ಪಡಿತರ ಅಂಗಡಿ ಸಮಯ ವಿಸ್ತರಣೆ: ಆಹಾರ ಸಚಿವ
ಉಡುಪಿ, ಮಾರ್ಚ್ 01: ಪಡಿತರ ಚೀಟಿಗಳ ಇ-ಕೆವೈಸಿ ಪ್ರಕ್ರಿಯೆಗಳಿಗೆ ಸರ್ವರ್ ಸಮಸ್ಯೆಯಿಂದ ತೊಡಕಾಗಿದ್ದು, ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮುಂದಿನ ಎರಡು ತಿಂಗಳು ಪಡಿತರ ಅಂಗಡಿಗಳು ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಇ-ಕೆವೈಸಿ ನೋಂದಣಿ ಸದ್ಯ ರಾಜ್ಯದಲ್ಲಿ ಶೇ.40 ಪ್ರಗತಿ ಸಾಧಿಸಿದ್ದು, ಮುಂದಿನ ಎರಡು ತಿಂಗಳಲ್ಲಿ ಹೆಚ್ಚವರಿ ಅವಧಿ ಕೈಗೊಂಡು ಶೇ. 100 ಪ್ರಗತಿ ಸಾಧಿಸಲು ಜಿಲ್ಲಾಧಿಕಾರಿಗಳ ಮೂಲಕ ಸುತ್ತೋಲೆ ಹೊರಡಿಸಲಾಗುವುದು ಎಂದರು.
ಇ-ಕೆವೈಸಿ ಪ್ರಕ್ರಿಯೆ, ಪಡಿತರ ವಿತರಣೆಗೆ ಸಂಬಂಧಿಸಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಬೇಕು, ರಜಾದಿನ ಹೊರತುಪಡಿಸಿ ಪ್ರತಿದಿನವೂ ತೆರೆದಿರಬೇಕು ಎಂದು ಸೂಚಿಸಿದರು.

ಅನರ್ಹರು ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಇನ್ನೆರಡು ತಿಂಗಳು ಕಾಲಾವಕಾಶ ನೀಡಲಾಗಿದ್ದು, ಸರ್ಕಾರವೇ ಪತ್ತೆ ಮಾಡಿ ವಾಪಸ್ ಪಡೆದರೆ ದುಬಾರಿ ದಂಡ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.
ಮಂಗಳೂರಿನ ಕುಟುಂಬವೊಂದು 96 ಸಾವಿರ ರುಪಾಯಿ ಪಾವತಿಸಿದೆ. ರಾಜ್ಯಾದ್ಯಂತ ಈವರೆಗೆ 96 ಲಕ್ಷ ರುಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.












Click it and Unblock the Notifications