಿದೆ. ಭಾರೀ ಮಳೆಗೆ ಉಕ್ಕಿ ಹರಿಯುತ್ತಿರುವ ಕುಬ್ಜಾ ನದಿಯಲ್ಲಿ ಮುಳುಗಿ ದೇವಾಲಯದ ಅರ್ಚಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿ ನಡೆದಿದೆ. ಪ್ರಸಿದ್ಧ ದೇವಾಲಯ ಕಮಲಶಿಲೆ ಅರ್ಚಕ ಶೇಷಾದ್ರಿ ಐತಾಳ್ ( 75) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿ ಕೂಡ ಮಳೆಯ ಅವಾಂತರದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ದಿವಾಕರ್ ಶೆಟ್ಟಿ ಮೃತ ದುರ್ದೈವಿ. ಮಂಗಳವಾರ ತಡರಾತ್ರಿ ಹೋಟೆಲ್ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಬೈಕ್ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು, ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞ ಈಶ್ವರಮಲ್ಪೆ ಮೃತದೇಹ ಮೇಲೆತ್ತುವ ಕಾರ್ಯಾಚರಣೆ ನಡೆಸಿದ್ದರು. ಇನ್ನು ಬೀಡಿನಗುಡ್ಡೆಯ ನಾಗಬನದ ಬಳಿ ಹಳ್ಳಕ್ಕೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು.












Click it and Unblock the Notifications