Vande Bharat; ಮುಂಬೈ-ಗೋವಾ ರೈಲು ಉಡುಪಿ, ಮಂಗಳೂರಿಗೆ ವಿಸ್ತರಿಸಿ
ಉಡುಪಿ, ಜೂನ್ 06: ಭಾರತೀಯ ರೈಲ್ವೆಯ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್. ದೇಶದಲ್ಲಿ ಈಗ ಈ ರೈಲು ಸೇವೆಗೆ ಭಾರೀ ಬೇಡಿಕೆ ಇದೆ. ವಿವಿಧ ರಾಜ್ಯಗಳು, ಹಲವು ಮಾರ್ಗದಲ್ಲಿ ಈ ರೈಲು ಓಡಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವಾಲಯದ ಮುಂದೆ ಬೇಡಿಕೆ ಇಡುತ್ತಿವೆ. ಕರ್ನಾಟಕದಲ್ಲಿ ಸದ್ಯ ಮೈಸೂರು ಮತ್ತು ಪುರಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ರೈಲು ಬೆಂಗಳೂರು ಮೂಲಕ ಸಂಚಾರ ನಡೆಸುತ್ತಿದೆ.
ಭಾರತೀಯ ರೈಲ್ವೆ ಮುಂಬೈ ಮತ್ತು ಗೋವಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಿಸುವುದಾಗಿ ಘೋಷಣೆ ಮಾಡಿದೆ. ಈ ರೈಲಿಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮ ಜೂನ್ 3ರಂದು ನಿಗದಿಯಾಗಿತ್ತು. ಆದರೆ ಒಡಿಶಾದ ಬಾಲಸೋರ್ ರೈಲು ಅಪಘಾತದ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಈ ಮುಂಬೈ-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಉಡುಪಿ, ಮಂಗಳೂರಿಗೆ ವಿಸ್ತರಿಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ ಮಾಡಲಾಗಿದೆ. ಸಚಿವರ ಮೂಲಕ ಮನವಿಯನ್ನು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌ಗೆ ಸಲ್ಲಿಕೆ ಮಾಡಲಾಗಿದೆ.
ಉಡುಪಿ ಶಾಸಕರ ಮನವಿ; ಉಡುಪಿಯ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಸಚಿವೆ ಶೋಭಾ ಕರಂದ್ಲಾಜೆಗೆ ಈ ಕುರಿತು ಮನವಿ ಮಾಡಿದ್ದಾರೆ. ಶೀಘ್ರವೇ ಗೋವಾ-ಮುಂಬೈ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಗೊಳ್ಳಲಿದ್ದು ಇದನ್ನು ಮಂಗಳೂರಿನ ತನಕ ವಿಸ್ತರಿಸಿದಲ್ಲಿ ಉಡುಪಿ ಹಾಗೂ ಮಂಗಳೂರಿನ ಪ್ರಯಾಣಿಕರಿಗೆ ಇದರ ಪ್ರಯೋಜನ ಲಭಿಸಲಿದೆ ಎಂದು ಹೇಳಿದ್ದಾರೆ.
ಕಾರವಾರ-ತಿರುಪತಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ವಯಾ ಬೆಂಗಳೂರು ಹೊಸದಾಗಿ ಆರಂಭ ಮಾಡಿದಲ್ಲಿ ಕರಾವಳಿ ಜಿಲ್ಲೆಗಳ ಹೆಚ್ಚಿನ ಉದ್ಯಮಗಳಿಗೆ ಹಾಗೂ ಮೀನುಗಾರರಿಗೆ, ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದು ಶಾಸಕರು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಡಿಸೆಂಬರ್ ತಿಂಗಳಿನಿಂದ ಜನವರಿ ಅಂತ್ಯದ ತನಕ ಉಡುಪಿ-ಮಂಗಳೂರಿನಿಂದ ತೆರಳುವ ಶಬರಿಮಲೆ ಯಾತ್ರಾರ್ಥಿಗಳಿಗೆ ವಿಶೇಷ ರೈಲಿನ ವ್ಯವಸ್ಥೆ ಮಾಡುವಂತೆಯೂ ಶಾಸಕರ ರೈಲ್ವೆ ಸಚಿವರಿಗೆ ಶೋಭಾ ಕರಂದ್ಲಾಜೆ ಮೂಲಕ ಮನವಿ ಮಾಡಿದ್ದಾರೆ.
ಶಾಸಕ ಯಶ್ ಪಾಲ್ ಸುವರ್ಣ ಮನವಿಯನ್ನು ಸ್ವೀಕರಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿಯನ್ನು ಕೇಂದ್ರ ರೈಲ್ವೆ ಸಚಿವರಿಗೆ ತಲುಪಿಸುವುದಾಗಿ ಮತ್ತು ಸೂಕ್ತ ಕ್ರಮಕ್ಕೆ ಒತ್ತಾಯಿಸುವುದಾಗಿಯೂ ಭರವಸೆ ನೀಡಿದ್ದಾರೆ.
ಒಂದೇ ಒಂದು ರೈಲು; ಸದ್ಯ ಕರ್ನಾಟಕದಲ್ಲಿ ಒಂದೇ ಒಂದು ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ 2022ರ ನವೆಂಬರ್‌ನಲ್ಲಿ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಮೈಸೂರು ಮತ್ತು ಪುರಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ರೈಲು ಸೇವೆಗೆ ಚಾಲನೆ ನೀಡಿದರು. ಈ ರೈಲು ಬೆಂಗಳೂರು ಮೂಲಕ ಸಂಚಾರ ನಡೆಸುತ್ತದೆ.
ಭಾರತೀಯ ರೈಲ್ವೆ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲು ಸೇವೆಗೆ ಒಪ್ಪಿಗೆ ನೀಡಿದೆ. ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ರೈಲು ಸಂಚಾರ ನಡೆಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಜುಲೈನಲ್ಲಿ ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಕೇರಳದಲ್ಲಿ ಸಂಚಾರ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ತನಕ ವಿಸ್ತರಣೆ ಮಾಡಬೇಕು. ಮಂಗಳೂರು-ಮೈಸೂರು ನಡುವೆ ಹೊಸ ರೈಲು ಆರಂಭಿಸಬೇಕು. ಬೆಂಗಳೂರು-ಮಂಗಳೂರು ನಡುವೆ ಹೊಸ ವಂದೇ ಭಾರತ್ ರೈಲು ಓಡಿಸಬೇಕು ಎಂಬ ಮನವಿಯನ್ನು ಸಹ ರೈಲ್ವೆ ಇಲಾಖೆಗೆ ಸಲ್ಲಿಕೆ ಮಾಡಲಾಗಿದೆ.
ಮತ್ತೊಂದು ಕಡೆ ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ಬೆಳಗಾವಿ ತನಕ ವಂದೇ ಭಾರತ್ ರೈಲು ಸಂಚಾರ ನಡೆಸಬೇಕು ಎಂಬ ಬೇಡಿಕೆಯೂ ಇದೆ. ಮುಂದಿನ ದಿನಗಳಲ್ಲಿ ಬೆಂಗಳೂರು-ಹೈದರಾಬಾದ್ ನಡುವೆ ಈ ರೈಲು ಓಡಿಸುವ ಚಿಂತನೆಯೂ ಇಲಾಖೆಯ ಮುಂದಿದೆ.
2023ರ ಆಗಸ್ಟ್ ವೇಳೆಗೆ ದೇಶದಲ್ಲಿ 75 ವಂದೇ ಭಾರತ್ ರೈಲುಗಳ ಸಂಚಾರ ನಡೆಸಬೇಕು ಎಂಬುದು ಕೇಂದ್ರ ಸರ್ಕಾರದ ಘೋಷಣೆಯಾಗಿತ್ತು. ಆದರೆ ದೇಶದಲ್ಲಿ ಸದ್ಯ ಸಂಚಾರ ನಡೆಸುತ್ತಿರುವ ರೈಲುಗಳ ಸಂಖ್ಯೆ 18.












Click it and Unblock the Notifications